Connect with us

Latest

ಎಐಸಿಸಿ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಆಯ್ಕೆ: ಯುವರಾಜನ ಮುಂದಿರುವ ಸವಾಲು ಏನು?

Published

on

ನವದೆಹಲಿ: ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾಗಿ ಆಯ್ಕೆ ಆಗಿದ್ದು, ಡಿಸೆಂಬರ್ 16 ರಂದು ಅಧಿಕಾರ ಸ್ವೀಕರಿಸಲಿದ್ದಾರೆ.

ಡಿಸೆಂಬರ್ 4 ರಂದು ಅಧ್ಯಕ್ಷ ಸ್ಥಾನದ ಚುನಾವಣೆಗೆ ರಾಹುಲ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆ ಆಗಲಿದ್ದಾರೆ ಎನ್ನುವ ವಿಚಾರ ಅಂದೇ ಪ್ರಕಟವಾಗಿತ್ತು. ಆದರೆ ಇಂದು ಅಧಿಕೃತವಾಗಿ ಪ್ರಕಟವಾಗಿದೆ. ವಿಶೇಷ ಏನೆಂದರೆ ಗುಜರಾತ್ ಫಲಿತಾಂಶ ಪ್ರಕಟವಾಗುವ ಎರಡು ದಿನ ಮೊದಲು ರಾಹುಲ್ ಗಾಂಧಿ ಕಾಂಗ್ರೆಸ್ ಚುಕ್ಕಾಣಿ ಹಿಡಿಯಲಿದ್ದಾರೆ.

ಸೋಮವಾರ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ಆಂತರಿಕ ಚುನಾವಣಾ ಅಧಿಕಾರಿ ಮುಲ್ಲಪಳ್ಳಿ ರಾಮಚಂದ್ರನ್ ರಾಹುಲ್ ಅವಿರೋಧ ಆಯ್ಕೆ ಯನ್ನು ಖಚಿತ ಪಡಿಸಿದರು. ರಾಹುಲ್ ಗಾಂಧಿ ಅಧ್ಯಕ್ಷರಾದ ಸುದ್ದಿ ಕೇಳುತ್ತಿದ್ದಂತೆ ದೆಹಲಿಯಲ್ಲಿರುವ ಕಾಂಗ್ರೆಸ್ ಕಚೇರಿ ಮುಂದೆ ದೌಡಾಯಿಸಿದ ಸಾವಿರಾರು ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು. ಪರಸ್ಪರ ಸಿಹಿ ಹಂಚಿ, ಪಟಾಕಿ ಸಿಡಿಸಿ ನೃತ್ಯ ಮಾಡುವ ಮೂಲಕ ರಾಹುಲ್ ಗಾಂಧಿ ಆಯ್ಕೆಯನ್ನು ಸ್ವಾಗತಿಸಿದರು.

ರಾಹುಲ್ ಗಾಂಧಿ ನೆಹರೂ-ಗಾಂಧಿ ಕುಟುಂಬದಲ್ಲಿ ಅಧ್ಯಕ್ಷ ಹುದ್ದೆಯನ್ನು ಅಲಂಕರಿಸಿರುವ 6ನೇ ನಾಯಕರಾಗಿದ್ದು, ಸುದೀರ್ಘ ಅವಧಿ ವರೆಗೆ ಕಾಂಗ್ರೆಸ್ ಆಧ್ಯಕ್ಷರೆಂಬ ಹೆಗ್ಗಳಿಕೆ ಪಡೆದಿರುವ ಸೋನಿಯಾ ಗಾಂಧಿ ಡಿಸೆಂಬರ್ 16ರಂದು ಪುತ್ರ ರಾಹುಲ್ ಗಾಂಧಿಗೆ ಅಧಿಕಾರ ಹಸ್ತಾಂತರ ಮಾಡಲಿದ್ದಾರೆ.

ರಾಹುಲ್ ಮುಂದಿರುವ ಸವಾಲು ಏನು?
2014 ಲೋಕಸಭೆ ಚುನಾವಣೆಯ ಬಳಿಕ 2017ರಲ್ಲಿ ಪಂಜಾಬ್ ರಾಜ್ಯದ ಚುನಾವಣೆ ಬಿಟ್ಟರೆ ಕಳೆದ 4 ವರ್ಷಗಳಲ್ಲಿ ಹಲವು ರಾಜ್ಯಗಳನ್ನು ಕಳೆದುಕೊಂಡಿದೆ. ಇತಿಹಾಸದಲ್ಲಿ ಅತಿ ಕಡಿಮೆ ಕೇವಲ 44 ಸ್ಥಾನಗಳನ್ನು ಗೆದ್ದ ಕಾಂಗ್ರೆಸ್‍ಗೆ ಲೋಕಸಭೆ ಪ್ರತಿಪಕ್ಷದ ನಾಯಕ ಪಟ್ಟವೂ ಸಿಕ್ಕಿಲ್ಲ. ಅಸ್ಸಾಂ, ಮಣಿಪುರ, ಹರ್ಯಾಣ, ಜಾರ್ಖಂಡ್‍ನಲ್ಲೂ ಕಮಲ ಅರಳಿದೆ. ಮೋದಿ ಮತ್ತು ಅಮಿತ್ ಶಾ ಕಾಂಗ್ರೆಸ್ ಮುಕ್ತ ಭಾರತ ನಿರ್ಮಿಸುತ್ತೇವೆ ಎಂದು ಘಂಟಾಘೋಷವಾಗಿ ಹೇಳಿದ್ದು ಮಾತ್ರವಲ್ಲದೇ ತಮ್ಮ ಕಾರ್ಯತಂತ್ರದ ಮೂಲಕ ಕೈ ಸೋಲಿಸುತ್ತಿದ್ದಾರೆ. ಈ ನಡುವೆ ಈಗ ಗುಜರಾತ್ ಚುನಾವಣೆ ನಡೆಯುತ್ತಿದ್ದು ನಂತರ ಕರ್ನಾಟಕ ಚುನಾವಣೆ ನಡೆಯಲಿದೆ. ಮೋದಿ ಅಲೆಯ ಮುಂದೆ ದೊಡ್ಡ ದೊಡ್ಡ ರಾಜ್ಯಗಳಾದ ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ನೆಲಕಚ್ಚಿದೆ. ದೊಡ್ಡ ದೊಡ್ಡ ನಾಯಕರು ಕಾಂಗ್ರೆಸ್ ಗುಡ್ ಬೈ ಹೇಳಿ ಬಿಜೆಪಿ ಸೇರುತ್ತಿದ್ದಾರೆ. ಹೀಗಾಗಿ ಅಧ್ಯಕ್ಷರಾದ ಬಳಿಕ ಮರಳಿ ಪಕ್ಷವನ್ನು ಸಂಘಟಿಸುವ ದೊಡ್ಡ ಜವಾಬ್ದಾರಿ ರಾಹುಲ್ ಗಾಂಧಿ ಮೇಲಿದೆ.

Click to comment

Leave a Reply

Your email address will not be published. Required fields are marked *