ಕಳೆದ 10 ವರ್ಷಗಳಲ್ಲಿ ಭಾರತ ಅದ್ಭುತವಾದ ಅಭಿವೃದ್ಧಿ ಸಾಧಿಸಿದೆ ಎಂದು ನರೇಂದ್ರ ಮೋದಿ ಅವರನ್ನು ಹಾಡಿಹೊಗಳಿದ್ದ ನಟಿ ರಶ್ಮಿಕಾ ಮಂದಣ್ಣಗೆ (Rashmika Mandanna) ನಟ ಚೇತನ್ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ:ಸಿದ್ಧಾಂತ್ ಚತುರ್ವೇದಿ ಜೊತೆ ‘ಸೀತಾರಾಮಂ’ ನಟಿ ಡೇಟಿಂಗ್
ರಶ್ಮಿಕಾ ಮಂದಣ್ಣ ಹೇಳಿಕೆ ಇರುವ ಸುದ್ದಿಯ ಸ್ಕ್ರೀನ್‌ಶಾಟ್ ಹಂಚಿಕೊಂಡು ಚೇತನ್ ವಾಗ್ದಾಳಿ ನಡೆಸಿದ್ದಾರೆ. ಕಳೆದ 10 ವರ್ಷಗಳಲ್ಲಿ, ‘ಭಾರತದ ಆದಾಯ ಅಸಮಾನತೆ ಗಗನಕ್ಕೇರಿದೆ ಮತ್ತು ಪ್ರಜಾಪ್ರಭುತ್ವದ ಸ್ವಾತಂತ್ರ‍್ಯಗಳು ದಾಳಿಗೆ ಒಳಗಾಗಿವೆ. ಯಾವುದೇ ಮೂರ್ಖ ಪಕ್ಷವು ಕಾಂಕ್ರೀಟ್ ಸುರಿಯಬಹುದು ಮತ್ತು ಮೂಲ ಸೌಕರ್ಯಗಳನ್ನು ನಿರ್ಮಿಸಬಹುದು. ಸಮಾಜವನ್ನು ಸುಸ್ಥಿರವಾಗಿ ಮತ್ತು ಸಮಾನವಾಗಿ ಅಭಿವೃದ್ಧಿಪಡಿಸಲು ನಿಜವಾದ ಒಳನೋಟದ ಅಗತ್ಯವಿದೆ. ಸೆಲೆಬ್ರಿಟಿಗಳ ಅಜ್ಞಾನವು ಸವಲತ್ತುಗಳ ‘ಫ್ರೀಕಿಂಗ್ ಬ್ರಿಲಿಯಂಟ್’ ರೂಪವಾಗಿದೆ’ ಎಂದು ಚೇತನ್ (Actor Chethan Ahimsa) ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ರಶ್ಮಿಕಾ ಹೇಳಿದ್ದೇನು?
ಇದೇ ಜನವರಿ ತಿಂಗಳಲ್ಲಿ ಪ್ರಧಾನಿ ಮೋದಿಯವರಿಂದ ಉದ್ಘಾಟನೆಗೊಂಡ ಅಟಲ್ ಸೇತು ಬಗ್ಗೆ ಹಾಗೂ ಒಟ್ಟಾರೆ ದೇಶದ ಮೂಲಸೌಕರ್ಯ ಅಭಿವೃದ್ಧಿಯಾಗುತ್ತಿರುವ ಬಗ್ಗೆ ರಶ್ಮಿಕಾ ಹೆಮ್ಮೆಯಿಂದ ಮಾತನಾಡಿದ್ದರು. ನವಿ ಮುಂಬೈನಿಂದ ಮುಂಬೈಗೆ ಪ್ರಯಾಣಿಸಲು ಎರಡು ಗಂಟೆ ಹಿಡಿಯುತ್ತಿತ್ತು, ಈಗ 20 ನಿಮಿಷಗಳಲ್ಲಿ ಪ್ರಯಾಣಿಸಬಹುದು. ಅಸಾಧ್ಯವಾಗಿರೋದನ್ನು ಸಾಧಿಸಿ ತೋರಿಸಿದ್ದಾರೆ. ಗೋವಾದಿಂದ ಮುಂಬೈ, ಬೆಂಗಳೂರಿನಿಂದ ಮುಂಬೈ ರಸ್ತೆ ಹೀಗೆ ಪ್ರಯಾಣಿಸುವುದನ್ನು ಸುಲಭ ಮಾಡಿದ್ದಾರೆ. ಭಾರತ ಅಭಿವೃದ್ಧಿಯಾಗುತ್ತಿರುವ ರೀತಿ ನೋಡಿದರೆ ಹೆಮ್ಮೆ ಎನಿಸುತ್ತದೆ ಎಂದು ರಶ್ಮಿಕಾ ಮಂದಣ್ಣ ಮಾತನಾಡಿದ್ದರು.
ಭಾರತ ಈಗ ವೇಗವಾಗಿ ಸಾಗುತ್ತಿದೆ. ಎಲ್ಲೂ ನಿಲ್ಲುತ್ತಿಲ್ಲ. ಕಳೆದ 10 ವರ್ಷಗಳಲ್ಲಿ ಭಾರತ ಅದ್ಭುತವಾದ ಅಭಿವೃದ್ಧಿಯನ್ನು ಸಾಧಿಸಿದೆ. ಪ್ರಗತಿ ಎಂಬುದು ಬಹಳ ವೇಗವಾಗಿ ಆಗುತ್ತಿದೆ. ಈ ಅಟಲ್ ಸೇತು ಕೇವಲ ಏಳು ವರ್ಷಗಳಲ್ಲಿ ಮುಗಿದಿದೆಯಂತೆ. ಹೊಸ ಭಾರತ ಉದಯವಾಗುತ್ತಿದೆ. ಭಾರತ ವಿಶ್ವದ ಬುದ್ಧಿವಂತ ದೇಶ ಎಂದು ಹೇಳಲು ಬಯಸುತ್ತೇನೆ. ಭಾರತದ ಯುವಕರು ಜವಾಬ್ದಾರಿಯುತವಾಗಿ ಮತ ಹಾಕಬೇಕು. ನಮ್ಮ ದೇಶ ಸಾಧಿಸುತ್ತಿರುವ ಪ್ರಗತಿ ನಿಲ್ಲಬಾರದು. ಹಾಗಾಗಿ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡು ಮತ ಹಾಕಬೇಕು ಎಂದು ನಟಿ ಮಾತನಾಡಿದ್ದರು. ಈ ಮೂಲಕ ನರೇಂದ್ರ ಮೋದಿ ಅವರ ಸಾಧನೆಯನ್ನು ನಟಿ ಕೊಂಡಾಡಿದ್ದರು.
ಪುಷ್ಪ, ಅನಿಮಲ್ ಸಕ್ಸಸ್ ನಂತರ ರಶ್ಮಿಕಾ ಮಂದಣ್ಣಗೆ ಬೇಡಿಕೆ ಹೆಚ್ಚಾಗಿದೆ. ಸಲ್ಮಾನ್ ಖಾನ್ ಜೊತೆ ಸಿಖಂದರ್, ಧನುಷ್ ಜೊತೆ ಕುಬೇರ, ಪುಷ್ಪ 2, ಅನಿಮಲ್ ಪಾರ್ಕ್, ಚಾವಾ, ರೈನ್‌ಬೋ, ದಿ ಗರ್ಲ್‌ಫ್ರೆಂಡ್ ಸಿನಿಮಾಗಳು ರಶ್ಮಿಕಾ ಕೈಯಲ್ಲಿವೆ.