ಭಾರತದಲ್ಲಿ ನದಿಗಳ ನೀರಿನ ಹಂಚಿಕೆ ವಿಚಾರ ಹಲವು ದಶಕಗಳಿಂದ ರಾಜ್ಯಗಳ ನಡುವಿನ ರಾಜಕೀಯ ಮತ್ತು ಕಾನೂನು ಸಂಘರ್ಷಗಳಿಗೆ ಕಾರಣವಾಗುತ್ತಿದೆ. ಇದೀಗ ಪಂಜಾಬ್ ಸರ್ಕಾರದ 2,300 ಕೋಟಿ ರೂ. ವೆಚ್ಚದ ʼಮಾಳ್ವಾ ಕಾಲುವೆ ಯೋಜನೆʼ (Malwa Canal Project) ಮತ್ತೊಮ್ಮೆ ಪಂಜಾಬ್ (Punjab) ಮತ್ತು ಹರಿಯಾಣ (Haryana) ರಾಜ್ಯಗಳ ನಡುವೆ ಹೊಸ ವಿವಾದಕ್ಕೆ ಕಾರಣವಾಗಿದೆ.
ನೀರಿನ ಕೊರತೆಯನ್ನು ಎದುರಿಸುತ್ತಿರುವ ಪಂಜಾಬ್‌ನ ಮಾಳ್ವಾ ಪ್ರದೇಶಕ್ಕೆ ಜೀವನಾಡಿಯಾಗಲಿದೆ ಎಂದು ಹೇಳಲಾಗುತ್ತಿರುವ ಈ ಯೋಜನೆ, ಈಗ ಉತ್ತರ ಭಾರತದ ಪ್ರಮುಖ ರಾಜಕೀಯ ಚರ್ಚೆಯ ವಿಷಯವಾಗಿದೆ. ಹಾಗಿದ್ರೆ ಏನಿದು ಮಾಳ್ವಾ ಕಾಲುವೆ ಯೋಜನೆ? ಪಂಜಾಬ್ ಮತ್ತು ಹರಿಯಾಣ ನಡುವೆ ಕಿತ್ತಾಟ ಏಕೆ? ಈ ಕಾಲುವೆಯಿಂದ ಆಗುವ ಪ್ರಯೋಜನಗಳೇನು ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.
ಏನಿದು ಮಾಳ್ವಾ ಕಾಲುವೆ ಯೋಜನೆ?
ಮಾಳ್ವಾ ಕಾಲುವೆ ಯೋಜನೆ ಪಂಜಾಬ್ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷಿ ನೀರಾವರಿ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯ ಮೂಲಕ ದಕ್ಷಿಣ ಪಂಜಾಬ್‌ನ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಕಾಲುವೆ ನೀರನ್ನು ಒದಗಿಸಿ ಭೂಗರ್ಭ ಜಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ. ಯೋಜನೆಯ ಒಟ್ಟು ವೆಚ್ಚ ಸುಮಾರು 2,300 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
150 ಕಿ.ಮೀ ಉದ್ದದ ಕಾಲುವೆ:
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು 2024ರಲ್ಲಿ ಈ ಯೋಜನೆಯನ್ನು ಘೋಷಿಸಿದ್ದರು. ಸ್ವಾತಂತ್ರ್ಯಾನಂತರ ಪಂಜಾಬ್‌ನಲ್ಲಿ ನಿರ್ಮಾಣವಾಗಲಿರುವ ಮೊದಲ ದೊಡ್ಡ ಹೊಸ ಕಾಲುವೆ ಯೋಜನೆ ಎಂಬ ಹೆಗ್ಗಳಿಕೆಯನ್ನು ಇದು ಪಡೆದಿದೆ. ಸುಮಾರು 150 ಕಿಲೋಮೀಟರ್ ಉದ್ದದ ಈ ಕಾಲುವೆ ಲಕ್ಷಾಂತರ ಎಕರೆ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸುವ ಗುರಿ ಹೊಂದಿದೆ.
ಪ್ರಸ್ತಾವಿತ ಮಾಳ್ವಾ ಕಾಲುವೆ ಹರಿಕೆ ಹೆಡ್‌ವರ್ಕ್ಸ್‌ನಿಂದ ಆರಂಭವಾಗಿ ರಾಜಸ್ಥಾನ ಫೀಡರ್ ಮತ್ತು ಸಿರ್ಹಿಂದ್ ಫೀಡರ್ ಕಾಲುವೆಗಳ ಪಕ್ಕದಲ್ಲಿ ಸಾಗಲಿದೆ. ಸುಮಾರು 86 ಸಾವಿರ ಹೆಕ್ಟೇರ್‌ಗಿಂತ ಹೆಚ್ಚಿನ ಕೃಷಿಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ನಿರೀಕ್ಷೆಯಿದೆ.
ಪಂಜಾಬ್‌ಗೆ ಈ ಯೋಜನೆ ಏಕೆ ಮುಖ್ಯ?
ಪಂಜಾಬ್‌ನ ಮಾಳ್ವಾ ಪ್ರದೇಶವು ಹಲವು ವರ್ಷಗಳಿಂದ ನೀರಿನ ಕೊರತೆಯನ್ನು ಎದುರಿಸುತ್ತಿದೆ. ರೈತರು ಹೆಚ್ಚಾಗಿ ಕೊಳವೆಬಾವಿ ಮತ್ತು ಬೋರ್‌ವೆಲ್‌ಗಳ ಮೇಲೆ ಅವಲಂಬಿತರಾಗಿರುವುದರಿಂದ ಭೂಗರ್ಭ ಜಲಮಟ್ಟ ಅಪಾಯಕಾರಿಯಾಗಿ ಕುಸಿದಿದೆ. ಇದರಿಂದ ಕೃಷಿ ವೆಚ್ಚ ಹೆಚ್ಚಾಗಿದ್ದು, ಭವಿಷ್ಯದಲ್ಲಿ ನೀರಿನ ಅಭಾವದ ಭೀತಿ ಹೆಚ್ಚುತ್ತಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ಮಾಳ್ವಾ ಕಾಲುವೆ ಯೋಜನೆಯನ್ನು ಸರ್ಕಾರ ಮುಂದಿಟ್ಟಿದೆ.
ಪ್ರಸ್ತುತ ಸಿರ್ಹಿಂದ್ ಫೀಡರ್ ಪ್ರದೇಶದಲ್ಲಿ 300ಕ್ಕೂ ಹೆಚ್ಚು ಲಿಫ್ಟ್ ಪಂಪ್‌ಗಳ ಮೂಲಕ ರೈತರು ನೀರನ್ನು ಎತ್ತಿ ಬಳಕೆ ಮಾಡುತ್ತಿದ್ದಾರೆ. ಈ ವ್ಯವಸ್ಥೆ ದುಬಾರಿ ಹಾಗೂ ಅಸಮರ್ಥವಾಗಿದ್ದು, ಕೆಲವು ಪ್ರದೇಶಗಳಲ್ಲಿ ನೀರಿನ ಕೊರತೆಯನ್ನು ಉಂಟುಮಾಡಿದೆ. ಹೊಸ ಕಾಲುವೆ ನಿರ್ಮಾಣವಾದರೆ ಈ ಸಮಸ್ಯೆ ಬಹುತೇಕ ನಿವಾರಣೆಯಾಗಲಿದೆ ಎಂದು ಪಂಜಾಬ್ ಸರ್ಕಾರ ಹೇಳುತ್ತಿದೆ.
ಹರಿಯಾಣ ವಿರೋಧ ಏಕೆ?
ಹರಿಯಾಣ ಸರ್ಕಾರ ಈ ಯೋಜನೆ ಕುರಿತು ಹಲವು ಪ್ರಶ್ನೆಗಳನ್ನು ಎತ್ತಿದೆ. ವಿಶೇಷವಾಗಿ ಈ ಕಾಲುವೆಗೆ ಬೇಕಾಗುವ ನೀರಿನ ಮೂಲ ಯಾವುದು ಎಂಬ ಪ್ರಶ್ನೆ ಪ್ರಮುಖವಾಗಿದೆ. ಪಂಜಾಬ್ ಬಳಸಲಿರುವ ನೀರು ಅಂತರ್‌ರಾಜ್ಯ ನದಿ ನೀರಿನ ಹಂಚಿಕೆಗೆ ಸಂಬಂಧಿಸಿದ ವಿಷಯವಾಗಿರುವುದರಿಂದ ಹರಿಯಾಣವು ಸಮಗ್ರ ಯೋಜನಾ ವರದಿ (DPR) ನೀಡುವಂತೆ ಒತ್ತಾಯಿಸಿದೆ.
ಈ ವಿಚಾರ ಇತ್ತೀಚೆಗೆ ಉತ್ತರ ವಲಯ ಮಂಡಳಿಯ ಸ್ಥಾಯಿ ಸಮಿತಿ ಸಭೆಯಲ್ಲಿಯೂ ಚರ್ಚೆಗೆ ಬಂದಿದೆ. ಸಭೆಯಲ್ಲಿ ಹರಿಯಾಣ ಅಧಿಕಾರಿಗಳು ಯೋಜನೆಯ ಸಂಪೂರ್ಣ ತಾಂತ್ರಿಕ ವಿವರಗಳನ್ನು ನೀಡದೆ ಮುಂದುವರಿಯುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು. ಇದರಿಂದ ಎರಡೂ ರಾಜ್ಯಗಳ ನಡುವೆ ಮತ್ತಷ್ಟು ಭಿನ್ನಾಭಿಪ್ರಾಯಗಳು ಬಹಿರಂಗಗೊಂಡಿವೆ.
ವಿವಾದ ತೀವ್ರಗೊಂಡ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿದೆ. ಎರಡೂ ರಾಜ್ಯಗಳು ಪರಸ್ಪರ ಚರ್ಚೆ ನಡೆಸಿ ಒಂದು ತಿಂಗಳೊಳಗೆ ಪರಿಹಾರ ಕಂಡುಕೊಳ್ಳುವಂತೆ ಸೂಚಿಸಲಾಗಿದೆ. ಈ ಬೆಳವಣಿಗೆ ಯೋಜನೆಯ ಮಹತ್ವ ಮತ್ತು ಅದರ ರಾಜಕೀಯ ಸೂಕ್ಷ್ಮತೆಯನ್ನು ತೋರಿಸುತ್ತದೆ.
ಯೋಜನೆಗೆ ಹರಿಯಾಣದಷ್ಟೇ ಅಲ್ಲ, ಪಂಜಾಬ್‌ನೊಳಗೆಯೂ ಕೆಲವು ವಿರೋಧಗಳು ವ್ಯಕ್ತವಾಗಿವೆ. ರೈತ ಸಂಘಟನೆಗಳು ಭೂಸ್ವಾಧೀನದ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದು, ಪರಿಸರ ಹೋರಾಟಗಾರರು ಮರಗಳ ನಾಶ ಮತ್ತು ಪರಿಸರದ ಮೇಲೆ ಬೀಳುವ ಪರಿಣಾಮಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.
ಇತ್ತೀಚೆಗೆ ನಡೆದ ಸಾರ್ವಜನಿಕ ವಿಚಾರಣೆಯಲ್ಲಿ ಹಲವು ರೈತರು ನೀರಿನ ಗುಣಮಟ್ಟದ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದರು. ಕಾಲುವೆಗೆ ಹರಿಸಲಾಗುವ ನೀರಿನ ಒಂದು ಭಾಗ ಮಾಲಿನ್ಯಗೊಂಡ ಮೂಲಗಳಿಂದ ಬರಬಹುದೇ ಎಂಬ ಅನುಮಾನಗಳನ್ನು ವ್ಯಕ್ತಪಡಿಸಲಾಗಿದೆ. ಈ ಕಾರಣದಿಂದ ಯೋಜನೆಗೆ ಪರಿಸರ ಅನುಮತಿ ಪಡೆಯುವ ಪ್ರಕ್ರಿಯೆಯೂ ಮಹತ್ವ ಪಡೆದುಕೊಂಡಿದೆ.
ಪಂಜಾಬ್ ವಾದ ಏನು?
ಪಂಜಾಬ್ ಸರ್ಕಾರದ ವಾದದ ಪ್ರಕಾರ, ಈ ಯೋಜನೆ ಪೂರ್ಣಗೊಂಡ ಬಳಿಕ ಮಾಳ್ವಾ ಪ್ರದೇಶದಲ್ಲಿ ಕೃಷಿ ಉತ್ಪಾದನೆ ಹೆಚ್ಚಳವಾಗಲಿದೆ. ಭೂಗರ್ಭ ಜಲದ ಬಳಕೆ ಕಡಿಮೆಯಾಗುವುದರಿಂದ ಪರಿಸರ ಸಮತೋಲನ ಕಾಪಾಡಲು ಸಹಾಯವಾಗುತ್ತದೆ. ಅಲ್ಲದೆ ಬರಪೀಡಿತ ಪ್ರದೇಶಗಳಿಗೆ ಸ್ಥಿರ ನೀರಾವರಿ ವ್ಯವಸ್ಥೆ ಒದಗಿಸುವ ಮೂಲಕ ರೈತರ ಆದಾಯ ಹೆಚ್ಚಿಸಲು ನೆರವಾಗಲಿದೆ.
ಮತ್ತೊಂದೆಡೆ, ಹರಿಯಾಣದ ಆತಂಕ ನೀರಿನ ಲಭ್ಯತೆ ಮತ್ತು ಹಂಚಿಕೆ ಕುರಿತಾಗಿದೆ. ಈಗಾಗಲೇ ಸಟ್ಲೆಜ್-ಯಮುನಾ ಲಿಂಕ್ (SYL) ಕಾಲುವೆ ಸೇರಿದಂತೆ ಹಲವು ಜಲ ವಿವಾದಗಳು ಬಾಕಿ ಇರುವ ಸಂದರ್ಭದಲ್ಲಿ ಹೊಸ ಕಾಲುವೆ ಯೋಜನೆಯು ಭವಿಷ್ಯದಲ್ಲಿ ಮತ್ತಷ್ಟು ಕಾನೂನು ಹೋರಾಟಗಳಿಗೆ ಕಾರಣವಾಗಬಹುದು ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.
ಒಟ್ಟಾರೆ, 2,300 ಕೋಟಿ ರೂ. ವೆಚ್ಚದ ಮಾಳ್ವಾ ಕಾಲುವೆ ಯೋಜನೆ ಕೇವಲ ನೀರಾವರಿ ಯೋಜನೆಯಲ್ಲ. ಇದು ಕೃಷಿ, ಪರಿಸರ, ಜಲ ಸಂಪನ್ಮೂಲ ನಿರ್ವಹಣೆ, ರಾಜ್ಯಗಳ ಹಕ್ಕುಗಳು ಮತ್ತು ರಾಜಕೀಯ ಪ್ರಭಾವಗಳ ಸಂಗಮವಾಗಿದೆ. ಯೋಜನೆ ಯಶಸ್ವಿಯಾದರೆ ಪಂಜಾಬ್‌ನ ಮಾಳ್ವಾ ಪ್ರದೇಶದ ಕೃಷಿ ಚಿತ್ರಣವೇ ಬದಲಾಗಬಹುದು. ಆದರೆ ಅದಕ್ಕಾಗಿ ಪಂಜಾಬ್, ಹರಿಯಾಣ ಮತ್ತು ಕೇಂದ್ರ ಸರ್ಕಾರಗಳು ಪರಸ್ಪರ ಒಮ್ಮತದ ಪರಿಹಾರ ಕಂಡುಕೊಳ್ಳುವುದು ಅತ್ಯಗತ್ಯವಾಗಿದೆ.

