ಚಂಡೀಗಢ: ಒಂದು ವಾರದ ಹಿಂದೆಯಷ್ಟೇ ಕರ್ನಾಟಕದಲ್ಲಿ 1 ವರ್ಷದ ಅವಧಿಗೆ ಕೃತಕ ಪನ್ನೀರ್ ಬ್ಯಾನ್ (Analogue Paneer) ಮಾಡಿ ಆಹಾರ ಸುರಕ್ಷತಾ ಇಲಾಖೆ ಆದೇಶ ಹೊರಡಿಸಿದೆ. ಈ ಬೆನ್ನಲ್ಲೇ ಪಂಜಾಬ್ ಸರ್ಕಾರ (Punjab Govt) ಕೂಡ ಕೃತಕ ಪನ್ನೀರ್ ಉತ್ಪಾದನೆ ಹಾಗೂ ಮಾರಾಟಕ್ಕೆ ನಿಷೇಧ ಹೇರಿದೆ.
ಹೌದು. ಪಂಜಾಬ್ ಸರ್ಕಾರವು ರಾಜ್ಯಾದ್ಯಂತ ಅನಲಾಗ್ (ಡೈರಿ ಅಲ್ಲದ) ಪನ್ನೀರ್ ಉತ್ಪಾದನೆ, ಸಂಸ್ಕರಣೆ, ಪ್ಯಾಕಿಂಗ್, ಸಂಗ್ರಹಣೆ, ಸಾಗಣೆ, ವಿತರಣೆ ಮತ್ತು ಮಾರಾಟದ ಮೇಲೆ 1 ವರ್ಷದ ನಿಷೇಧ ಹೇರಿದೆ. ಈ ಕ್ರಮವು ತಕ್ಷಣದಿಂದಲೇ ಜಾರಿಗೆ ಬರುವಂತೆ ಪಂಜಾಬ್‌ನ ಆಹಾರ ಮತ್ತು ಔಷಧ ಆಡಳಿತದ ಆಯುಕ್ತರಾದ ಕನ್ವಾಲ್ ಪ್ರೀತ್ ಬ್ರಾರ್ (Kanwal Preet Brar) ಆದೇಶ ಹೊರಡಿಸಿದ್ದಾರೆ.

ಸೆಕ್ಷನ್ 30(2)(a)ರ ಅಡಿಯಲ್ಲಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, 2006ರ ಸೆಕ್ಷನ್ 18 ಹಾಗೂ 29ರ ಅನ್ವಯ ಹೊರಡಿಸಲಾದ ಆದೇಶದಲ್ಲಿ, ʻನಾನ್-ಡೈರಿ ಪನ್ನೀರ್ʼ, ʻವೀಗನ್ ಪನ್ನೀರ್ʼ, ʻಸಿಂಥೆಟಿಕ್ ಪನ್ನೀರ್ʼ ಮತ್ತು ʻಪ್ಲಾಂಟ್-ಬೇಸ್ಡ್ ಪನ್ನೀರ್ʼ ಸೇರಿದಂತೆ ಇತರ ಸಮಾನ ರೀತಿಯ ಹೆಸರುಗಳಲ್ಲಿ ಉತ್ಪನ್ನಗಳನ್ನ ತಯಾರಿಸಿ, ಸಂಗ್ರಹಿಸಿ, ಸಾಗಿಸಿ, ವಿತರಿಸಿ ಮತ್ತು ಮಾರಾಟ ಮಾಡಲಾಗುತ್ತಿದೆ. ಆದರೆ ಇವುಗಳನ್ನು ʻಪನ್ನೀರ್ʼ ಅಂತ ತೋರಿಸಿ ಮಾರಾಟ ಮಾಡಲಾಗ್ತಿದೆ ಎಂದು ತಿಳಿಸಲಾಗಿದೆ.
2025ರ ಏಪ್ರಿಲ್ 1ರಿಂದ 2026ರ ಮಾರ್ಚ್ 31ರ ವರೆಗೆ ಪಂಜಾಬ್‌ನ ವಿವಿಧೆಡೆಗಳಿಂದ ಸಂಗ್ರಹಿಸಲಾದ ಪನ್ನೀರ್ ಮಾದರಿಗಳನ್ನು ಪ್ರಯೋಗಾಲಯಕ್ಕೆ ವಿಶ್ಲೇಷಣೆಗಾಗಿ ಕಳುಹಿಸಲಾಗಿತ್ತು. ಈ ಪೈಕಿ ಈವರೆಗೆ 512 ಮಾದರಿಗಳನ್ನ ವಿಶ್ಲೇಷಿಸಲಾಗಿದ್ದು, ಈ ಪೈಕಿ 215 ಮಾದರಿಗಳು (42%) ನಿಯಮಾನುಸಾರವಾಗಿಲ್ಲ ಎಂಬುದನ್ನು ಅಧಿಕಾರಿಗಳು ಕಂಡುಕೊಂಡಿದ್ದಾರೆ. 156 ಮಾದರಿಗಳು ಗುಣಮಟ್ಟದ ಮಾನದಂಡಕ್ಕಿಂತ ಕಡಿಮೆ (Substandard) ಹಾಗೂ 59 ಮಾದರಿಗಳು ಅಸುರಕ್ಷಿತ (Unsafe) ಎಂದು ಪತ್ತೆಯಾಗಿವೆ.

1 ವರ್ಷದ ಅವಧಿಯಲ್ಲಿ ನಿರಂತರ ಜಾರಿ ಕ್ರಮಗಳು, ನಿಗಾ, ಮಾದರಿ ಸಂಗ್ರಹಣೆ, ಜಾಗೃತಿ ಹಾಗೂ ಲೇಬಲಿಂಗ್ ಕ್ರಮಗಳನ್ನು ಕೈಗೊಂಡಿದ್ದರೂ, ನಿಯಮಾನುಸಾರವಲ್ಲದ ಪನ್ನೀರ್ ಹಾಗೂ ನಿಜವಾದ ಪನ್ನೀರ್ ಬದಲಿಗೆ ಸಸ್ಯಜನ್ಯ ಕೊಬ್ಬಿನಿಂದ ತಯಾರಿಸಿದ ಅನಲಾಗ್ ಉತ್ಪನ್ನಗಳ ಬಳಕೆಯಲ್ಲಿ ಯಾವುದೇ ಗಮನಾರ್ಹ ಸುಧಾರಣೆ ಕಂಡುಬಂದಿಲ್ಲ. ವಿಶ್ಲೇಷಿಸಲಾದ ಮಾದರಿಗಳಲ್ಲಿ ನಿಯಮಾನುಸಾರವಲ್ಲದ ಉತ್ಪನ್ನಗಳ ಪ್ರಮಾಣ ಶೇ.42 ರಷ್ಟೇ ಉಳಿದಿದೆ.
ವಿಶ್ಲೇಷಿಸಲಾದ ಮಾದರಿಗಳ ಗಮನಾರ್ಹ ಪ್ರಮಾಣದಲ್ಲಿ ಹಾಲಿನ ಕೊಬ್ಬಿಗೆ ನಿಗದಿಪಡಿಸಿರುವ ಮಿತಿಗಿಂತ ಹೊರಗಿನ ಬ್ಯೂಟೈರೋ-ರಿಫ್ರಾಕ್ಟೋಮೀಟರ್ (BR) ರೀಡಿಂಗ್ ಕಂಡುಬಂದಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಇದರಿಂದ ಹಾಲಿನಲ್ಲಿ ಸಹಜವಾಗಿ ಇರದ ಸಸ್ಯಜನ್ಯ (ವಿದೇಶಿ) ಕೊಬ್ಬನ್ನು ಸೇರಿಸಿರುವುದು ಅಥವಾ ಹಾಲಿನ ಕೊಬ್ಬಿನ ಬದಲಿಗೆ ಅದನ್ನು ಬಳಸಿರುವುದು ಸೂಚಿಸುತ್ತದೆ. ಇದರಿಂದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯ ನಿಯಮಗಳ ಅಡಿಯಲ್ಲಿ ಆ ಆಹಾರವನ್ನು ಅಸುರಕ್ಷಿತ ಹಾಗೂ ತಪ್ಪು ಲೇಬಲ್ ಹೊಂದಿರುವ ಉತ್ಪನ್ನವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಮುಂದಿನ 1 ವರ್ಷದ ಅವಧಿಗೆ ಕೃತಕ ಪನ್ನೀರ್ ಉತ್ಪಾದನೆ ಹಾಗೂ ಮಾರಾಟವನ್ನ ಬ್ಯಾನ್ ಮಾಡಲಾಗಿದೆ.
