ಬೆಂಗಳೂರು: ‘ಎನ್.ಟಿ.ಆರ್ ಕಥಾನಾಯಕಡು’ ಚಿತ್ರದ ಸುದ್ದಿಗೋಷ್ಠಿಯ ವೇಳೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಬಾಲ್ಯದಲ್ಲಿ ನಡೆದ ಅನುಭವದ ಕಥೆಯೊಂದನ್ನು ಹೇಳಿಕೊಂಡಿದ್ದಾರೆ.
ಟಾಲಿವುಡ್ ಲೆಜೆಂಡ್ ನಂದಮುರಿ ಬಾಲಕೃಷ್ಣ ಅವರು ಬೆಂಗಳೂರಿನಲ್ಲಿ ತಮ್ಮ ಮುಂಬರುವ ‘ಎನ್.ಟಿ.ಆರ್ ಕಥಾನಾಯಕಡು’ ಚಿತ್ರದ ಸುದ್ದಿಗೋಷ್ಠಿಯನ್ನು ನಡೆಸಿದ್ದರು. ಈ ಸುದ್ದಿಗೋಷ್ಠಿಯಲ್ಲಿ ರಾಕಿಂಗ್ ಸ್ಟಾರ್ ಯಶ್, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಬಾಲಿವುಡ್ ನಟಿ ವಿದ್ಯಾ ಬಾಲನ್ ಭಾಗವಹಿಸಿದ್ದರು. ಈ ವೇಳೆ ಪುನೀತ್ ಅವರು ತಮ್ಮ ಚಿಕ್ಕ ವಯಸ್ಸಿನ ಅನುಭವವನ್ನು ಎಲ್ಲರ ಜೊತೆ ಹಂಚಿಕೊಂಡಿದ್ದಾರೆ.
1982 ಇಸವಿಯಲ್ಲಿ ನನಗೆ ಆಗ 6 ವರ್ಷ. ಆಗ ಎವಿಎಂ ಸ್ಟುಡಿಯೋದಲ್ಲಿ ಯಾವುದೋ ಒಂದು ಶೂಟಿಂಗ್ ನಡೆಯುತ್ತಿತ್ತು. ಅಲ್ಲಿ ನಮ್ಮ ತಂದೆ ಅವರ ಚಿತ್ರದ ಶೂಟಿಂಗ್ ಕೂಡ ನಡೆಯುತ್ತಿತ್ತು. ನನ್ನ ತಂದೆ ಅವರು ನನ್ನನ್ನು ಶೂಟಿಂಗ್‍ಗೆ ಕರೆದುಕೊಂಡು ಹೋಗುತ್ತಿದ್ದರು.
ಬಾಲಯ್ಯ ಸರ್ ಆ ಚಿತ್ರದಲ್ಲಿ ರೇಸ್ ಡ್ರೈವರ್ ಪಾತ್ರ ನಿರ್ವಹಿಸಿದ್ದರು. ಆ ವೇಳೆ ನಾನು ರೇಸ್ ಕಾರನ್ನು ನೋಡಿದೆ. ಆ ಕಾರು ನನಗೆ ಇಷ್ಟವಾಗಿ ಅದು ನನಗೆ ಬೇಕು ಎಂದು ಹಠ ಮಾಡಿದೆ. ಆ ಸಮಯದಲ್ಲಿ ಎನ್‍ಟಿಆರ್ ಸರ್ ಆ ಕಾರನ್ನು ಮನೆಗೆ ಕಳುಹಿಸಿಕೊಟ್ಟರು. ಬಳಿಕ ಆ ಕಾರನ್ನು ಬೇಡ ಎಂದು ಅಪ್ಪಾಜಿ ವಾಪಸ್ ಕಳುಹಿಸಿದ್ದರು.
ಇದಾದ ಬಳಿಕ 1986ನಲ್ಲಿ ಹೈದರಾಬಾದ್‍ನಲ್ಲಿ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‍ಗೆ ದಕ್ಷಿಣ ಹಾಗೂ ಉತ್ತರ ಭಾರತದ ಎಲ್ಲ ಸ್ಟಾರ್ ನಟರು ಭಾಗಿಯಾಗಿದ್ದರು. ಆ ವೇಳೆ ಎನ್‍ಟಿಆರ್ ಅವರು ಫ್ಲೈಟ್ ಪಕ್ಕ ನಿಂತು ಎಲ್ಲರನ್ನೂ ಸ್ವಾಗತ ಮಾಡುತ್ತಿದ್ದರು. ಆ ಸಮಯದಲ್ಲಿ ಅವರು ಒಂದು ದೊಡ್ಡ ವೆಂಕಟೇಶ್ವರ ಫೋಟೋವನ್ನು ನೀಡಿದ್ದರು. ಈಗಲೂ ಆ ಫೋಟೋವನ್ನು ನಮ್ಮ ಮನೆಯಲ್ಲಿ ಇಟ್ಟುಕೊಂಡಿದ್ದೇವೆ ಎಂದು ತಮ್ಮ ಬಾಲ್ಯದ ನೆನಪನ್ನು ಪುನೀತ್ ರಾಜ್‍ಕುಮಾರ್ ಹಂಚಿಕೊಂಡಿದ್ದಾರೆ.
ನನಗೆ ಸಣ್ಣ ವಯಸ್ಸಿನಿಂದ ನನ್ನ ತಂದೆ ಅವರ ಮೂಲಕ ಎಲ್ಲ ದೊಡ್ಡ ವ್ಯಕ್ತಿಯನ್ನು ಹತ್ತಿರದಿಂದ ನೋಡುವ ಅವಕಾಶ ಸಿಕ್ಕಿದೆ. ಎನ್‍ಟಿಆರ್ ಅವರು ನನ್ನ ತಂದೆಯನ್ನು ನೋಡಿ ತಮ್ಮಡು ತಮ್ಮಡು ಎಂದು ಕರೆಯುತ್ತಿದ್ದರು. ಅವರ ಊರಿನಲ್ಲಿದ್ದರೆ, ಬಾಲಯ್ಯ ಅವರು ಪ್ರೀತಿ ವಿಶ್ವಾಸದಿಂದ ಕುತಿದ್ದ ಜಾಗದಲ್ಲೇ ಎದ್ದು ಕೈ ಬೀಸುತ್ತಿದ್ದರು. ಅವರು ಬೆಂಗಳೂರಿಗೆ ಬಂದಾಗಲೆಲ್ಲಾ ನಮ್ಮ ಮನೆಗೆ ಬರುತ್ತಾರೆ. ಶಿವಣ್ಣ ಅವರಿಗೆ ಬಾಲಯ್ಯ ತುಂಬಾ ಆಪ್ತರು ಎಂದು ಪುನೀತ್ ರಾಜ್‍ಕುಮಾರ್ ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv