ಪುಣೆ: ‘ಆಪರೇಷನ್ ಸಿಂಧೂರ’ (Operation Sindoor) ಕಾರ್ಯಾಚರಣೆ ವಿಚಾರವಾಗಿ ಪ್ರತಿಕ್ರಿಯಿಸುವಾಗ ಒಂದು ಕೋಮು ಗುರಿಯಾಗಿಸಿ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಪುಣೆ ಕಾನೂನು ವಿದ್ಯಾರ್ಥಿನಿಯನ್ನು (Pune Law Student) ಪೊಲೀಸರು ಬಂಧಿಸಿದ್ದಾರೆ.
ಶರ್ಮಿಷ್ಠ ಪನೋಲಿ ಎಂಬಾಕೆಯನ್ನು ಶುಕ್ರವಾರ ರಾತ್ರಿ ಗುರುಗ್ರಾಮ್ನಿಂದ ಕೋಲ್ಕತ್ತಾ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇಸ್ಲಾಂ ಧರ್ಮವನ್ನು ಗುರಿಯಾಗಿಸಿ ಅವಹೇಳನಕಾರಿ ಹೇಳಿಕೆಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಲಾಗಿತ್ತು. ಇದನ್ನೂ ಓದಿ: ರಾಹುಲ್ ಗಾಂಧಿ ಪ್ರಧಾನಿಯಾದ ದಿನ ಪಿಒಕೆ ಭಾರತದ ಭಾಗವಾಗಲಿದೆ: ʻಕೈʼ ಸಂಸದ ಪ್ರಮೋದ್ ತಿವಾರಿ
ಈ ವಿಡಿಯೋ ವೈರಲ್ ಆಗಿದ್ದು, ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ. ಕೋಲ್ಕತ್ತಾದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಆಕೆಯ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಆಕೆಯ ಬಂಧನದ ನಂತರ, ಪನೋಲಿಯನ್ನು ಶನಿವಾರ ಕೋಲ್ಕತ್ತಾದ ಅಲಿಪೋರ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಈ ಪ್ರಕರಣವು ಶರ್ಮಿಷ್ಠ ಪನೋಲಿ ಎಂಬಾಕೆಯ ಇನ್ಸ್ಟಾಗ್ರಾಮ್ ವೀಡಿಯೊಗೆ ಸಂಬಂಧಿಸಿದೆ. ಅದು ನಿರ್ದಿಷ್ಟ ಸಮುದಾಯದ ಜನರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಉಗ್ರರು ಮತ್ತೆ ಹೆಡೆ ಬಿಚ್ಚಿದರೆ, ಹುತ್ತದಿಂದ ಎಳೆದು ತುಳಿಯುತ್ತೇವೆ: ಮೋದಿ ಖಡಕ್ ಸಂದೇಶ
ಬಂಧನ ಭೀತಿಯಿಂದ ಪನೋಲಿ ಮತ್ತು ಆಕೆಯ ಕುಟುಂಬಸ್ಥರು ಪರಾರಿಯಾಗಿದ್ದರು. ಹಲವು ಬಾರಿ ನೋಟಿಸ್ ಜಾರಿ ಮಾಡಿದರೂ ಯಾವುದೇ ಸ್ಪಂದನೆ ಸಿಕ್ಕಿರಲಿಲ್ಲ. ಕೊನೆಗೆ ನ್ಯಾಯಾಲಯ ಬಂಧನ ವಾರೆಂಟ್ ಹೊರಡಿಸಿತು. ಅದರ ಆಧಾರದ ಮೇಲೆ ಗುರುಗ್ರಾಮ್ನಲ್ಲಿ ಆಕೆಯನ್ನು ಬಂಧಿಸಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ವಿವಾದದಿಂದಾಗಿ ಪನೋಲಿ ಸಾಮಾಜಿಕ ಮಾಧ್ಯಮದಲ್ಲಿ ಬೇಷರತ್ತಾಗಿ ಕ್ಷಮೆಯಾಚಿಸಿದ್ದಾಳೆ. ವೀಡಿಯೊಗಳು ಮತ್ತು ಪೋಸ್ಟ್ಗಳನ್ನು ಅಳಿಸಿಹಾಕಿದ್ದಾಳೆ.