ಚಿತ್ರದುರ್ಗ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನಗಳನ್ನು ಅಡ್ಡಗಟ್ಟಿ ಲೂಟಿ ಮಾಡುತ್ತಾರೆ ಎನ್ನುವ ಭಯ ಜನರನ್ನು ಕಾಡುತ್ತದೆ. ಆದರೆ ಇಲ್ಲಿ ಪೊಲೀಸರ ಹೆಸರಲ್ಲೇ ಅನಧಿಕೃತವಾಗಿ ವಾಹನಗಳಿಂದ ಹಣ ವಸೂಲಿ ನಡೆಯುತ್ತಿದೆ. ಪೊಲೀಸರನ್ನು ಕೇಳಿದರೆ ಏನೋ ಒಂದು ಉತ್ತರ ನೀಡಿ ಎಸ್ಕೇಪ್ ಆಗುತ್ತಿದ್ದಾರೆ. ಇದನ್ನೆಲ್ಲಾ ನೋಡಿದರೆ ಪೊಲೀಸರ ಈ ನಡೆಯ ಮೇಲೆ ಸಾಕಷ್ಟು ಅನುಮಾನ ಹುಟ್ಟಿಕೊಂಡಿವೆ.
ಬೆಂಗಳೂರಿನಿಂದ ಪುಣೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿ 4ರ ರಸ್ತೆಯಲ್ಲಿ ಪೊಲೀಸರೇ ವಸೂಲಿ ದಂಧೆಗಿಳಿದಿದ್ದಾರೆ. ರಿಫ್ಲೆಕ್ಟರ್ ಸ್ಟಿಕ್ಕರ್ ಅಂಟಿಸಿ ನಿಗದಿತ ಹಣ ವಸೂಲಿ ಮಾಡೋಕೆ ದೆಹಲಿ ಮೂಲದ ವ್ಯಕ್ತಿಯೊಬ್ಬನನ್ನು ನಿಯೋಜಿಸಿದ್ದಾರೆ. 20 ದಿನ ಅವಧಿಗೆ ಅನುಮತಿ ಪತ್ರ ನೀಡಿದ್ದು, ಪ್ರತಿ ವಾಹನದಿಂದ 200 ರಿಂದ 400 ರೂಪಾಯಿವರೆಗೆ ವಸೂಲಿ ಮಾಡಲಾಗುತ್ತಿದೆ. ಯಾಕೆ ಹೀಗೆ ಮಾಡುತ್ತಿದ್ದೀರಾ ಎಂದು ಕೇಳಿದರೆ ಪೊಲೀಸರೇ ಅನುಮತಿ ಕೊಟ್ಟಿದ್ದಾರೆ ಎಂದು ಹೇಳುತ್ತಾರೆ.
ಇನ್ನೂ ಇವರ ಮಹತ್ಕಾರ್ಯದ ಬಗ್ಗೆ ಅಲ್ಲೇ ಇದ್ದ ಪೊಲೀಸ್ ಪೇದೆಯನ್ನು ಕೇಳಿದರೆ ನಮ್ಮ ಸಾಹೇಬರು ಇವರ ಜೊತೆ ಡ್ಯೂಟಿಗೆ ನೇಮಿಸಿದ್ದಾರೆ, ನೀವು ಬೇಡ ಅಂದರೆ ಹೋಗುತ್ತೀವಿ ಎಂದು ಉತ್ತರ ನೀಡುತ್ತಾರೆ. ಅಲ್ಲದೇ ಇಲ್ಲಿ ಯಾವ ರೀತಿ ಡ್ಯೂಟಿ ಮಾಡುತ್ತೀರ ಎಂದರೆ, ಡ್ಯೂಟಿ ಮಾಡುತ್ತೀನಿ ಎಂದು ಹೇಳಿ ಕ್ಯಾಮೆರಾ ನೋಡಿ ಕಾಲ್ಕಿತ್ತಿದ್ದಾರೆ.
ಒಟ್ಟಿನಲ್ಲಿ ನಿಯಮ ಉಲ್ಲಂಘಿಸಿ ಟೆಂಡರ್ ಕೂಡ ಕರೆಯದೇ ವಸೂಲಿಗೆ ಇಳಿದಿರೋದು ಎಷ್ಟರ ಮಟ್ಟಿಗೆ ಸರಿ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.