ಬೆಂಗಳೂರು: 950 ಗ್ರಾಂ. ಚಿನ್ನ ವಂಚನೆ ಮತ್ತು ದುರ್ಬಳಕೆ ಆರೋಪದಡಿ ಕಾಟನ್ ಪೇಟೆ ಠಾಣೆಯ ಪಿಎಸ್‌ಐ (PSI) ಸಂತೋಷ್‌ನನ್ನು ಅಮಾನತುಗೊಳಿಸಿ ಪೊಲೀಸ್ ಕಮಿಷನರ್ ದಯಾನಂದ (Commissioner Dayanand) ಆದೇಶ ಹೊರಡಿಸಿದ್ದಾರೆ.
2020ರಲ್ಲಿ ಸಂತೋಷ್ ಹಲಸೂರು ಗೇಟ್ (Halasuru Gate) ಠಾಣೆಯ ಪಿಎಸ್‌ಐ ಆಗಿದ್ದರು. ಆ ಸಮಯದಲ್ಲಿ ಕೇಸ್‌ವೊಂದರ ರಿಕವರಿ ಚಿನ್ನವನ್ನು ದುರ್ಬಳಕೆ ಮಾಡಿಕೊಂಡಿದ್ದರು. ಚಿನ್ನದ ಅಂಗಡಿ ಮಾಲೀಕನ ಬಳಿ ಹೋಗಿ ರಿಕವರಿ ಚಿನ್ನ ತೋರಿಸಬೇಕಿದೆ, ಹೀಗಾಗಿ 950 ಗ್ರಾಂ. ಚಿನ್ನದ ಗಟ್ಟಿ ಕೊಡು, ಫೋಟೊ ತೆಗೆಸಿ ವಾಪಸ್ ತಂದುಕೊಡುತ್ತೇನೆ ಎಂದು ಹೇಳಿದ್ದ.ಇದನ್ನೂ ಓದಿ: ವಾಹನ ತಪಾಸಣೆ ಮಾಡ್ತಿದ್ದ ಪೊಲೀಸರಿಗೆ ಕಾರು ಗುದ್ದಿಸಿ ಪರಾರಿ – ಆರೋಪಿ ಅರೆಸ್ಟ್
ಸಂತೋಷ್ ಮಾತನ್ನು ನಂಬಿ ಚಿನ್ನದ ಅಂಗಡಿ ಮಾಲೀಕ 950 ಗ್ರಾಂ. ಚಿನ್ನದ ಗಟ್ಟಿಯನ್ನು ನೀಡಿದ್ದರು. ಬಳಿಕ ಮಾಲೀಕ ಚಿನ್ನ ವಾಪಸ್ ಕೇಳಿದಾಗ ಸಂತೋಷ್ ಹಣ ನೀಡುತ್ತೇನೆಂದು ಹೇಳಿ ಭದ್ರತೆಗೆ ಸೈಟ್ ಕರಾರು ಮಾಡಿಕೊಟ್ಟಿದ್ದ. ಆದರೆ ಆ ಸೈಟ್‌ನ್ನು ಬೇರೆಯವರಿಗೆ ಮಾರಾಟ ಮಾಡಿದ್ದ. ಮಾಲೀಕ ಮತ್ತೆ ಪ್ರಶ್ನಿಸಿದಾಗ ಖಾಲಿ ಚೆಕ್ ನೀಡಿದ್ದ, ಅದು ಕೂಡ ಬೌನ್ಸ್ ಆಗಿತ್ತು. ಅದಾದ ಬಳಿಕವೂ ಮಾಲೀಕ ಹಣ ಮತ್ತು ಚಿನ್ನ ಕೇಳಿದಾಗ ಸಂತೋಷ್ ಆತನಿಗೆ ಬೆದರಿಕೆ ಹಾಕಿದ್ದ. ಇದರಿಂದ ಬೇಸತ್ತ ಮಾಲೀಕ ಪಶ್ಚಿಮ ವಿಭಾಗ ಡಿಸಿಪಿಗೆ ದೂರು ನೀಡಿದ್ದರು.
ದೂರಿನ ಬಗ್ಗೆ ಎಸಿಪಿ ನೇತೃತ್ವದಲ್ಲಿ ಪ್ರಾಥಮಿಕ ವಿಚಾರಣೆ ನಡೆಸಿ ವರದಿ ಸಲ್ಲಿಸಲಾಗಿತ್ತು. ಪ್ರಾಥಮಿಕ ವರದಿ ಆಧಾರದ ಮೇಲೆ ಪಿಎಸ್‌ಐ ಕ್ರಮಕ್ಕೆ ಸೂಚಿಸಿದ್ದು, ಅಧಿಕಾರ ದುರುಪಯೋಗ, ವಂಚನೆ ಕೇಸ್ ಅಡಿಯಲ್ಲಿ ಹಲಸೂರು ಗೇಟ್ ಠಾಣೆಯಲ್ಲಿ ಸಂತೋಷ್ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಸದ್ಯ ಎಫ್‌ಐಆರ್ (FIR) ದಾಖಲಾದ ಹಿನ್ನೆಲೆ ಪಿಎಸ್‌ಐ ಸಂತೋಷ್ ಅಮಾನತು ಮಾಡಿ, ಪೊಲೀಸ್ ಕಮಿಷನರ್ ದಯಾನಂದ ಆದೇಶ ಹೊರಡಿಸಿದ್ದಾರೆ.ಇದನ್ನೂ ಓದಿ: ಬಾಲ್ಯದಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೆ: ‘ಮಾಣಿಕ್ಯ’ ನಟಿ ವರಲಕ್ಷ್ಮೀ ಕಣ್ಣೀರು