ಕಲಬುರಗಿ: ಸ್ಟಿಂಗ್ ಆಪರೇಷನ್ (Sting Operation) ವಿಚಾರದಲ್ಲಿ ಆರೋಪ ಮಾಡುತ್ತಿರುವ ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ದಾಖಲೆಗಳಿದ್ದರೆ ಬಹಿರಂಗಪಡಿಸಲಿ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಸವಾಲು ಹಾಕಿದ್ದಾರೆ.
ತನಿಖೆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲದೆ ಮಾತನಾಡುವುದು ಸರಿಯಲ್ಲ. ತಮ್ಮ ಬಳಿ ದಾಖಲೆಗಳಿದ್ದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಲಿ ಎಂದು ಹೇಳಿದ್ದಾರೆ.
ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ದೇವರು ಕುಮಾರಸ್ವಾಮಿ ಅವರಿಗೆ ಒಳ್ಳೆಯದು ಮಾಡಲಿ, ನೂರು ವರ್ಷ ಆಯಸ್ಸು ಕೊಡಲಿ. ಆದರೆ, ನನ್ನ ಬಗ್ಗೆ ಲಘುವಾಗಿ ಮಾತನಾಡಲು ಶುರು ಮಾಡಿದ್ದು ಯಾರು? ನನ್ನ ವೈಯಕ್ತಿಕ ವಿಚಾರಗಳನ್ನೂ ಎಳೆದು ತಂದು, ಜಾತಿ ಹೆಸರಿನಲ್ಲಿ ಮಾತನಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆ ಬಗ್ಗೆ ಮಾತನಾಡಿ, ತನಿಖೆ ವೇಳೆ ಸಿಕ್ಕಿರುವ ಸಾಕ್ಷ್ಯಗಳ ಆಧಾರದ ಮೇಲೆ ವಿಚಾರಣೆ ನಡೆಯುತ್ತಿದೆ ಎಂದಿದ್ದಾರೆ. ವಿಡಿಯೋದಲ್ಲಿ ಯಾರಿದ್ದಾರೆ ಎಂಬುದನ್ನು ಪತ್ತೆಹಚ್ಚಿ, ಸಂಬಂಧಪಟ್ಟವರನ್ನು ಕರೆದು ವಿಚಾರಣೆ ನಡೆಸಲಾಗಿದೆಯೇ ಎಂಬುದು ಕುಮಾರಸ್ವಾಮಿ ಅವರಿಗೆ ಗೊತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ.
ನಮ್ಮ ತನಿಖೆ ಬಗ್ಗೆ ಅವರಿಗೆ ಏನು ಗೊತ್ತು? ನೀವು ಡಿಜಿ ಕಚೇರಿಗೆ ಹೋಗಿದ್ದೀರಲ್ಲ, ನಿಮ್ಮ ಬಳಿ ದಾಖಲೆಗಳಿದ್ದರೆ ಕೊಡಿ. ಕುಮಾರಸ್ವಾಮಿ ಅವರೇ, ನಿಮ್ಮ ಕುರ್ಚಿಯ ಘನತೆ ಕಾಪಾಡಿಕೊಳ್ಳಿ. ಓಡಿಹೋಗುವ ಕೆಲಸ ಮಾಡಬೇಡಿ. ನಿಮ್ಮ ಮನಸ್ಥಿತಿಯನ್ನು ಕರ್ನಾಟಕದ ಜನ ನೋಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸ್ಟಿಂಗ್ ಆಪರೇಷನ್ನಲ್ಲಿ ತಮ್ಮ ಕೈವಾಡವಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಅವರೇ ಸ್ಟಿಂಗ್ ಮಾಡಿಸಿದ್ದಾರೆ ಎಂದು ತಾನೂ ಆರೋಪಿಸಬಹುದು. ಆದರೆ, ದಾಖಲೆಗಳಿಲ್ಲದೆ ಮಾತನಾಡುವುದಿಲ್ಲ ಎಂದಿದ್ದಾರೆ. ಪ್ರಕರಣದಲ್ಲಿ ಚಾರ್ಜ್ಶೀಟ್ ಸಲ್ಲಿಕೆಯಾಗಲಿ, ಆ ಬಳಿಕ ನೋಡೋಣ ಎಂದು ಹೇಳಿದ್ದಾರೆ.
ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮೇಲಷ್ಟೇ ಅಸೂಯೆ ಇಲ್ಲ, ದಲಿತ ಸಮಾಜದ ಬಗ್ಗೆಯೂ ಅಸೂಯೆ ಇದೆ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ. ತಮ್ಮ ಭಾಷೆ, ನಡೆ ಮತ್ತು ನುಡಿ ಎಲ್ಲವೂ ಜನರ ಮುಂದೆ ಕಾಣಿಸುತ್ತಿದೆ ಎಂದು ಟೀಕಿಸಿದ್ದಾರೆ.
ನಾನು ನನ್ನ ಚೌಕಟ್ಟು ಬಿಟ್ಟು ಮಾತನಾಡಿಲ್ಲ. ದಾಖಲೆಗಳಿಲ್ಲದೆ ಯಾವುದನ್ನೂ ಹೇಳಿಲ್ಲ. ವೈಯಕ್ತಿಕವಾಗಿ ನಾನು ಪ್ರಾಮಾಣಿಕನಲ್ಲ ಎಂದು ರಾಜ್ಯದಲ್ಲಿ ಒಬ್ಬರಾದರೂ ಹೇಳಲಿ ಎಂದು ಸವಾಲು ಹಾಕಿದ್ದಾರೆ.
ಕುಮಾರಸ್ವಾಮಿ ಅವರನ್ನು ಆತ್ಮವಂಚನೆಯ ಪ್ರತಿರೂಪ ಎಂದು ಕರೆದ ಪ್ರಿಯಾಂಕ್ ಖರ್ಗೆ, ರಾಜಕಾರಣಿಗಳ ಘನತೆಯನ್ನು ಕಡಿಮೆ ಮಾಡುತ್ತಿರುವವರು ಯಾರು ಎಂಬುದನ್ನು ಜನರೇ ನಿರ್ಧರಿಸಲಿ ಎಂದಿದ್ದಾರೆ.
ಕುಮಾರಸ್ವಾಮಿ ಅವರ ಕುಟುಂಬದ ರಾಜಕೀಯ ನಡೆ ಬಗ್ಗೆಯೂ ಪ್ರಿಯಾಂಕ್ ಖರ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ತಮ್ಮ ಮಗನನ್ನು ಮಂತ್ರಿ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಕಣ್ಣೀರು ಹಾಕಿರಲಿಲ್ಲವೇ? ಈ ಬಗ್ಗೆ ದಾಖಲೆ ಬಿಡುಗಡೆ ಮಾಡಬೇಕೇ ಎಂದು ಪ್ರಶ್ನಿಸಿದ್ದಾರೆ.ಇದನ್ನೂ ಓದಿ: ನಮ್ಮ ನಾಯಕರನ್ನು ಭೇಟಿಯಾಗೋದು ನನ್ನ ಧರ್ಮ – ಸಿದ್ದರಾಮಯ್ಯ ಭೇಟಿ ಬಗ್ಗೆ ಡಿಕೆಶಿ ಪ್ರತಿಕ್ರಿಯೆ
ಯಡಿಯೂರಪ್ಪ ಅವರಿಗೆ ಅಧಿಕಾರ ನೀಡುವ ವಿಚಾರದಲ್ಲೂ ಮೋಸ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಆರ್ಎಸ್ಎಸ್ ವಿರುದ್ಧ ಮಾತನಾಡುತ್ತಿದ್ದ ಕುಮಾರಸ್ವಾಮಿ ಈಗ ಅದೇ ಸಂಘಟನೆಯ ಉಡುಪು ಧರಿಸಿ ಓಡಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ತಾಜ್ ವೆಸ್ಟೆಂಡ್ನಿಂದ ಅಧಿಕಾರ ಚಲಾಯಿಸುತ್ತಿದ್ದವರ ಬಗ್ಗೆ ತಮಗೆ ಮಾಹಿತಿ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.ಇದನ್ನೂ ಓದಿ: ಟಾಸ್ಕ್ ಎರಡನೇ ಬಾರಿ ರದ್ದು – ಬಿಗ್ಬಾಸ್ ಸ್ಪರ್ಧಿಗಳ ಆಟಕ್ಕೆ ಕಿಚ್ಚ ಸುದೀಪ್ ಗರಂ
