ರಾಯ್ಪುರ್: ನಾಲ್ವರು ವಿಚಾರಣಾಧೀನ ಕೈದಿಗಳು ಛತ್ತೀಸ್ಗಢದ (Chhattisgarh) ಮಹಾಸಮುಂದ್ ಜಿಲ್ಲಾ ಕಾರಾಗೃಹದ (Jail) ಕಾಂಪೌಂಡ್ ಹಾರಿ ಪರಾರಿಯಾಗಿದ್ದಾರೆ.
ಪಂಚುರಾಮ್ ನಿಶಾದ್, ರಾಜೇಂದ್ರ ರಾಜ್ ಚೌಧರಿ, ಧರ್ಮವೀರ್ ಯೋಗಿ ಮತ್ತು ಲೀಲಾಧರ್ ಪಾಲ್ ಪರಾರಿಯಾದ ವಿಚಾರಣಾಧೀನ ಕೈದಿಗಳು. ನಾಲ್ವರಲ್ಲಿ ಮೂವರು ಮಾದಕ ವಸ್ತು ಸಂಬಂಧಿತ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದರು. ಇನ್ನೊಬ್ಬ ಕಳ್ಳತನ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ. ಇವರನ್ನು ಜೈಲಿನ ಬ್ಯಾರಕ್ ಸಂಖ್ಯೆ 5 ರಲ್ಲಿ ಇರಿಸಲಾಗಿತ್ತು. ಸೋಮವಾರ (ನ.16) ಬೆಳಗಿನ ಜಾವ 3 ರಿಂದ 4 ಗಂಟೆಯ ಅವಧಿಯಲ್ಲಿ ಜೈಲಿನ ಗೋಡೆ ಜಿಗಿದು ಪರಾರಿಯಾಗಿದ್ದಾರೆ ಎಂದು ಜೈಲು ಸೂಪರಿಂಟೆಂಡೆಂಟ್ ಸಂದೀಪ್ ಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: ಅಕ್ರಮ ಸಂಬಂಧ ಬಿಟ್ಟು ಹೋದ ಮಹಿಳೆ – ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಯುವಕ ಆತ್ಮಹತ್ಯೆ
ಜೈಲು ಅಧಿಕಾರಿಗಳು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಪರಾರಿಯಾಗಿರುವವರನ್ನು ಪತ್ತೆಹಚ್ಚಲು ಶೋಧ ಕಾರ್ಯ ಆರಂಭಿಸಿದ್ದಾರೆ. ಜಿಲ್ಲೆಯಾದ್ಯಂತ ಪೊಲೀಸ್ ಠಾಣೆಗಳಿಗೆ ಎಚ್ಚರಿಕೆ ನೀಡಲಾಗಿದೆ. ಪರಾರಿಯಾಗಿರುವವರನ್ನು ಪತ್ತೆಹಚ್ಚಲು ವಿವಿಧ ಸ್ಥಳಗಳಲ್ಲಿ ಚೆಕ್-ಪೋಸ್ಟ್ಗಳನ್ನು ಸ್ಥಾಪಿಸಲಾಗಿದೆ. ಅವರನ್ನು ಪತ್ತೆಹಚ್ಚಲು ವಿವಿಧ ಸ್ಥಳಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.
ಜೈಲಿನ ಭದ್ರತೆಯನ್ನು ದಾಟಿ ಕಾಂಪೌಂಡ್ ತನಕ ಇವರೆಲ್ಲ ಹೇಗೆ ತಲುಪಿದರು ಎಂದು ತಿಳಿದುಕೊಳ್ಳಲು ಜೈಲಿನ ಒಳಗಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೇ 2021 ರಲ್ಲಿ, ಅತ್ಯಾಚಾರ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿದ್ದ ಐದು ಕೈದಿಗಳು ಇದೇ ಜೈಲಿನಿಂದ ಇದೇ ಮಾದರಿಯಲ್ಲಿ ತಪ್ಪಿಸಿಕೊಂಡಿದ್ದರು. ಇದನ್ನೂ ಓದಿ: ಬ್ಯಾಡಗಿ ಬಳಿ ಲಾರಿಗೆ ಬಸ್ ಡಿಕ್ಕಿ – 25ಕ್ಕೂ ಹೆಚ್ಚು ಪ್ರವಾಸಿಗರಿಗೆ ಗಾಯ, ನಾಲ್ವರ ಸ್ಥಿತಿ ಗಂಭೀರ
