ಉಡುಪಿ: ರಾಷ್ಟ್ರ ರಾಜಕಾರಣವಲ್ಲ, ರಾಜ್ಯ ರಾಜಕಾರಣವೂ ಅಲ್ಲ ನನಗೆ ಹಳ್ಳಿಯ ರಾಜಕಾರಣ ಬೇಕು. ಅದರ ಮೇಲೆ ನನಗೆ ಆಸಕ್ತಿ ಜಾಸ್ತಿ ಎಂದು ಬಿಜೆಪಿ ಮುಖಂಡ ಪ್ರಮೋದ್ ಮಧ್ವರಾಜ್ ಹೇಳಿದರು.
ಉಡುಪಿಯಲ್ಲಿ ನಡೆದ ಬಿಜೆಪಿ ರಾಜ್ಯ ಪದಾಧಿಕಾರಿಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಬಿ.ಎಲ್. ಸಂತೋಷ್ ಅವರ ಮೇಲೆ ವಿಶ್ವಾಸವಿಟ್ಟು ನಾನು ಬಿಜೆಪಿ ಸೇರ್ಪಡೆಯಾಗಿದ್ದೇನೆ ಎಂದರು.
Advertisement
Advertisement
ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿ ಮೆಚ್ಚಿ ಬಿಜೆಪಿಗೆ ಬಂದಿದ್ದೇನೆ. ಕೋವಿಡ್ ಕಾಲದಲ್ಲಿ ಅವರು, ನಿಭಾಯಿಸಿದ ಕಾರ್ಯವೈಖರಿ ಮೆಚ್ಚುಗೆಯಾಗಿ ನಾನು ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ. ಸಿಎಂ ಬಸವರಾಜ ಬೊಮ್ಮಾಯಿ ಅವರ ಸರಳ ಮತ್ತು ಜನಸಾಮಾನ್ಯರಿಗೆ ಹತ್ತಿರವಾದ ಸರ್ಕಾರ ಆಡಳಿತವನ್ನು ನೀಡುವ ಕಾರ್ಯವೈಖರಿಗಾಗಿ ಬಿಜೆಪಿ ಸೇರಿರುವುದಾಗಿ ಹೇಳಿದರು.
Advertisement
Advertisement
ನಾನಾಗಿ ಬಿಜೆಪಿಯ ಮುಂದೆ ಯಾವುದೇ ಬೇಡಿಕೆ ಇಟ್ಟಿಲ್ಲ. ಬಿಜೆಪಿ ಯಾವುದೇ ಭರವಸೆಗಳನ್ನು ಕೊಟ್ಟಿಲ್ಲ. ಒಬ್ಬ ಕಾರ್ಯಕರ್ತನಾಗಿ ನಾನು ಬಿಜೆಪಿಯಲ್ಲಿ ದುಡಿಯುತ್ತೇನೆ. 2023 ಚುನಾವಣೆಯಲ್ಲಿ 150 ಸೀಟು ಗೆಲ್ಲಿಸಿಕೊಳ್ಳಲು ನಾನು ನನ್ನ ಅಳಿಲುಸೇವೆಯನ್ನು ಮಾಡುತ್ತೇನೆ. ಕರ್ನಾಟಕ ರಾಜ್ಯದಲ್ಲಿ ಪಕ್ಷ ಎಲ್ಲಿ ಕೆಲಸ ಮಾಡಲು ಹೇಳುತ್ತದೆ ಅಲ್ಲಿ ಹೋಗಿ ಕೆಲಸ ಮಾಡುತ್ತೇನೆ. ವಿಶೇಷವಾಗಿ ಮೀನುಗಾರರು ಇರುವಂತಹ ಕ್ಷೇತ್ರದಲ್ಲಿ ಹೋಗಿ ಕೆಲಸ ಮಾಡುತ್ತೇನೆ. ಪಕ್ಷ, ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಅಳಿಲ ಸೇವೆ ಮಾಡಲು ಬದ್ಧನಾಗಿದ್ದೇನೆ ಎಂದು ನುಡಿದರು.
ಕಾಂಗ್ರೆಸ್ ಹೊಗಳಿದ ಬಿಜೆಪಿ ಬೈದಿರುವ ವೀಡಿಯೋಗಳನ್ನು ವೈರಲ್ ಮಾಡುತ್ತಿರುವ ಬಗ್ಗೆ ಮಾತನಾಡಿದ ಅವರು, ನಾನು 2018ರಲ್ಲಿ ಸಂದರ್ಶನದಲ್ಲಿ ಮಾತನಾಡಿದ ವಿಡಿಯೋ ಹರಿಯಬಿಡಲಾಗುತ್ತದೆ. ನಾನು ಪಕ್ಷಕ್ಕಾಗಿ ದುಡಿದಿದ್ದೇನೆ. ಪಕ್ಷ ಕೂಡ ನನಗೆ ಹಲವಾರು ಕೊಡುಗೆಗಳನ್ನು ಕೊಟ್ಟಿದೆ. ಉಡುಪಿ ಜಿಲ್ಲೆಯ ಕಾಂಗ್ರೆಸ್‍ನ ಪರಿಸ್ಥಿತಿ ಕಳೆದ ಮೂರು ವರ್ಷಗಳಿಂದ ನನಗೆ ಹಿತಕರವಾಗಿಲ್ಲ. ನನಗೆ ಉಸಿರುಕಟ್ಟುವ ವಾತಾವರಣ ಇದೆ. ಪಕ್ಷದ ವರಿಷ್ಠರಿಗೆ ಹಲವು ಬಾರಿ ಹೇಳಿದಾಗಲೂ ಸಮಸ್ಯೆ ಬಗೆಹರಿಸುತ್ತೇವೆ ಎಂದು ಆಶ್ವಾಸನೆ ಕೊಟ್ಟಿದ್ದರು. ಆದರೆ ಅದನ್ನು ಇನ್ನು ಸರಿಪಡಿಸದಿದ್ದಾಗ ಪಕ್ಷಕ್ಕೆ ರಾಜಿನಾಮೆ ಕೊಟ್ಟು ಬಿಜೆಪಿ ಸೇರಿದ್ದೇನೆ ಎಂದು ಸ್ಪಷ್ಟಪಡಿಸಿದರು.
ನಾನು ಬಿಜೆಪಿಗೆ ಸೇರಿದ್ದೇನೆ. ನನ್ನ ಹಲವಾರು ಬೆಂಬಲಿಗರು ಬಿಜೆಪಿ ಸೇರಲು ಆಸಕ್ತರಾಗಿದ್ದಾರೆ. ಬೂತ್, ಗ್ರಾಮೀಣ ಮಟ್ಟದಲ್ಲಿ ಬಿಜೆಪಿಗೆ ಶಕ್ತಿ ತುಂಬಿದ ಕಾರ್ಯಕರ್ತರಿದ್ದಾರೆ. ಬಿಜೆಪಿ ಕಾರ್ಯಕರ್ತರ ಮನಸ್ಸನ್ನು ಒಲಿಸಿ, ಓಲೈಸಿ ಅವರ ಒಪ್ಪಿಗೆಯನ್ನು ಪಡೆದು ಬಿಜೆಪಿಗೆ ಸೇರ್ಪಡೆ ಕೆಲಸ ಆಗುತ್ತದೆ ಎಂದರು. ಇದನ್ನೂ ಓದಿ: MBP ನನ್ನ ಸ್ನೇಹಿತರು, ಬೇಕೆಂದಾಗ ಭೇಟಿ ಮಾಡ್ತೀನಿ: ಡಿಕೆಶಿಗೆ ಅಶ್ವಥ್ ನಾರಾಯಣ ತಿರುಗೇಟು
ನಾನು ಎಂಎಲ್‍ಎ ಆಗಿ ಯಾರ ಮೇಲೆ ಕೇಸು ಹಾಕಿಸಿದ್ದೇನೆ ನೆನಪಿಲ್ಲ. ಕೇಸು ಹಾಕುವುದು ನನ್ನ ಕೆಲಸ ಅಲ್ಲ. ನಾನು ರಾಜ್ಯ ಅಥವಾ ಕೇಂದ್ರದಲ್ಲಿ ಕೆಲಸ ಮಾಡಲು ಬಿಜೆಪಿ ಸೇರಿಲ್ಲ. ನಾನು ಹಳ್ಳಿಯಲ್ಲಿ ಕೆಲಸ ಮಾಡಲು ಹೊರಟಿದ್ದೇನೆ. ಎಂದು ಹೇಳಿದರು.
ಚುನಾವಣೆ ಬಂದಾಗ ಸ್ಪರ್ಧೆಯ ವಿಚಾರ ಚರ್ಚಿಸೋಣ. ಶಾಸಕ ರಘುಪತಿ ಭಟ್ ಅವರ ಒಪ್ಪಿಗೆ ಇಲ್ಲದಿದ್ದರೆ ನನಗೆ ಬಿಜೆಪಿಗೆ ಸೇರಲು ಆಗುತ್ತಿರಲಿಲ್ಲ. ಒಂದು ಪಕ್ಷವನ್ನು ಬಿಟ್ಟು ಬಂದ ಕೂಡಲೇ ಕಾಂಗ್ರೆಸ್ ಕಾರ್ಯಕರ್ತರಿಗೆ ನೋವು ದುಃಖ ಆಗುತ್ತದೆ. ನನ್ನನ್ನ ಬಯ್ಯುವ ಮತ್ತು ಹೊಗಳುವ ಹಕ್ಕು ಎಲ್ಲರಿಗೂ ಇದೆ. ಹೊಗಳಿದಾಗ ನಾನು ಹಿಗ್ಗುವುದಿಲ್ಲ ತೆಗಳಿದಾಗ ಕುಗ್ಗುವುದಿಲ್ಲ ಎಂದು ಅಭಿಪ್ರಾಯ ಪಟ್ಟರು. ಇದನ್ನೂ ಓದಿ: ಫ್ಲೋಟಿಂಗ್ ಬ್ರಿಡ್ಜ್ ಮುರಿಯಲು ತಾಂತ್ರಿಕ ಕಾರಣ ಇರಬೇಕು: ಆನಂದ್ ಸಿಂಗ್