ಮಂಗಳೂರು: ಅರಬ್ಬೀ ಸಮುದ್ರದಲ್ಲಿ ಪ್ರಕ್ಷುಬ್ಧ ವಾತಾವರಣ ಸಾಧ್ಯತೆ ಹಿನ್ನೆಲೆ ಮೇ 25ರವರೆಗೆ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಕರ್ನಾಟಕ ಕರಾವಳಿ ಸೇರಿ ಹಲವು ಸಮುದ್ರ ಪ್ರದೇಶಗಳಲ್ಲಿ ಬಿರುಗಾಳಿ ಬೀಸುವ ಮುನ್ಸೂಚನೆ ನೀಡಿದ್ದು, ಸೊಮಾಲಿಯಾ ಕರಾವಳಿ ಭಾಗದಲ್ಲಿ ಗಾಳಿಯ ವೇಗ 65 ಕಿ.ಮೀ ತಲುಪುವ ಸಾಧ್ಯತೆಯಿದೆ. ಈ ಹಿನ್ನೆಲೆ ಕರ್ನಾಟಕ, ಕೇರಳ ಕರಾವಳಿ, ಲಕ್ಷದ್ವೀಪ, ಮಾಲ್ಡೀವ್ಸ್,ಕೊಮೊರಿನ್ ಪ್ರದೇಶಗಳಿಗೆ ಅಲರ್ಟ್ ಘೋಷಿಸಲಾಗಿದೆ. ಅಲ್ಲದೇ ಸಮುದ್ರದಲ್ಲಿರುವ ಮೀನುಗಾರರು ತಕ್ಷಣ ದಡ ಸೇರುವಂತೆ ಸೂಚನೆ ನೀಡಲಾಗಿದೆ. ಇದನ್ನೂ ಓದಿ: ರೈಲುಗಳಲ್ಲಿ ಸರಣಿ ಅಗ್ನಿ ಅವಘಡ – ಸಮಾಜ ವಿರೋಧಿ ಶಕ್ತಿಗಳು ಭಾಗಿಯಾಗಿ ವಿಧ್ವಂಸಕ ಕೃತ್ಯ ನಡೆಸ್ತಿರುವ ಶಂಕೆ: ರೈಲ್ವೇ ಇಲಾಖೆ
ಮನ್ನಾರ್ ಕೊಲ್ಲಿ, ಬಂಗಾಳ ಕೊಲ್ಲಿ, ಅಂಡಮಾನ್ ಸಮುದ್ರ ಭಾಗಗಳಲ್ಲೂ ಹವಾಮಾನ ಅಸ್ಥಿರತೆಗೊಳ್ಳುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆಯ ಅಧಿಕೃತ ಸೂಚನೆ ಪಾಲಿಸಲು ಮನವಿ ಮಾಡಲಾಗಿದೆ. ಮೇ 20ರಿಂದ ಮೇ 25ರವರೆಗೆ ಸಮುದ್ರ ಭಾಗದಲ್ಲಿ ಭಾರಿ ಬಿರುಗಾಳಿ ಬೀಸುವ ಸಾಧ್ಯತೆಯಿದೆ. ಕರ್ನಾಟಕ ಮತ್ತು ಕೇರಳ ಕರಾವಳಿ ತೀರದಲ್ಲಿ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಸುಂಟರಗಾಳಿ ಬೀಸುವ ಸಾಧ್ಯತೆಯಿದ್ದು, ಕರಾವಳಿ ತೀರದಲ್ಲಿ ಬಿರುಗಾಳಿಯ ವೇಗ ಗರಿಷ್ಠ 60 ಕಿ.ಮೀ.ವರೆಗೆ ಹೆಚ್ಚಾಗುವ ಸಾಧ್ಯತೆಯಿದೆ. ಲಕ್ಷದ್ವೀಪ, ಮಾಲ್ಡೀವ್ಸ್ ಮತ್ತು ಕೊಮೊರಿನ್ ಸಮುದ್ರ ವ್ಯಾಪ್ತಿಯಲ್ಲಿ ಹವಾಮಾನ ಹದಗೆಡಲಿದ್ದು, ಸೊಮಾಲಿಯಾ ಕರಾವಳಿ ಹಾಗೂ ನೈಋತ್ಯ ಅರಬ್ಬಿ ಸಮುದ್ರದಲ್ಲಿ ಗಂಟೆಗೆ 45-55 ಕಿ.ಮೀ.ನಿಂದ 65 ಕಿ.ಮೀ ವೇಗದ ಬಿರುಗಾಳಿ ಬೀಸುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ಕೊಡಲಾಗಿದೆ. ಇದನ್ನೂ ಓದಿ: ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಆದಾಯ – 230 ಕೋಟಿ ಪಡೆದ ಕೊಹ್ಲಿಗೆ ಅಗ್ರ ಸ್ಥಾನ
ಬಂಗಾಳಕೊಲ್ಲಿ, ಮನ್ನಾರ್ ಕೊಲ್ಲಿ ಹಾಗೂ ಅಂಡಮಾನ್ ಸಮುದ್ರ ಭಾಗದಲ್ಲೂ ಮುಂದಿನ ಐದು ದಿನ ಪ್ರಕ್ಷುಬ್ಧ ವಾತಾವರಣ ಇರಲಿದ್ದು, ಶ್ರೀಲಂಕಾ ಕರಾವಳಿ ಹಾಗೂ ನೈಋತ್ಯ ಬಂಗಾಳಕೊಲ್ಲಿಯಲ್ಲಿ ಗಂಟೆಗೆ 65 ಕಿ.ಮೀ ವೇಗದಲ್ಲಿ ಗಾಳಿ ಅಪ್ಪಳಿಸಲಿದೆ. ಹವಾಮಾನ ವೈಪರೀತ್ಯದ ಹಿನ್ನೆಲೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ಕೊಡಲಾಗಿದೆ. ಕರ್ನಾಟಕ, ಗೋವಾ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಗುಜರಾತ್ ಮತ್ತು ಮಹಾರಾಷ್ಟ್ರ ಸೇರಿದಂತೆ ಕರಾವಳಿ ರಾಜ್ಯಗಳಿಗೆ ತುರ್ತು ಸಂದೇಶ ರವಾನಿಸಲಾಗಿದೆ. ಒಡಿಶಾ, ಪಶ್ಚಿಮ ಬಂಗಾಳ ಹಾಗೂ ಪುದುಚೇರಿ ರಾಜ್ಯಗಳ ವಿಪತ್ತು ನಿರ್ವಹಣಾ ಕೇಂದ್ರಗಳಿಗೂ ಹೈ ಅಲರ್ಟ್ ಘೋಷಿಸಲಾಗಿದೆ. ಇದನ್ನೂ ಓದಿ: ಬೆಲೆ ಏರಿಕೆ ಮಧ್ಯೆ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್ – ಸದ್ಯಕ್ಕಿಲ್ಲ ಟಿಕೆಟ್ ದರ ಹೆಚ್ಚಳ

