ಗದಗ: ಸಾರ್ವಜನಿಕರು ವಿಶ್ರಾಂತಿ ಪಡೆಯಲು, (Gadag Park) ಮಕ್ಕಳು ಆಟವಾಡಲು ಮತ್ತು ಹಿರಿಯರು ವಾಯುವಿಹಾರ ಮಾಡಲು ನಿರ್ಮಿಸಲಾಗಿದ್ದ ಗದಗದ ಸಿದ್ದರಾಮೇಶ್ವರ ನಗರದ ಶಿವಯೋಗಿ ಸಿದ್ದರಾಮೇಶ್ವರ ಉದ್ಯಾನವನ ಇಂದು ನಿರ್ವಹಣೆಯ ಕೊರತೆಯಿಂದ ಸಂಪೂರ್ಣ ಹಾಳಾಗಿರುವ ಸ್ಥಿತಿಗೆ ತಲುಪಿದೆ.
ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಉದ್ಯಾನ ಈಗ ಕಸದ ರಾಶಿ, ಕಳೆಗಿಡಗಳು ಮತ್ತು ವಿಷಜಂತುಗಳ ಆಶ್ರಯ ತಾಣವಾಗಿ ಮಾರ್ಪಟ್ಟಿದೆ.
ಒಮ್ಮೆ ಬೆಳಗ್ಗೆ ಮತ್ತು ಸಂಜೆ ಜನರಿಂದ ತುಂಬಿ ತುಳುಕುತ್ತಿದ್ದ ಈ ಉದ್ಯಾನದಲ್ಲಿ ಈಗ ಎಲ್ಲೆಡೆ ಕಳೆಗಿಡಗಳು ಬೆಳೆದಿವೆ. ಮಕ್ಕಳಿಗಾಗಿ ಅಳವಡಿಸಿದ್ದ ಜೋಕಾಲಿ ಮತ್ತು ಆಟೋಪಕರಣಗಳು ಕಳೆ ಮತ್ತು ಕಸದ ನಡುವೆ ಮುಚ್ಚಿಹೋಗಿದ್ದು, ಬಳಕೆಗೆ ಯೋಗ್ಯವಾಗಿಲ್ಲ. ಇದರಿಂದ ಪೋಷಕರು ಮಕ್ಕಳನ್ನು ಉದ್ಯಾನಕ್ಕೆ ಕರೆತರಲು ಹಿಂದೇಟು ಹಾಕುತ್ತಿದ್ದಾರೆ.
ಹಿರಿಯ ನಾಗರಿಕರಿಗಾಗಿ ನಿರ್ಮಿಸಿರುವ ವಾಕ್‌ವೇ ಕೂಡ ಕಸ ಮತ್ತು ಕಳೆಗಿಡಗಳಿಂದ ಆವೃತವಾಗಿದೆ. ಸ್ವಚ್ಛತೆ ಇಲ್ಲದ ಕಾರಣ ನಡೆದು ಹೋಗುವುದೇ ಕಷ್ಟವಾಗಿದೆ. ಉದ್ಯಾನದಲ್ಲಿ ಹಾವು, ಚೇಳು ಸೇರಿದಂತೆ ವಿಷಜಂತುಗಳು ಕಾಣಿಸಿಕೊಳ್ಳುವ ಭಯವೂ ಸಾರ್ವಜನಿಕರಲ್ಲಿ ಹೆಚ್ಚಾಗಿದೆ.
ದಿನಗಟ್ಟಲೆ ಕಸ ತೆರವು ಮಾಡದ ಕಾರಣ ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ಸುತ್ತಮುತ್ತಲಿನ ನಿವಾಸಿಗಳು ಸಂಜೆ ವೇಳೆಗೆ ತೀವ್ರ ತೊಂದರೆ ಅನುಭವಿಸುತ್ತಿದ್ದು, ಡೆಂಗ್ಯೂ ಹಾಗೂ ಚಿಕೂನ್‌ಗುನ್ಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ಆತಂಕವೂ ಎದುರಾಗಿದೆ.
ಸಾರ್ವಜನಿಕರ ಓಡಾಟ ಕಡಿಮೆಯಾದ ಹಿನ್ನೆಲೆಯಲ್ಲಿ ಕೆಲ ದುಷ್ಕರ್ಮಿಗಳು ಸಂಜೆ ವೇಳೆ ಉದ್ಯಾನದಲ್ಲಿ ಮದ್ಯಪಾನ ಮಾಡಿ ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಇದರಿಂದ ಮಹಿಳೆಯರು ಹಾಗೂ ಕುಟುಂಬ ಸಮೇತ ಬರುವವರು ಉದ್ಯಾನಕ್ಕೆ ಬರಲು ಹಿಂಜರಿಯುತ್ತಿದ್ದಾರೆ.ಇದನ್ನೂ ಓದಿ: ನೂತನ ಸಚಿವರಾಗಿ ರುದ್ರಪ್ಪ ಲಮಾಣಿ ಪ್ರಮಾಣ ವಚನ – ಬೊಮ್ಮಾಯಿ ಅಭಿನಂದನೆ
ಇದರ ಜೊತೆಗೆ, ಕೆಲವರು ಉದ್ಯಾನವನ್ನು ಹಾಳಾದ ಪೀಠೋಪಕರಣಗಳು, ಕಟ್ಟಡದ ಅವಶೇಷಗಳು ಮತ್ತು ಉಪಯೋಗಕ್ಕೆ ಬಾರದ ವಸ್ತುಗಳನ್ನು ಎಸೆಯುವ ಸ್ಥಳವನ್ನಾಗಿ ಬಳಸುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಸಾರ್ವಜನಿಕರ ತೆರಿಗೆ ಹಣದಲ್ಲಿ ನಿರ್ಮಿಸಿದ ಉದ್ಯಾನವನ್ನು ಈ ರೀತಿ ನಿರ್ಲಕ್ಷ್ಯ ಮಾಡಿರುವುದು ಸರಿಯಲ್ಲ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ. ಕೂಡಲೇ ಕಸ ತೆರವು, ಕಳೆಗಿಡಗಳ ನಿರ್ಮೂಲನೆ, ಆಟೋಪಕರಣಗಳ ದುರಸ್ತಿ, ವಾಕ್‌ವೇ ಸ್ವಚ್ಛತೆ, ಬೆಳಕಿನ ವ್ಯವಸ್ಥೆ ಹಾಗೂ ಭದ್ರತಾ ಕ್ರಮಗಳನ್ನು ಕೈಗೊಂಡು ಶಿವಯೋಗಿ ಸಿದ್ದರಾಮೇಶ್ವರ ಉದ್ಯಾನವನವನ್ನು ಮತ್ತೆ ಸಾರ್ವಜನಿಕರ ಬಳಕೆಗೆ ಯೋಗ್ಯವಾಗಿಸಬೇಕು ಎಂದು ನಗರಸಭೆ ಅಧಿಕಾರಿಗಳಿಗೆ ನಾಗರಿಕರು ಆಗ್ರಹಿಸಿದ್ದಾರೆ.ಇದನ್ನೂ ಓದಿ: ಡಿಕೆ ಸಂಪುಟ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ 19 ಶಾಸಕರು



