DistrictsKarnatakaLatestRaichur

ರಾಜಕಾರಣಿಗಳ ಮಕ್ಕಳ ಮದ್ವೆಗೆ ವೇದಿಕೆಯಾಗ್ತಿದೆ ಕೃಷಿ ವಿವಿ- ಸಾರ್ವಜನಿಕರು ಆಕ್ರೋಶ

ರಾಯಚೂರು: ಕೃಷಿ ಸಂಬಂಧಿ ಕಾರ್ಯಕ್ರಮಗಳು ನಡೆಯಬೇಕಾದ ವಿವಿ ಸ್ಥಳವನ್ನ ಖಾಸಗಿ ಸಮಾರಂಭಗಳಿಗೆ ಬಾಡಿಗೆ ನೀಡಿದ್ದು, ಎಂಎಲ್‍ಸಿ ಹಾಗೂ ಎಂಎಲ್‍ಎ ಮಕ್ಕಳ ಕಾರ್ಯಕ್ರಮಕ್ಕೆ ಕೃಷಿ ವಿವಿಯನ್ನ ಬಳಸಿಕೊಳ್ಳಲಾಗುತ್ತಿದೆ.

ಜಿಲ್ಲೆಯಲ್ಲಿ ಈ ಬಾರಿ ಭೀಕರ ಬರಗಾಲ ಇರುವುದರಿಂದ ಇಲ್ಲಿನ ಕೃಷಿ ವಿಶ್ವವಿದ್ಯಾಲಯ ಈ ವರ್ಷ ಕೃಷಿ ಮೇಳದ ಆಯೋಜನೆಯನ್ನ ಕೈಬಿಟ್ಟಿದೆ. ಆದ್ದರಿಂದ ವಿವಿ ಆವರಣ ಸದ್ಯ ಮದುವೆ ಕಾರ್ಯಕ್ರಮ ಮಾಡುವ ವೇದಿಕೆಯಾಗಿದೆ. ವಿವಿ ಆವರಣದಲ್ಲಿ ದೊಡ್ಡದಾದ ಪೆಂಡಾಲ್, ವೇದಿಕೆ ಸಿದ್ಧಮಾಡಿ ಫೆಬ್ರವರಿ 1 ರಂದು ನಡೆಯಲಿರುವ ರಾಯಚೂರು ವಿಧಾನ ಪರಿಷತ್ ಸದಸ್ಯ ಬಸವರಾಜ್ ಪಾಟೀಲ್ ಇಟಗಿ ಪುತ್ರ ಸುಮನ್ ಹಾಗೂ ಶಹಾಪುರ ಶಾಸಕ ಶರಣಬಸಪ್ಪಾ ದರ್ಶನಾಪೂರ ಪುತ್ರಿ ಸೌಜನ್ಯ ಮದುವೆ ಸಮಾರಂಭವನ್ನು ಅದ್ಧೂರಿಯಾಗಿ ಮಾಡಲು ತಯಾರಿ ನಡೆಯುತ್ತಿದೆ. ಈ ಕಾರ್ಯಕ್ರಮಕ್ಕೆ ಸಿಎಂ, ಡಿಸಿಎಂ, ಗೃಹ ಸಚಿವರು, ಮಾಜಿ ಸಿಎಂಗಳು ಸೇರಿ ನೂರಾರು ಜನ ಗಣ್ಯರು ಹಾಗೂ 20 ಸಾವಿರಕ್ಕೂ ಅಧಿಕ ಅತಿಥಿಗಳು ಬರುವ ನಿರೀಕ್ಷೆಯಿದೆ. ಆದ್ರೆ ವಿವಿ ದುರ್ಬಳಕೆಗೆ ಸಾರ್ವಜನಿಕರು ಹಾಗೂ ಕೃಷಿಕರಿಂದ ತೀವ್ರ ಆಕ್ರೋಶವ್ಯಕ್ತವಾಗಿದೆ.

ಕೃಷಿ ಕಾರ್ಯಕ್ರಮಗಳು, ಕೃಷಿ ಚಟುವಟಿಕೆಗಳಿಗೆ ಮೀಸಲಾದ ರಾಯಚೂರು ವಿವಿ ಕ್ಯಾಂಪಸ್‍ನಲ್ಲಿ ಎಂಎಲ್‍ಸಿ ಹಾಗೂ ಎಂಎಲ್‍ಎ ಮಕ್ಕಳ ಮದುವೆ ನಡೆಯುತ್ತಿದೆ. ಈ ಕುರಿತು ಹೊಸದಾಗಿ ಬಂದಿರುವ ವಿವಿ ಕುಲಪತಿಗಳಿಗೆ ಕೇಳಿದರೇ ಈ ವಿಚಾರದ ಬಗ್ಗೆ ಮೊದಲೇ ಆಡಳಿತ ಮಂಡಳಿ ನಿರ್ಧಾರ ಮಾಡಿತ್ತು, ನನಗೇನು ಗೊತ್ತಿಲ್ಲ ಅಂತಿದ್ದಾರೆ. ಆದ್ರೆ ಸಾರ್ವಜನಿಕರು ಮಾತ್ರ ಕೃಷಿ ವಿವಿ ದುರ್ಬಳಕೆಯಾಗುತ್ತಿದೆ ಅಂತ ಕಿಡಿಕಾರಿದ್ದಾರೆ.

ಈ ಕುರಿತು ಬಸವರಾಜ್ ಪಾಟೀಲ್ ಇಟಗಿ ಅವರನ್ನ ಪ್ರಶ್ನಿಸಿದರೆ, ವಿವಿ ಆವರಣದಲ್ಲಿ ಇದೇ ಮೊದಲ ಮದುವೆ ಸಮಾರಂಭವಲ್ಲ ಈ ಹಿಂದೆಯೂ ಅನೇಕ ಕಾರ್ಯಕ್ರಮ ನಡೆದಿವೆ. ನಾನು ಇದೇ ಕೃಷಿ ವಿವಿಯಲ್ಲಿ ಓದಿದ್ದೇನೆ, ಮೂರು ವರ್ಷ ಉಪನ್ಯಾಸಕನಾಗಿ ಕೆಲಸ ಮಾಡಿದ್ದೇನೆ ಅಲ್ಲದೆ 1 ಲಕ್ಷ ರೂಪಾಯಿ ಬಾಡಿಗೆ ನೀಡಿ ಮದುವೆ ಕಾರ್ಯಕ್ರಮ ಮಾಡುತ್ತಿದ್ದೇನೆ ಅಂತ ಬಸವರಾಜ್ ಪಾಟೀಲ್ ಇಟಗಿ ಹೇಳಿದ್ದಾರೆ.

ಈ ಹಿಂದೆ ಭದ್ರತಾ ದೃಷಿಯಿಂದ ರಾಹುಲ್ ಗಾಂಧಿ, ನರೇಂದ್ರ ಮೋದಿ ಕಾರ್ಯಕ್ರಮಗಳನ್ನೂ ಇದೇ ಸ್ಥಳದಲ್ಲಿ ಮಾಡಲಾಗಿತ್ತು. ಆದ್ರೆ ಈಗ ಸಂಪೂರ್ಣ ಖಾಸಗಿ ಕಾರ್ಯಕ್ರಮಕ್ಕೆ ಕೃಷಿ ವಿ.ವಿ. ಬಳಕೆಯಾಗುತ್ತಿರುವುದಕ್ಕೆ ಸ್ಥಳೀಯರು ಹಾಗೂ ರೈತರು ಬೇಸರ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published.

Back to top button