ಹುಬ್ಬಳ್ಳಿ: ಪುರಾತನ ಮೂರ್ತಿಗಳನ್ನು ಮನೆಯಲ್ಲಿಟ್ಟು ಪೂಜೆ ಮಾಡಿದರೆ ಐಶ್ವರ್ಯ ದೊರೆಯುತ್ತದೆ ಎಂದು ನಂಬಿಸಿ ವಂಚನೆ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದ ನಿವಾಸಿಗಳಾದ ನಿರುಪಾದಿ ಸಮಳಾಪೂರ, ಕುಂದಗೋಳದ ಹೈದರ್ ಅಲಿ ಭಾವಿಕಟ್ಟಿ ಹಾಗೂ ರಸೂಲ್ ಮಿಯಾ ಮುಲ್ಲಾ ಬಂಧಿತ ಆರೋಪಿಗಳು. ಇವರು ನಮ್ಮಲ್ಲಿ ಪುರಾತನ ಕಾಲದ ಮೂರ್ತಿಗಳು ಇವೆ. ಇವನ್ನು ಮನೆಯಲ್ಲಿಟ್ಟುಕೊಂಡು ಪೂಜೆ ಮಾಡಿದರೆ ನಿಮಗೆ ಇಷ್ಟಾರ್ಥ ಸಿದ್ಧಿ ಹಾಗೂ ಐಶ್ವರ್ಯ ಪ್ರಾಪ್ತಿಯಾಗುತ್ತದೆ ಎಂದು ಗ್ರಾಹಕರನ್ನು ನಂಬಿಸಿ ವಂಚಿಸುತ್ತಿದ್ದರು. ಇವರ ಮಾತಿಗೆ ಗ್ರಾಹಕರು ಮರುಳಾಗಿ ಲಕ್ಷಾಂತರ ರೂಪಾಯಿ ನೀಡಿ ಕಂಚಿನ ಮೂರ್ತಿಗಳನ್ನು ಪಡೆದುಕೊಂಡಿದ್ದಾರೆ.
ಆರೋಪಿಗಳು ಮಾರುತ್ತಿದ್ದ ಮೂರ್ತಿಗಳು ಕಂಚಿನ ಮೂರ್ತಿಗಳಾಗಿದ್ದು, ಯಾವುದು ಪುರಾತನ ಮೂರ್ತಿಗಳಲ್ಲ ಎಂದು ವಂಚನೆಗೊಳಗಾದ ಜನರು ಪೊಲೀಸರಿಗೆ ದೂರು ನೀಡಿದ್ದರು. ನಗರದಲ್ಲಿ ಇದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು ದೂರು ದಾಖಲಾಗಿದ್ದವು. ಈ ಹಿನ್ನೆಲೆಯಲ್ಲಿ ಹಳೆ ಹುಬ್ಬಳ್ಳಿ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಮೂವರು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಬಂಧಿತರಿಂದ ಒಂದು ಆಟೋ ಮತ್ತು ಎರಡು ಕಂಚಿನ ಮೂರ್ತಿಗಳನ್ನು ವಶಪಡಿಸಿಕೊಂಡಿದ್ದಾರೆ.