ಬೆಳಗಾವಿ: ನಗರದಲ್ಲಿ ಯಾವುದೇ ಪ್ರತಿಭಟನೆಗಳು ನಡೆಯಲಿ ಏಕಾಏಕಿ ಕಲ್ಲು ತೂರಾಟಗಳು ನಡೆದು ನಂತರ ನಾಲ್ಕೈದು ದಿನಗಳು ಖಾಕಿ ನಿದ್ದೆಗೆಟ್ಟು ಕಿಡಿಗೇಡಿಗಳನ್ನು ಬಂಧಿಸುವ ಕಾರ್ಯದಲ್ಲಿ ತೊಡಗುತ್ತಿತ್ತು. ಆದರೆ ಪೌರತ್ವ ವಿರೋಧಿಸಿ ಕೆಲ ಸಂಘಟನೆಗಳು ಬೆಳಗಾವಿ ನಗರಲ್ಲಿ ಪ್ರತಿಭಟನೆ ಹಾಗೂ ರಸ್ತೆ ತಡೆ ನಡೆಸಿದ್ದವು. ಇದನ್ನೇ ಬಂಡವಾಳವಾಗಿಸಿಕೊಂಡ ಕೆಲ ಯುವಕರ ಗುಂಪು ಕಲ್ಲು ತೂರಾಟ ನಡೆಸಿ ನಗರ ಸಂಚಾರಿ ಬಸ್‍ಗಳನ್ನು ಜಖಂಗೊಳಿಸಿದ್ದಾರೆ.
ಈ ಬಾರಿ ಬೆಳಗಾವಿ ನಗರ ಪೋಲಿಸರ ಕಣ್ಗಾವಲು ಪಡೆ ಕೆಲ ಆಯಾಕಟ್ಟಿನ ಸ್ಥಳಗಳಲ್ಲಿ ಗುಪ್ತವಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದರು. ಅಹಿತಕರ ಘಟನೆ ನಡೆಯುತ್ತಿದ್ದಂತೆ ಸಿಸಿಟಿವಿಯ ಹದ್ದಿನ ಕಣ್ಣಿನಲ್ಲಿ ಕೆಲ ದೃಶ್ಯಗಳು ಸೆರೆಯಾಗಿದ್ದವು. ಈ ದೃಶ್ಯಗಳನ್ನೇ ಸ್ಟಿಲ್ ಮಾಡಿ ನೋಡಿ, ಕಲ್ಲು ತೂರಾಟದಲ್ಲಿ ಭಾಗಿಯಾಗಿದ್ದ ವಾಸಿಂ ಮೊಕಾಶಿ, ಮೊಹ್ಮದತಾಹಿರ್ ಹಾಗೂ ಅಮಾನುಲ್ಲಾನನ್ನು ಪೊಲೀಸರು ಬಂಧಿಸಿದ್ದಾರೆ.
Advertisement
Advertisement
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧ ಪ್ರತಿಭಟನೆ ಹಿನ್ನೆಲೆ ಬೆಳಗಾವಿ ನಗರ ಮತ್ತು ಬೆಳಗಾವಿ ಉತ್ತರ ವಲಯ ಐಜಿಪಿ ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಹಲವರಿಗೆ ಇದರ ಬಿಸಿ ತಟ್ಟಿದೆ.
Advertisement
ಪೋಲಿಸರಿಗೂ ತಟ್ಟಿದ ಬಿಸಿ:
ಪೌರತ್ವ ನಿಷೇಧ ಕಾಯ್ದೆ ವಿಚಾರವಾಗಿ ಉತ್ತರ ವಲಯ ಐಜಿಪಿ ನಿಷೇಧಾಜ್ಞೆ ಜಾರಿಗೊಳಿಸುತ್ತಿದ್ದಂತೆ ಬೆಳಗಾವಿ ನಗರದಲ್ಲಿ ನಡೆಯುತ್ತಿದ್ದ ಪೊಲೀಸ್ ಕ್ರೀಡಾಕೂಡ ದಿಢೀರ್ ರದ್ದಾಗಿದೆ. ಒಂದು ವರ್ಷದಿಂದ ತಯಾರಿ ನಡೆಸಿದ್ದ ಇಲಾಖೆಯ ಕ್ರೀಡಾಪಟುಗಳಿಗೆ ಇದರಿಂದ ಭಾರೀ ನಿರಾಸೆಯುಂಟಾಗಿದೆ.
Advertisement
ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದ ಸ್ಪರ್ಧೆಗಳನ್ನು ಮೊಟಕುಗೊಳಿಸಿ, ತಕ್ಷಣ ತುರ್ತು ಕರ್ತವ್ಯಕ್ಕೆ ಹಾಜರಾಗಿ ಎಂದು ಎಸ್‍ಪಿ ಅವರು ಬೆಳಗಾವಿ ಮೈದಾನದಲ್ಲಿ ಘೋಷಿಸುತ್ತಿದ್ದಂತೆ ವಾಲಿಬಾಲ್, ಕಬಡ್ಡಿ, ರನ್ನಿಂಗ್ ರೇಸ್, ಉದ್ದ ಜಿಗಿತ, ಎತ್ತರ ಜಿಗಿತ ಎಲ್ಲಾ ಸ್ಫರ್ಧೆಗಳು ನಿಂತಿವೆ.
ಪ್ರತಿಭಟನಾನಿರತ ರೈತರು ರಾತ್ರೋರಾತ್ರಿ ಖಾಲಿ:
ಬೆಳಗಾವಿ ಜಿಲ್ಲೆ ರಾಮದುರ್ಗ ತಹಸಿಲ್ದಾರ್ ಕಚೇರಿ ಎದುರು ರೈತರು, ನಿರಾಶ್ರೀತರು ಕಳೆದ ಎರಡು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರು. ಪೌರತ್ತ ತಿದ್ದುಪಡಿ ಕಾಯ್ದೆ ಕುರಿತು ರಾಜ್ಯ ಮತ್ತು ರಾಷ್ಟ್ರದಾದ್ಯಂತ ವಾತಾವರಣ ಚೆನ್ನಾಗಿಲ್ಲ. ಈಗಾಗಲೇ ಸೆಕ್ಷನ್ 144 ಜಾರಿಯಾಗಿದೆ ಎಂದು ಪೊಲೀಸರು ಪ್ರತಿಭಟನಾನಿರತ ರೈತರಿಗೆ ಹೇಳಿದರು. ಇದನ್ನು ನಂಬದ ರೈತರು ಕೆಲ ಗಂಟೆಗಳ ಕಾಲ ಈ ಕುರಿತು ಚರ್ಚೆ, ವಿಮರ್ಶೆ ನಡೆಸಿ ಕಡೆಗೆ ಮಧ್ಯರಾತ್ರಿ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದಿದ್ದಾರೆ. ಮೂರು ದಿನಗಳಿಂದ ರೈತರ ಪ್ರತಿಭಟನೆಯಿಂದ ಕಂಗಾಲಾಗಿದ್ದ ರಾಮದುರ್ಗ ತಹಸಿಲ್ದಾರ್ ಅವರಿಗೆ ಈ ನಿಷೆದಾಜ್ಞೆ ವರವಾಗಿ ಪರಿಣಮಿಸಿದೆ.
ಕಂಡಲ್ಲಿ ಗುಂಡು:
ಪ್ರತಿಭಟನೆ ಹೆಸರಿನಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಹಾನಿ ಮಾಡುವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಬಸ್, ರೈಲು ಬೋಗಿಗಳಿಗೆ ಬೆಂಕಿ ಹಚ್ಚಿದವರನ್ನು ಕಂಡಲ್ಲಿ ಗುಂಡಿಟ್ಟು ಕೊಲ್ಲಬೇಕು ಎಂದು ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ಸುರೇಶ ಅಂಗಡಿ ಪುನರುಚ್ಚರಿಸಿದ್ದಾರೆ. ಬುಧವಾರ ಘಟಪ್ರಭಾ ರೈಲು ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಈ ಬಗ್ಗೆ ಸಚಿವರು ಪ್ರತಿಕ್ರಿಯಿಸಿದ್ದರು.