ಹುಬ್ಬಳ್ಳಿ: ಎಂಇಎಸ್ ಪುಂಡರ ಪುಂಡಾಟಿಕೆ ಖಂಡಿಸುವೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.
ಬೆಳಗಾವಿಯಲ್ಲಿ ತಡರಾತ್ರಿ ಪುಂಡರು ಹಿಂಸಾಚಾರ ಕೃತ್ಯವೆಸಗಿದ್ದು, ಸಂಗೊಳ್ಳಿ ರಾಯಣ್ಣ ಪುತ್ಥಾಳಿಗೆ ಹಾನಿಗೊಳಿಸಿ, ಬಸ್, ಹಾಗೂ ಸರ್ಕಾರಿ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಇದೀಗ ಬೆಳಗಾವಿ ಪೊಲೀಸರು 27 ಆರೋಪಿಗಳನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ MES ಪುಂಡರ ಅಟ್ಟಹಾಸ – ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ, ಬಸ್ ಮೇಲೆ ಕಲ್ಲು ತೂರಾಟ
ಈ ಕುರಿತಂತೆ ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬೊಮ್ಮಾಯಿ ಅವರು, ಎಂಇಎಸ್ ಪುಂಡಾಟಿಕೆಯನ್ನು ಖಂಡಿಸುತ್ತೇನೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಈಗಾಗಲೇ ಹಲವರನ್ನು ಬಂಧಿಸಲಾಗಿದೆ. ಸಾರ್ವಜನಿಕರ ಆಸ್ತಿ ಹಾನಿ ಮಾಡುವುದು ಕಾನೂನುಬಾಹಿರ. ಪುಂಡಾಟಿಕೆ ಹಿಂದೆ ಹಲವು ಕಾರಣಗಳಿವೆ. ಈ ವಿಚಾರವಾಗಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ದುಷ್ಟಶಕ್ತಿಗಳಿಗೆ ಕನ್ನಡಿಗರು ಹೆದರೋಲ್ಲ, ಕನ್ನಡಿಗರ ಶಕ್ತಿ ಪ್ರದರ್ಶಿಸುವ ಕಾಲ ಬಂದಿದೆ: ಹೆಚ್‍ಡಿಕೆ
ರಾಷ್ಟ್ರಭಕ್ತರ ಪ್ರತಿಮೆಗಳನ್ನ ಗೌರವಿಸಬೇಕು. ಅವರಿಗೆ ಅಪಮಾನ ಮಾಡಬಾರದು. ಸಮಾಜದಲ್ಲಿ ಕ್ಷೋಭೆ ಉಂಟು ಮಾಡುವುದು ಸರಿಯಲ್ಲ. ಪೊಲೀಸರಿಗೆ ದೀರ್ಘಾವಧಿ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದೇನೆ. ಇದು ಪುರ್ನಾವರ್ತನೆ ಆಗದಂತೆ ಸೂಚಿಸಿದ್ದೇನೆ ಎಂದು ತಿಳಿಸಿದ್ದೇನೆ ಎಂದು ಹೇಳಿದ್ದಾರೆ.