‘ಪುಲ್ವಾಮಾ ದಾಳಿ ಬಳಿಕ ಮೋದಿ ಆಹಾರವನ್ನೇ ಸೇವಿಸಿರಲಿಲ್ಲ’

Public TV
2 Min Read
MODI 1

– ತಡವಾಗಿ ಮಾಹಿತಿ ತಿಳಿಸಿದ್ದಕ್ಕೆ ಕೋಪಗೊಂಡಿದ್ದ ಮೋದಿ
– ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ಸಿನಿಂದ ಸುಳ್ಳು ಆರೋಪ: ಬಿಜೆಪಿ

ನವದೆಹಲಿ: ಪುಲ್ವಾಮಾ ದಾಳಿಯ ಬಗ್ಗೆ ಮಾಹಿತಿ ತಿಳಿದ ಬಳಿಕ ಪ್ರಧಾನಿ ಮೋದಿ ಆಹಾರವನ್ನೇ ಸ್ವೀಕರಿಸಲಿಲ್ಲ ಎಂದು ಪ್ರಧಾನಿ ಕಚೇರಿಯ ಮೂಲಗಳನ್ನು ಆಧರಿಸಿ ಮಾಧ್ಯಮವೊಂದು ವರದಿ ಮಾಡಿದೆ.

ಪುಲ್ವಾಮಾ ದಾಳಿ ನಡೆದ ಬಳಿಕವೂ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದರು ಎಂದು ಕಾಂಗ್ರೆಸ್ ಆರೋಪಿಸಿದೆ. ಆದರೆ ದಾಳಿ ವಿಚಾರವನ್ನು ತಡವಾಗಿ ತಿಳಿಸಿದ್ದಕ್ಕೆ ಮೋದಿ ಅಧಿಕಾರಿಗಳ ವಿರುದ್ಧ ಗರಂ ಆಗಿದ್ದರು ಎಂದು ಮೂಲಗಳು ತಿಳಿಸಿವೆ.

MODI 1

ಫೆ.14 ರಂದು ಪ್ರಧಾನಿ ಮೋದಿ ಪೂರ್ವ ನಿಗದಿಯಾದ ಕಾರ್ಯಕ್ರಮದಂತೆ ಬೆಳಗ್ಗೆ ಪಕ್ಷದ ಸಮಾವೇಶದಲ್ಲಿ ಭಾಗವಹಿಸಲು ಉತ್ತಾರಖಂಡ್‍ಗೆ ಆಗಮಿಸಿದ್ದರು. ಬೆಳಗ್ಗೆ ಡೆಹ್ರಾಡೂನ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮೋದಿ 7:05ಕ್ಕೆ ರುದ್ರಪುರಕ್ಕೆ ಹೋಗಬೇಕಿತ್ತು. ಆದರೆ ಹವಾಮಾನ ವೈಪರಿತ್ಯದಿಂದಾಗಿ ಮಿಗ್-17 ಸೇನಾ ಹೆಲಿಕಾಪ್ಟರ್ ಟೇಕಾಫ್ ಆಗಿರಲಿಲ್ಲ. 11 ಗಂಟೆಗೆ ಹೆಲಿಕಾಪ್ಟರ್ ಟೇಕಾಫ್ ಆಗಿ ಮಧ್ಯಾಹ್ನ 12.30ಕ್ಕೆ ಬಿಜ್ನೋರ್ ಜಿಲ್ಲೆಯ ಬಿಕ್ಕವಾಲಾಕ್ಕೆ ಬಂದು ಅಲ್ಲಿಂದ ರಸ್ತೆ ಮೂಲಕ ಪ್ರಯಾಣ ಬೆಳೆಸಿ `ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ’ ಕ್ಕೆ ಆಗಮಿಸಿದ್ದರು.

ಉತ್ತರಾಖಂಡ್‍ನ ರಾಮಗಂಗಾ ನದಿ ತಟದಲ್ಲಿರುವ ಜಿಮ್ ಕಾರ್ಬೆಟ್ ಪಾರ್ಕ್ ಹುಲಿಗಳಿಗೆ ಪ್ರಸಿದ್ಧವಾಗಿದ್ದು ಇಲ್ಲಿ ಟೈಗರ್ ಸಫಾರಿ, ಇಕೋ ಟೂರಿಸಂ ಹಾಗೂ ರೆಸ್ಕ್ಯೂ ಸೆಂಟರ್ ಉದ್ಘಾಟನೆ ಮಾಡಿದ ಬಳಿಕ ಕಾಲಾಘರ್ ಧಿಕಾಲಾ ಅರಣ್ಯಕ್ಕೆ ಮೊಟಾರ್ ಬೋಟ್ ಮೂಲಕ ತಲುಪಿದ್ದರು.

modi delhi

ನಿಗದಿಯಾದ ವೇಳಾಪಟ್ಟಿಯ ಪ್ರಕಾರ ಸಂಜೆ ರುದ್ರಾಪೂರದಲ್ಲಿ ಸಾರ್ವಜನಿಕ ಸಮಾರಂಭವನ್ನು ಉದ್ದೇಶಿಸಿ ಮೋದಿ ಮಾತನಾಡಬೇಕಿತ್ತು. ಆದರೆ ಈ ವೇಳೆ ಪುಲ್ವಾಮಾ ದಾಳಿಯ ಬಗ್ಗೆ ಮಾಹಿತಿ ಲಭಿಸುತ್ತದೆ. ಪರಿಣಾಮ ಸಮಾರಂಭವನ್ನು ರದ್ದು ಮಾಡಿ, ರಾಷ್ಟ್ರಿಯ ಭದ್ರತಾ ಸಲಹೆಗಾರ ಹಾಗೂ ಗೃಹ ಸಚಿವ ರಾಜ್‍ನಾಥ್ ಸಿಂಗ್, ಜಮ್ಮು ಕಾಶ್ಮೀರದ ರಾಜ್ಯಪಾಲರೊಂದಿಗೆ ಮಾತನಾಡಿ ಮಾಹಿತಿ ಪಡೆದಿದ್ದರು.

ದಾಳಿಯ ನಡೆದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಡವಾಗಿ ಮಾಹಿತಿ ಲಭಿಸಿತ್ತು. ಇದರಿಂದ ಮೋದಿ ಅಸಮಾಧಾನಗೊಂಡಿದ್ದರು. ದಾಳಿ ಬಗ್ಗೆ ಮಾಹಿತಿ ತಿಳಿದ ಬಳಿಕ ಮೋದಿ ಆಹಾರ ಸೇವಿಸಲಿಲ್ಲ. ದೆಹಲಿಗೆ ಮರಳಲು ಹೆಲಿಕಾಪ್ಟರ್ ಹಾರಾಟ ನಡೆಸಲು ಅನುಕೂಲಕರ ವಾತಾವರಣ ಇಲ್ಲದ ಕಾರಣ ಸಂಜೆ ರಾಮ್‍ನಗರದಿಂದ ಬರೇಲಿಯವರೆಗೆ ರಸ್ತೆ ಮಾರ್ಗದಲ್ಲಿ ಆಗಮಿಸಿ ಬಳಿಕ ರಾತ್ರಿ ದೆಹಲಿಗೆ ಮೋದಿ ಆಗಮಿಸಿದ್ದರು ಮೂಲಗಳು ತಿಳಿಸಿವೆ.

ಪುಲ್ವಾಮಾ ದಾಳಿ ನಡೆದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಶೂಟಿಂಗ್ ನಲ್ಲಿ ತೊಡಗಿದ್ದರು ಎಂದು ಕಾಂಗ್ರೆಸ್ ಆರೋಪ ಮಾಡಿದ್ದು, ಯೋಧರ ಮೇಲೆ ದಾಳಿ ನಡೆದರು ಕೂಡ ಶೂಟಿಂಗ್‍ನಲ್ಲಿ ಮೋದಿ ಬ್ಯುಸಿ ಆಗಿದ್ದರು, ಇಂತಹ ಪ್ರಧಾನಿಯನ್ನು ನೋಡಿದ್ದಿರಾ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ಪ್ರಶ್ನಿಸಿದ್ದರು.

ದಾಳಿ ನಡೆದ ದಿನ ಮೋದಿಅವರು ಸಂಜೆ 7 ಗಂಟೆವರೆಗೂ ಶೂಟಿಂಗ್ ನಡೆಸಿದ್ದರು. ಅಲ್ಲದೇ ದಾಳಿಯ ಬಳಿಕವೂ ರಾಯ್‍ಪುರ ಗೆಸ್ಟ್ ಹೌಸ್‍ನಲ್ಲಿ ಮೋದಿ ಟೀ ಮತ್ತು ಸಮೋಸ ಸೇವಿಸಿದ್ದರು ಎಂದು ಆರೋಪಿಸಿದ್ದರು. ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಅವರು ಕೂಡ ಕಾಂಗ್ರೆಸ್ ಆರೋಪವನ್ನು ತಿರಸ್ಕರಿಸಿದ್ದು ರಾಜಕೀಯ ಲಾಭಕ್ಕಾಗಿ ಸುಳ್ಳು ಆರೋಪ ಮಾಡುತ್ತಿದೆ ಎಂದು ತಿರುಗೇಟು ನೀಡಿದ್ದಾರೆ. ಇದುವರೆಗೂ ಶೂಟಿಂಗ್ ನಲ್ಲಿ ಮೋದಿ ಭಾಗವಹಿಸಿದ್ದ ಬಗ್ಗೆ ವಾಹಿನಿ ಯಾವುದೇ ಅಧಿಕೃತ ಹೇಳಿಕೆಯನ್ನ ನೀಡಿಲ್ಲ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *