– ಮೋದಿ ಮಹಾನ್ ವ್ಯಕ್ತಿ; ಮತ್ತೆ ಹೊಗಳಿದ ಟ್ರಂಪ್
ವಾಷಿಂಗ್ಟನ್: ಒಂದು ಕಡೆ ಭಾರತ ಹಾಗೂ ಪ್ರಧಾನಿ ನರೇಂದ್ರ ಮೋದಿ (Narendra Modi) ಜೊತೆಗಿನ ಬಾಂಧವ್ಯವನ್ನು ಪದೇ ಪದೇ ಹೊಗಳುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump), ಮತ್ತೊಂದು ಕಡೆ ವ್ಯಾಪಾರ ಯುದ್ಧವನ್ನು ಮುಂದುವರಿಸಿದ್ದಾರೆ. ಇದೆಲ್ಲದರ ನಡುವೆ ಮುಂದಿನ ವರ್ಷ ತಾವು ಭಾರತಕ್ಕೆ ಭೇಟಿ ನೀಡುವ ಸುಳಿವು ಕೊಟ್ಟಿದ್ದಾರೆ.
ತೂಕ ಇಳಿಸುವ ಔಷಧಿಗಳ ಬೆಲೆಗಳನ್ನು ಕಡಿಮೆ ಮಾಡುವ ಹೊಸ ಯೋಜನೆಯನ್ನು ಅನಾವರಣಗೊಳಿಸಿದ ನಂತರ ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಮೋದಿ ಒಬ್ಬ ಮಹಾನ್ ವ್ಯಕ್ತಿ, ನನ್ನ ಒಳ್ಳೆಯ ಸ್ನೇಹಿತ ಕೂಡ. ಎರಡೂ ರಾಷ್ಟ್ರಗಳ ನಡುವಿನ ವ್ಯಾಪಾರ ಸಂಬಂಧಗಳನ್ನು ಬಲಪಡಿಸುವ ಪ್ರಯತ್ನಗಳ ಭಾಗವಾಗಿ ಮುಂದಿನ ವರ್ಷ ನಾನು ಭಾರತಕ್ಕೆ ಭೇಟಿ (India Visit) ನೀಡಬಹುದು ಎಂದ ತಿಳಿಸಿದ್ದಾರೆ.
ಮುಂದುವರಿದು.. ಪ್ರಧಾನಿ ಮೋದಿ ಅವರೊಂದಿಗಿನ ತಮ್ಮ ಸಂಭಾಷಣೆಗಳು ಸಕಾರಾತ್ಮಕವಾಗಿ ಪ್ರಗತಿಯಲ್ಲಿವೆ. ನಾನು ಭಾರತಕ್ಕೆ ನೀಡಬೇಕೆಂದು ಅವರು ಬಯಸುತ್ತಾರೆ. ರಷ್ಯಾದಿಂದ ತೈಲ (Russian Oil) ಖರೀದಿಯನ್ನು ನಿಲ್ಲಿಸಿದ್ದಾರೆ. ಅವರೊಂದಿಗಿನ ಪ್ರವಾಸ ಉತ್ತಮವಾಗಿರಲಿದೆ. ಎಲ್ಲಾ ವ್ಯಾಪಾರ ಮಾತುಕತೆಗಳು ಉತ್ತಮವಾಗಿ ನಡೆಯುತ್ತಿವೆ. ಈ ಸಂಬಂಧವನ್ನು ಇನ್ನಷ್ಟು ಬಲಪಡಿಸುವುದರ ಭಾಗವಾಗಿ ಭಾರತಕ್ಕೆ ಮುಂದಿನ ವರ್ಷ ಭೇಟಿ ನೀಡಬಹುದು ಎಂದು ಹೇಳಿದ್ದಾರೆ.
50% ಸುಂಕ ಇಳಿಕೆ ಮಾಡದ ಟ್ರಂಪ್
ರಷ್ಯಾದ ತೈಲ ಖರೀದಿ ಮಾಡುವ ಮೂಲಕ ಉಕ್ರೇನ್ ವಿರುದ್ಧದ ಯುದ್ಧಕ್ಕೆ ಭಾರತ ಫಂಡಿಂಗ್ ಮಾಡುತ್ತಿದೆ ಅನ್ನೋದು ಅಮೆರಿಕದ ಬಲವಾದ ಆರೋಪ. ಇದೇ ಕಾರಣಕ್ಕೆ ಭಾರತದ ಮೇಲೆ 25% ವಿಧಿಸಿದ್ದ ಆಮದು ಸುಂಕವನ್ನ 50%ಗೆ ಏರಿಕೆ ಮಾಡಿದೆ. ಪದೇ ಪದೇ ಭಾರತದ ಸಂಬಂಧವನ್ನು ಹೊಗಳುತ್ತಿರುವ ಟ್ರಂಪ್ ಈವರೆಗೆ ಸುಂಕ ಇಳಿಸುವ ನಿರ್ಧಾರ ಮಾಡಿಲ್ಲ. ಆದ್ರೆ ಮುಂದಿನ ವರ್ಷ ಭಾರತಕ್ಕೆ ಭೇಟಿ ನೀಡುವುದರ ಒಳಗಾಗಿ ಸುಂಕದ ಪ್ರಮಾಣ ಇಳಕೆಯಾಗಬಹುದು ಎಂದು ವರದಿಗಳು ತಿಳಿಸಿವೆ.



