ಇತ್ತೀಚೆಗೆ ಚೀನಾ ಪ್ರವಾಸ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ, ಟಿಯಾನ್‌ಜಿನ್‌ನಲ್ಲಿ ನಡೆದ ಶಾಂಘೈ ಶೃಂಗಸಭೆ (SCO Summit) ವೇಳೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ರನ್ನ ಭೇಟಿಯಾಗಿದ್ದರು. ಸಭೆ ನಡೆದ ಸ್ಥಳದಿಂದ ದ್ವಿಪಕ್ಷೀಯ ಮಾತುಕತೆ ನಡೆಯುವ ಸ್ಥಳಕ್ಕೆ ಇಬ್ಬರು ವಿಶ್ವನಾಯಕರು ಜೊತೆಯಾಗಿ ʻಔರಸ್ ಸೆನಾಟ್ ಲಿಮೋಸಿನ್ʼ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದರು. ಕಾರಿನಲ್ಲಿಯೇ ಪರಸ್ಪರ 20 ನಿಮಿಷಕ್ಕೂ ಅಧಿಕ ಸಮಯ ಮಾತುಕತೆ ಕೂಡ ನಡೆಸಿದ್ದರು. ಕಾರಿನಲ್ಲಿ ಕುಳಿತಿದ್ದ ಫೋಟೋಗಳನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದರು. ಫೋಟೋ ವೈರಲ್ ಆಗ್ತಿದ್ದಂತೆ ಇಬ್ಬರು ನಾಯಕರು ಕುಳಿತಿದ್ದ ಕಾರಿನ ಬಗ್ಗೆ ತಿಳಿದುಕೊಳ್ಳಲು ಬಹಳಷ್ಟು ಮಂದಿ ಸೋಷಿಯಲ್ ಮೀಡಿಯಾದಲ್ಲಿ ಹುಡುಕಾಡಿದ್ದರು. ಅದೇ ಸಮಯದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಾರಿನ ಬಗ್ಗೆಯೂ ತಿಳಿಯುವ ಕುತೂಹಲದಿಂದ ಕೆಲವರು ಸರ್ಚಿಂಗ್ ಮಾಡಿದ್ದರು. ನಿಮಗೂ ಆ ಕುತೂಹಲ ಇದ್ದರೆ ಮುಂದೆ ಓದಿ.. ಟ್ರಂಪ್ ಅವರ ʻಬೀಸ್ಟ್ʼ ಹಾಗೂ ಪುಟಿನ್‌ರ ʻಔರಸ್ ಸೆನಾಟ್ ಲಿಮೋಸಿನ್ʼ ಕಾರುಗಳ ವಿಶೇಷತೆ ಏನು? ಯಾವ ಕಾರು ಎಷ್ಟು ಸೇಫ್ ಅನ್ನೋ ಮಾಹಿತಿ ಇಲ್ಲಿದೆ.
ಪುಟಿನ್ ಯಾವ ಕಾರಿನಲ್ಲಿ ಪ್ರಯಾಣಿಸ್ತಾರೆ?
ʻಔರಾಸ್ ಸೆನಾಟ್ ಲಿಮೋಸಿನ್ ಸೆಡಾನ್ʼ ಇದು ರಷ್ಯಾದ ಅಧ್ಯಕ್ಷರಿಗಾಗಿಯೇ ಅಧಿಕೃತವಾಗಿ ಮೀಸಲಾಗಿರುವ ಕಾರು. Au ಅಂದ್ರೆ ʻಔರಮ್ʼ, ಲ್ಯಾಟಿನ್ ಅಂದ್ರೆ ಚಿನ್ನ ಮತ್ತು ರಸ್ ಅಂದ್ರೆ ರಷ್ಯಾ, ಹಾಗಾಗಿಯೇ ಈ ಹೆಸರು ಇಡಲಾಗಿದೆ. 2018ರಲ್ಲಿ ಪುಟಿನ್ ಬದಲಾಯಿಸಿದ ನಾಲ್ಕನೇ ಕಾರು ಇದಾಗಿದೆ. ಇದಕ್ಕೂ ಮುನ್ನ ಪುಟಿನ್ ʻಹಳೆಯ ಮರ್ಸಿಡಿಸ್ ಬೆಂಜ್ S600 ಗಾರ್ಡ್ ಪುಲ್‌ಮ್ಯಾನ್ʼ ಕಾರನ್ನು ಬಳಸುತ್ತಿದ್ದರು. ʻಔರಾಸ್ ಸೆನಾಟ್ ಲಿಮೋಸಿನ್ʼ ಕಾರನ್ನು ರಷ್ಯಾದ ಔರಾಸ್ ಮೋಟಾರ್ಸ್ ಉತ್ಪಾದಿಸುತ್ತದೆ. ಪ್ರಸ್ತುತ ಮಾದರಿಯು ಶಸ್ತ್ರಸಜ್ಜಿತ L700 ಲಿಮೋಸಿನ್ ಆಗಿದೆ. ಇದು ರೋಲ್ಸ್ ರಾಯ್ಸ್ ಹಾಗೂ ಬೆಂಟ್ಲಿಯ ಮಿಶ್ರಣವಾಗಿರೋದ್ರಿಂದ ಇದನ್ನ ರಷ್ಯನ್ ರೋಲ್ಸ್ ರಾಯ್ಸ್ ಅಂತ ಕರೆಯಲಾಗುತ್ತೆ.
ಪುಟಿನ್ ʻಔರಾಸ್ʼನ ವಿಶೇಷತೆ ಏನು?
ಔರಾಸ್ ಹೊರಭಾಗದಲ್ಲಿ ಅಚ್ಚುಕಟ್ಟಾದ ವಿನ್ಯಾಸ ಹೊಂದಿದ್ದು, ನೋಡುಗರನ್ನು ಆಕರ್ಷಿಸುತ್ತೆ. ಹಳೆಯ ರೋಲ್ಸ್ ರಾಯ್ಸ್ ಫ್ಯಾಂಟಮ್ ಹಾಗೂ ಜಡ್‌ಐಎಸ್-110 ಲಿಮೊಸಿನ್ ಕಾರಿನ ಹೋಲಿಕೆಯಾಗಿದೆ. ಅತ್ಯುತ್ತಮ ಗ್ರಿಲ್ ಹೊಂದಿರುವ ಬಂಪರ್, ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ಎಲ್‌ಇಡಿ ಡಿಆರ್‌ಎಲ್‌ಗಳು, ಬೆಂಟ್ಲಿ ಕಾರಿನ ರೀತಿಯಲ್ಲಿರುವ ಟೈಲ್ ಲ್ಯಾಂಪ್ ಹಾಗೂ ಅಲಾಯ್ ವ್ಹೀಲ್‌ಗಳನ್ನ ಹೊಂದಿದೆ.
ಅಷ್ಟೇ ಅಲ್ಲ ಔರಸ್ ಸೆನಾಟ್ ಸೆಡಾನ್ ಹೆಚ್ಚು ವಿಶಾಲ ಗಾತ್ರದ್ದಾಗಿದೆ. 6,630 ಎಂಎಂ ಉದ್ದ, 2,020 ಎಂಎಂ ಅಗಲ ಹಾಗೂ 1,695 ಎಂಎಂ ಎತ್ತರ ಇದೆ. 170 ಗ್ರೌಂಡ್ ಕ್ಲಿಯರೆನ್ಸ್ ಹಾಗೂ 4,300 ಎಂಎಂ ವ್ಹೀಲ್‌ಬೇಸ್‌ನ್ನು ಒಳಗೊಂಡಿದೆ. ಜೊತೆಗೆ 6,300 ಕೆಜಿ ತೂಕವಿದೆ. ಇದು 6/ 7 ಆಸನಗಳನ್ನು ಹೊಂದಿದ್ದು, ಆರಾಮದಾಯಕ ಪ್ರಯಾಣ ಒದಗಿಸಲು ನೆರವಾಗಬಲ್ಲದು. ಅಧ್ಯಕ್ಷರು ಹಾಗೂ ಚಾಲಕ/ಭದ್ರತಾ ಸಿಬ್ಬಂದಿ ಆಸನ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳಿವೆ. ಈ ಕಾರು ಮುಂಭಾಗ & ಹಿಂಭಾಗ (ರೇರ್) ಒಟ್ಟು 4 ದೊಡ್ಡ ಗಾತ್ರದ ಬಾಗಿಲುಗಳನ್ನು ಒಳಗೊಂಡಿರುತ್ತದೆ.
ಬಹುಮುಖ್ಯವಾಗಿ ಔರಸ್ ಸೆನಾಟ್ ಲಿಮೋಸಿನ್ ಸೆಡಾನ್ ಶಕ್ತಿಯುತವಾದ ಪವರ್‌ಟ್ರೇನ್‌ನ್ನು ಒಳಗೊಂಡಿದೆ. 4.4-ಲೀಟರ್ ಟ್ವಿನ್-ಟರ್ಬೊ ವಿ8 ಪೆಟ್ರೋಲ್ ಹೈಬ್ರಿಡ್ ಎಂಜಿನ್, 600 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 880 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 9-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. ಈ ಕಾರು 62 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್ ಒಳಗೊಂಡಿದೆ. 249 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ಕೇವಲ 6 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ (ಪ್ರತಿ ಗಂಟೆಗೆ ತಲುಪುವ ವೇಗ) ವೇಗ ತಲುಪುವ ಸಾಮರ್ಥ್ಯ ಇದಕ್ಕಿದೆ.
ಪುಟಿನ್ ಕಾರು ಎಷ್ಷು ಸೇಫ್?
ಔರಸ್ ಸೆನಾಟ್ ಲಿಮೋಸಿನ್ ಸೆಡಾನ್ ಪ್ರಯಾಣಿಕರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆ ನೀಡುವ ಸಾಮರ್ಥ್ಯದ್ದಾಗಿದೆ. ಬುಲೆಟ್, ಗ್ರೆನೇಡ್ ಸ್ಫೋಟ, ಇತರೆ ಕೆಮಿಕಲ್ ದಾಳಿಯನ್ನೂ ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ. ಇದರ ಕಿಟಕಿ ಗಾಜು 6 ಸೆಂ.ಮೀ ದಪ್ಪವಿದ್ದು, ಬುಲೆಟ್ ಪ್ರೊಫ್ ಆಗಿದೆ. ಜೊತೆಗೆ ಫ್ಯುಯೆಲ್ ಟ್ಯಾಂಕ್ ಬೆಂಕಿ/ಸ್ಫೋಟ ನಿರೋಧಕವಾಗಿದ್ದು, VR10 ಬ್ಯಾಲಿಸ್ಟಿಕ್ಸ್ ಮಾನದಂಡಗಳನ್ನು ಆಧರಿಸಿದ ಶಸ್ತ್ರಸಜ್ಜಿದ ಕಾರು ಇದಾಗಿದೆ. ಒಟ್ಟಿನಲ್ಲಿ ಇದೊಂದು ಮಿನಿ ಕಮಾಂಡ್ ಸಿಸ್ಟಮ್ ಎಂದೇ ಕರೆಬಹುದು.
ಡೊನಾಲ್ಟ್ ಟ್ರಂಪ್ ಪ್ರಯಾಣಿಸುವ ಕಾರು ಯಾವುದು?
ಉದ್ಯಮಿಯೂ ಆಗಿರುವ ಟ್ರಂಪ್ ಕ್ರೇಜ್‌ಗಾಗಿ ರೋಲ್ಸ್ ರಾಯ್ಸ್ ಸಿಲ್ವರ್ ಕ್ಲೌಡ್, ಮರ್ಸಿಡಿಸ್ ಮೆಕ್‌ಲಾರೆನ್ ಎಸ್‌ಎಲ್‌ಆರ್, ಲ್ಯಾಂಬೋರ್ಘಿನಿ ಡಯಾಬ್ಲೊ VT ರೋಡ್‌ಸ್ಟರ್, ಕ್ಯಾಡಿಲಾಕ್ ‘ಟ್ರಂಪ್’ ಲಿಮೋ ಕಾರುಗಳನ್ನು ಹೊಂದಿದ್ದಾರೆ. ಕಳೆದ ಮಾರ್ಚ್‌ನಲ್ಲಿ ಟ್ರಂಪ್ ಎಲಾನ್ ಮಸ್ಕ್ ಕಂಪನಿ ಟೆಸ್ಲಾದಿಂದ ಕೆಂಪು ಬಣ್ಣದ ಕಾರನ್ನು ಖರೀದಿಸಿದ್ದರು. ಆದ್ರೆ ಇದ್ಯಾವುದೂ ಅವರ ಅಧಿಕೃತ ಕಾರು ಅಲ್ಲ. ವಿಶ್ವದಲ್ಲೇ ಅತ್ಯಂತ ಶಕ್ತಿಶಾಲಿಯಾದ ʻದಿ ಬೀಸ್ಟ್ʼ ಟ್ರಂಪ್ ಅವರ ಅಧಿಕೃತ ಕಾರು ಆಗಿದೆ. ಅಮೆರಿಕದ ಅಧ್ಯಕ್ಷರಿಗಾಗಿಯೇ ಸಿದ್ಧಪಡಿಸಲಾದ ಕಾರು ಇದಾಗಿದೆ. ಮಾಜಿ ಅಧ್ಯಕ್ಷ ಜೋ ಬೈಡನ್ ಕೂಡ ಇದೇ ಕಾರನ್ನು ಬಳಸುತ್ತಿದ್ದರು.
ʻದಿ ಬೀಸ್ಟ್’ ಕಾರು ಅಮೆರಿಕದ ಕ್ಯಾಡಿಲಾಕ್ ಕಂಪನಿಯ ಉತ್ಪನ್ನವಾಗಿದೆ. ಇನ್ನು ಕ್ಯಾಡಿಲಾಕ್ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ವಿಶ್ವಪ್ರಸಿದ್ಧ ಜನರಲ್ ಮೋಟಾರ್ಸ್ ಕಂಪನಿಯ ಭಾಗವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದು ಗಮನಾರ್ಹ. ಈ ಜನರಲ್ ಮೋಟಾರ್ಸ್ ಕ್ಯಾಡಿಲಾಕ್‌ನ ಮೂಲ ಕಂಪನಿಯಾಗಿದೆ. ಇದರ ಬೆಲೆ 1 ರಿಂದ 1.5 ದಶಲಕ್ಷ ಡಾಲರ್ (13.22 ಕೋಟಿ) ನಷ್ಟಿದೆ. 2018ರಲ್ಲಿ ಟ್ರಂಪ್ ಅಧ್ಯಕ್ಷತೆಯಲ್ಲಿ ʻಬೀಸ್ಟ್ʼ ಅನ್ನು ಸೇವೆಗೆ ಸೇರ್ಪಡೆಗೊಳಿಸಲಾಯಿತು.
ʻದಿ ಬೀಸ್ಟ್ʼನ ವಿಶೇಷತೆ ಏನು?
ಭಯೋತ್ಪಾದಕರ ದಾಳಿಗೂ ಬಗ್ಗದ ಈ ಕಾರು ಅದ್ಭುತ ಸುಧಾರಿತ ಭದ್ರತಾ ವೈಶಿಷ್ಟ್ಯಗಳನ್ನ ಒಳಗೊಂಡಿದೆ. 7 ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದಾದ ಬೀಸ್ಟ್ ಕಾರು 18 ಅಡಿ ಉದ್ದವಿದೆ. ಬರೋಬ್ಬರಿ 6,800 ರಿಂದ 9,100 ಕೆಜಿ ತೂಕವನ್ನು ಹೊಂದಿದೆ. ಚರ್ಮದ ಆಸನಗಳನ್ನ ಹೊಂದಿದ್ದು, ಒಳಾಂಗಣದಲ್ಲಿ ನೀರಿನ ಬಾಟಲ್‌ಗಳ ಹೋಲ್ಡರ್, ಹಾಸಿಗೆಯಂತೆ ಮಡಚುವ ಟೇಬಲ್, ಉನ್ನತಮಟ್ಟದ ಸಂವಹನ ಸಾಧನಗಳನ್ನೂ ಒಳಗೊಂಡಿದೆ. ಸ್ಯಾಟಲೈಟ್ ಫೋನ್ ಸೌಲಭ್ಯ ಕೂಡ ದಿ ಬೀಸ್ಟ್‌ನಲ್ಲಿ ಇದೆ. ಭಯೋತ್ಪಾದಕರು ರಾಸಾಯನಿಕ ದಾಳಿ ನಡೆಸಿದರೂ ‘ದಿ ಬೀಸ್ಟ್’ ಒಳಗಿರುವರಿಗೆ ಯಾವುದೇ ತೊಂದರೆಯಾಗೋದಿಲ್ಲ. ʻದಿ ಬೀಸ್ಟ್ʼ ರಾತ್ರಿಯಲ್ಲೂ ಸ್ಪಷ್ಟವಾಗಿ ನೋಡಲು ಸಹಾಯ ಮಾಡುವ ಸಾಧನಗಳನ್ನು ಹೊಂದಿದೆ. 6.6ಎಲ್ V8 ಡೀಸೆಲ್ ಟ್ಯಾಂಕ್ ಹೊಂದಿರುವ ಬೀಸ್ಟ್ 214ರಿಂದ 300 ಅಶ್ವಶಕ್ತಿ (ಹಾರ್ಸ್ ಪವರ್), 500 ರಿಂದ 600 ಪೀಕ್ ಟಾರ್ಕ್ ಸಾಮರ್ಥ್ಯ ಹೊಂದಿದೆ. ಗಂಟೆಗೆ 96 ರಿಂದ 113 ಕಿಮೀ ವೇಗದಲ್ಲಿ ಚಲಿಸುತ್ತೆ.
ಟ್ರಂಪ್ ಕಾರು ಎಷ್ಟು ಸುರಕ್ಷಿತ?
ಟ್ರಂಪ್ ಕಾರು 8 ಇಂಚಿನಷ್ಟು ದಪ್ಪದಾದ ಅಲ್ಯೂಮಿನಿಯಂ, ಸೆರಾಮಿಕ್ ಮತ್ತು ಉಕ್ಕಿನಿಂದ ಮಾಡಿದ ರಕ್ಷಣಾಕವಚ ಹೊಂದಿದ್ದು, 3 ಇಂಚಿನ ದಪ್ಪದಾದ ಬುಲೆಟ್‌ಪ್ರೋಫ್ ಗಾಜನ್ನು ಹೊಂದಿದೆ. ಇನ್ನು ಭಯೋತ್ಪಾದಕರ ವಾಹನಗಳು ಹಿಂಬಾಲಿಸಿದರೆ ಮುಂದೆ ಸಾಗಲು ಸಾಧ್ಯವಾಗದಂತೆ ರಸ್ತೆಗೆ ಎಣ್ಣೆ (ಆಯಿಲ್) ಸಿಂಪಡಿಸುವ ಸೌಲಭ್ಯ ʻದಿ ಬೀಸ್ಟ್’ ಕಾರಿನಲ್ಲಿದೆ. ಅಲ್ಲದೇ ಸ್ಮೋಕ್ ಝೋನ್ ಸೃಷ್ಟಿಸಿ ಉಗ್ರರ ಕಣ್ಣಿಗೆ ಮಣ್ಣು ಎರಚಿ ತಪ್ಪಿಸಿಕೊಳ್ಳುವ ಸೌಲಭ್ಯ ಕೂಡ ಇದೆ. ಇಂತಹ ಸೌಲಭ್ಯಗಳ ಕಾರನ್ನು ಸಿನಿಮಾಗಳಲ್ಲಿ ನೋಡಿದ್ದೇವೆ. ಈ ಕಾರಿನ ಪ್ರತಿಯೊಂದು ಡೋರ್ ಬೋಯಿಂಗ್ 757 ನಲ್ಲಿನ ಡೋರಿನ ತೂಕದಂತೆಯೇ ಇರುತ್ತದೆ. ಎಲ್ಲದಕ್ಕಿಂತ ಮುಖ್ಯವಾಗಿ ತುರ್ತು ಸಂದರ್ಭದಲ್ಲಿ ಅಧ್ಯಕ್ಷರ ಗುಂಪಿಗೆ ಹೋಲಿಕೆಯಾಗುವ ರಕ್ತ ಕೂಡ ಸ್ಟಾಕ್ ಇರಲಿದೆ.
ಪುಟಿನ್ ಕಾರು ಶಕ್ತಿಶಾಲಿಯಾದ್ರೂ ಟ್ರಂಪ್ ಕಾರು ಅದಕ್ಕಿಂತಲೂ ಹೆಚ್ಚಿನದ್ದು, ಒಂದು ದಶಕಗಳ ಹಿಂದೆ ಪುಟಿನ್ ಅಮೆರಿಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಕಾರಿನಲ್ಲಿ ಪ್ರಯಾಣಿಸಿದ್ದರು ಎಂಬುದು ಗಮನಾರ್ಹ.