ನವದೆಹಲಿ: ತ್ರಿವರ್ಣ ಧ್ವಜವು ಭಾರತೀಯರಿಗಷ್ಟೇ ಅಲ್ಲ, ವಿದೇಶಗಳಲ್ಲಿರುವ ಪ್ರಜೆಗಳಿಗೂ ರಕ್ಷಣಾತ್ಮಕ ಗುರಾಣಿಯಾಗಿದೆ ಎಂದು ತಿರಂಗಾದ ಮಹತ್ವದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಬಣ್ಣಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ತಮ್ಮ ಅಧಿಕೃತ ನಿವಾಸದಲ್ಲಿ ಕಾಮನ್ವೆಲ್ತ್- 2022 ಕ್ರೀಡಾಕೂಟದ ಎಲ್ಲಾ ಪದಕ ವಿಜೇತರೊಂದಿಗೆ ಸಂವಾದ ನಡೆಸಿದರು. ಯುದ್ಧಪೀಡಿತ ಉಕ್ರೇನ್ನಿಂದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸುವಲ್ಲಿ ತ್ರಿವರ್ಣ ಧ್ವಜದ ಮಹತ್ವವನ್ನು ಪ್ರಧಾನಿ ಈ ವೇಳೆ ಸ್ಮರಿಸಿದ್ದಾರೆ. ಇದನ್ನೂ ಓದಿ: ‘ಹರ್ ಘರ್ ತಿರಂಗ’ ರ್ಯಾಲಿ ವೇಳೆ ಮಾಜಿ ಸಿಎಂ ನಿತಿನ್ ಪಟೇಲ್ಗೆ ತಿವಿದ ಹಸು
ತ್ರಿವರ್ಣ ಧ್ವಜದ ಶಕ್ತಿ ಏನು? ನಾವು ಇದನ್ನು ಸ್ವಲ್ಪ ಕಾಲದ ಹಿಂದೆ ಉಕ್ರೇನ್ನಲ್ಲಿ ನೋಡಿದ್ದೇವೆ. ತ್ರಿವರ್ಣ ಧ್ವಜವು ಭಾರತೀಯರಿಗೆ ಮಾತ್ರವಲ್ಲದೆ ಇತರ ದೇಶಗಳಲ್ಲಿರುವ ಪ್ರಜೆಗಳಿಗೆ ಯುದ್ಧಭೂಮಿಯಿಂದ ಹೊರಬರಲು ರಕ್ಷಣಾತ್ಮಕ ಗುರಾಣಿಯಾಗಿದೆ ಎಂದು ಹೇಳಿದ್ದಾರೆ.
ಕ್ರೀಡಾಪಟುಗಳ ಕಠಿಣ ಪರಿಶ್ರಮ ಮತ್ತು ಸ್ಫೂರ್ತಿದಾಯಕ ಸಾಧನೆಯಿಂದ ದೇಶವು ‘ಆಜಾದಿ ಕಾ ಅಮೃತ್ ಕಾಲ’ವನ್ನು ಪ್ರವೇಶಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಪ್ರಧಾನಿ ಶ್ಲಾಘಿಸಿದ್ದಾರೆ. ಇದನ್ನೂ ಓದಿ: ತ್ರಿವರ್ಣ ಧ್ವಜದ ಡಿಪಿ ಹಾಕಿದ ಆರ್ಎಸ್ಎಸ್
ಇತ್ತೀಚೆಗೆ ಮುಕ್ತಾಯಗೊಂಡ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಅಥ್ಲೀಟ್ಗಳ ಸಾಧನೆಯನ್ನು ಶ್ಲಾಘಿಸಿದ ಪ್ರಧಾನಿ ಮೋದಿ, ಕ್ರೀಡಾಪಟುಗಳು ಕೇವಲ ದೇಶಕ್ಕಾಗಿ ಪದಕಗಳನ್ನು ಗೆದ್ದುಕೊಂಡಿಲ್ಲ. ‘ಏಕ ಭಾರತ, ಶ್ರೇಷ್ಠ ಭಾರತ’ ಎಂಬ ಮನೋಭಾವವನ್ನು ಬಲಪಡಿಸಿದ್ದಾರೆ. ಆ ಮೂಲಕ ಎಲ್ಲಾ ಕ್ಷೇತ್ರಗಳ ಯುವಕರನ್ನು ಪ್ರೇರೇಪಿಸಿದ್ದಾರೆ ಎಂದು ತಿಳಿಸಿದ್ದಾರೆ.
ಯುದ್ಧಪೀಡಿತ ಉಕ್ರೇನ್ನಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಭಾರತ ಸರ್ಕಾರವು ಈ ವರ್ಷದ ಆರಂಭದಲ್ಲಿ ʻಆಪರೇಷನ್ ಗಂಗಾʼ ಪ್ರಾರಂಭಿಸಿತ್ತು. ಈ ವೇಳೆ ತ್ರಿವರ್ಣ ಧ್ವಜವನ್ನು ಹಿಡಿದು ಭಾರತೀಯ ವಿದ್ಯಾರ್ಥಿಗಳು ಸುರಕ್ಷಿತವಾಗಿ ತವರಿಗೆ ಮರಳಿದ್ದರು. ಇದೇ ವೇಳೆ ಪಾಕಿಸ್ತಾನ ವಿದ್ಯಾರ್ಥಿಗಳು ಸಹ ಭಾರತದ ಧ್ವಜ ಹಿಡಿದು ಸುರಕ್ಷಿತವಾಗಿ ಹಿಂತಿರುಗಿ ಕೃತಜ್ಞತೆ ಸಲ್ಲಿಸಿದ್ದು ಸುದ್ದಿಯಾಗಿತ್ತು. ಇದನ್ನೂ ಓದಿ: ಮೋದಿ ಚೀನಾದೊಂದಿಗೆ `ರಾಷ್ಟ್ರಧ್ವಜ ಒಪ್ಪಂದ’ ಮಾಡ್ಕೊಂಡಿದ್ದಾರೆ – ರಾಹುಲ್ ಗಾಂಧಿ ಆರೋಪ
ಭಾರತದ 75ನೇ ಸ್ವಾತಂತ್ರ್ಯ ದಿನವನ್ನು ಸಂಭ್ರಮಿಸಲು ಪ್ರತಿಯೊಬ್ಬರು ತಮ್ಮ ಮನೆಯಲ್ಲಿ ತ್ರಿವರ್ಣ ಧ್ವಜ ಹಾರಿಸುವುದಕ್ಕೆ ಉತ್ತೇಜಿಸಲು ಆಜಾದಿ ಕಾ ಅಮೃತ್ ಮಹೋತ್ಸವದ ಆಶಯದಲ್ಲಿ ‘ಹರ್ ಘರ್ ತಿರಂಗ’ ಅಭಿಯಾನ ನಡೆಸಲಾಗುತ್ತಿದೆ.