ಗದಗ: ಉತ್ತರ ಕರ್ನಾಟಕದ ಖ್ಯಾತ ಮೃಗಾಲಯಕ್ಕೆ ಬರುವ ಪ್ರವಾಸಿಗರಿಗೆ ಧಮ್ಕಿ ಹಾಕಿ ಹಣ ವಸೂಲಿ ಮಾಡುವ ದಂಧೆ ನಡೆಯುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿತ್ತು. ಈ ಕುರಿತು ಪಬ್ಲಿಕ್ ಟಿವಿ ನಡೆಸಿದ ಸ್ಟಿಂಗ್ ಆಪರೇಷನ್‌ನಲ್ಲಿ ಕೂಡ ಬಯಲಾಗಿದೆ.
ಗದಗ ಜಿಲ್ಲೆಯ ಬಿಂಕದಕಟ್ಟಿ ಮಕ್ಕಳ ಉದ್ಯಾನವನ ಹಾಗೂ ಪ್ರಾಣಿ ಸಂಗ್ರಹಾಲಯ ಉತ್ತರ ಕರ್ನಾಟಕ ಭಾಗದ ಫೇಮಸ್ ಮೃಗಾಲಯ. ನಿತ್ಯ ಸಾವಿರಾರು ಮಂದಿ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಇದನ್ನೇ ಅಸ್ತ್ರ ಮಾಡಿಕೊಂಡಿರುವ ಸುಲಿಗೆಕೋರರು ಜನರಿಗೆ ಹಾಗೂ ಸರ್ಕಾರಕ್ಕೆ ಪಂಗನಾಮ ಹಾಕುತ್ತಿದ್ದಾರೆ.
Advertisement
Advertisement
ಪ್ರವೀಣ್ ಮೃಗಾಲಯದಲ್ಲಿ ಹಣ ವಸೂಲಿ ಮಾಡುತ್ತಿರುವ ವ್ಯಕ್ತಿ. 2018-19ನೇ ಸಾಲಿನಲ್ಲಿ ಹರೀಶ್ ಜೋಗಣ್ಣವರ್ ಎಂಬವರಿಗೆ ಪಾರ್ಕಿಂಗ್ ಟೆಂಡರ್ ಆಗಿತ್ತು. ಆದರೆ ಮಾರ್ಚ್ 2019ಕ್ಕೆ ಟೆಂಡರ್ ಮುಗಿದಿದೆ. ಇಲ್ಲಿಯವರೆಗೆ ಮರುಟೆಂಡರ್ ಆಗಿಲ್ಲ. ಹಳೆ ಟೆಂಡರ್ ಹರೀಶ್ ಅವರ ಬೆಂಬಲಿಗರ ಹವಾ ಇಲ್ಲಿಯವರೆಗೂ ಜೋರಾಗಿ ನಡೆಯುತ್ತಿದೆ. ಪಾರ್ಕಿಂಗ್ ಟಿಕೆಟ್ ಕೊಡಿ ಎಂದು ಕೇಳಿದರೆ, ಟಿಕೆಟ್ ಇಲ್ಲ, ಅಂಗಡಿಯಲ್ಲಿದೆ. ಅಂಗಡಿ ಇವತ್ತಿಲ್ಲ ಎಂದು ಪ್ರತಿನಿತ್ಯ ಹೇಳಿದ್ದನ್ನೇ ಹೇಳುತ್ತಾರೆ.
Advertisement
Advertisement
ಟಿಕೆಟ್ ಕೊಡಿ ನಾವು ಹಣ ಕೊಡುತ್ತೇವೆ ಎಂದು ಹೇಳಿದ್ದರೆ, ಟಿಕೆಟ್-ಗಿಕೆಟ್ ಏನಿಲ್ಲ, ಹಣ ಕೊಡಿ ಇಲ್ಲ ಗಾಡಿ ತಗೊಂಡು ಹೊರಗೆ ನಡಿ ಎಂದು ಪ್ರವೀಣ್ ಧಮ್ಕಿ ಹಾಕುತ್ತಾನೆ. ಅಷ್ಟಕ್ಕೂ ಪ್ರವೀಣ್ ಮೂಲ ಗುತ್ತಿಗೆದಾರನಲ್ಲ. ಯಾರೋ ಗುತ್ತಿಗೆ ಪಡೆದು ಇನ್ಯಾರೋ ಮೂರನೇ ವ್ಯಕ್ತಿಗೆ ಲೀಸ್ ನೀಡಿ ಹಣ ವಸೂಲಿಗೆ ಮುಂದಾಗಿದ್ದಾರೆ. ಈ ಬಗ್ಗೆ ಹಣ ಪಡೆಯುವ ವ್ಯಕ್ತಿ ಕೇಳಿದರೆ ನನ್ನ ಬಿಟ್ಟುಬಿಡಿ, ನನಗೆ ಯಾವ ಅಧಿಕಾರಿಯೂ ಗೊತ್ತಿಲ್ಲ. ಟೆಂಡರ್‌ದಾರರೇ ಬೇರೆ, ನಾನೇ ಬೇರೆ ಎಂದು ಹೇಳಿದ್ದಾನೆ.
ಪಾರ್ಕಿಂಗ್ ಶುಲ್ಕ ಎಂದು ಬೈಕಿಗೆ 10 ರೂ., ಕಾರ್ ಹಾಗೂ ಆಟೋಗೆ 20 ರೂ., ಟೆಂಪೋ, ಟ್ರಕ್ ಹಾಗೂ ಬಸ್ಸಿಗೆ 50 ರೂ., ಯಂತೆ ನಿತ್ಯ ಸಾವಿರಾರು ರೂ. ವಸೂಲಿ ಮಾಡುತ್ತಿದ್ದಾರೆ. ಪ್ರವಾಸಿಗರಿಗೆ ಟಿಕೆಟ್ ನೀಡದೆ ಧಮ್ಕಿ ಹಾಕಿ ತಿಂಗಳಿಂದ ಹಣ ಪಡೆದು, ಸರ್ಕಾರಕ್ಕೆ ಪಂಗನಾಮ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ವರ್ಷಕ್ಕೆ ಹತ್ತಾರು ಲಕ್ಷ ರೂ. ಪಾರ್ಕಿಂಗ್ ಹಣ ಸಂಗ್ರಹವಾಗುತ್ತದೆ. ಆದರೆ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಸೇರಿ ಕೇವಲ 1 ಲಕ್ಷ 1 ಸಾವಿರ ಮಾತ್ರ ಟೆಂಡರ್ ಮಾಡುತ್ತಾರೆ ಎನ್ನುವ ಆರೋಪ ಕೂಡ ಕೇಳಿ ಬರುತ್ತಿದೆ. ಈ ಬಗ್ಗೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಸಾರ್ವಜನಿಕರಿಂದ ಹಗಲು ದರೋಡೆ ಮಾಡುವುದನ್ನ ನಿಲ್ಲಿಸಬೇಕು. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ತಿಳಿಸಿದ್ದಾರೆ.