ಶಿವಮೊಗ್ಗ: ಬಲಗೈ ಶಸ್ತ್ರಚಿಕಿತ್ಸೆ ನಂತರ ಮನೆಗೆ ಬಂದು ಮಾತ್ರೆ ಸೇವಿಸಿದ ರೋಗಿಯೋರ್ವ ಮೃತಪಟ್ಟ ಘಟನೆ ಶಿವಮೊಗ್ಗದಲ್ಲಿ ನಡೆದಿದ್ದು, ವೈದ್ಯರ ನಿರ್ಲಕ್ಷ್ಯವೇ ರೋಗಿ ಸಾವಿಗೆ ಕಾರಣವೆಂದು ಮೃತನ ಸಂಬಂಧಿಕರು ಪ್ರತಿಭಟನೆ ನಡೆಸಿದ್ದಾರೆ.
ಮೃತ ರೋಗಿಯನ್ನು ಶಿವಮೊಗ್ಗದ ವಿದ್ಯಾನಗರ ನಿವಾಸಿ ಪ್ರತಾಪ್ ಸಿಂಗ್(23) ಎಂದು ಗುರುತಿಸಲಾಗಿದೆ. ಪ್ರತಾಪ್‍ಗೆ ಕಳೆದ 4 ವರ್ಷಗಳ ಹಿಂದೆ ಆಗಿದ್ದ ಅಪಘಾತದಲ್ಲಿ ಬಲಗೈಗೆ ಪೆಟ್ಟಾಗಿತ್ತು. ಆಗ ಆತ ಚಿಕಿತ್ಸೆ ಪಡೆದು ಸುಮ್ಮನಾಗಿದ್ದನು. ಆದರೆ ನೋವು ಮಾತ್ರ ವರ್ಷಗಳು ಕಳೆದರೂ ಕಡಿಮೆ ಆಗಿರಲಿಲ್ಲ. ಆದ್ದರಿಂದ ಪ್ರತಾಪ್ ಕಳೆದ 24ರಂದು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ. ಈ ವೇಳೆ ವೈದ್ಯರು ಆತನ ಬಲಗೈಗೆ ಶಸ್ತ್ರಚಿಕಿತ್ಸೆ ಮಾಡಿ ಔಷಧಿ, ಮಾತ್ರೆ ನೀಡಿ ಅದೇ ದಿನ ಮನೆಗೆ ಕಳುಹಿಸಿದ್ದರು.
Advertisement
Advertisement
ಮನೆಗೆ ಬಂದು ವೈದ್ಯರು ನೀಡಿದ್ದ ಮಾತ್ರೆ ಸೇವಿಸಿದ ಬಳಿಕ ಪ್ರತಾಪ್ ಮೃತಪಟ್ಟಿದ್ದಾನೆ. ಇದಕ್ಕೆ ವೈದ್ಯರು ನಿರ್ಲಕ್ಷ್ಯ ತೋರಿರುವುದೇ ಕಾರಣ ಎಂದು ಮೃತನ ಕುಟುಂಬಸ್ಥರು ಹಾಗು ಆತನ ಸ್ನೇಹಿತರು ಆರೋಪಿಸಿದ್ದಾರೆ. ಶಸ್ತ್ರಚಿಕಿತ್ಸೆ ದಿನ ಪ್ರತಾಪ್‍ನನ್ನು ಮನೆಗೆ ಕಳುಹಿಸದೆ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಿ ಆತ ಚೇತರಿಸಿಕೊಂಡ ಮೇಲೆ ಡಿಸ್ಚಾರ್ಜ್ ಮಾಡಬೇಕಿತ್ತು. ಆದರೆ ವೈದ್ಯರು ನಿರ್ಲಕ್ಷ್ಯ ತೋರಿದರು. ಹೀಗಾಗಿ ಪ್ರತಾಪ್ ಸಾವಿಗೆ ನ್ಯಾಯ ಸಿಗಬೇಕು ಹಾಗು ಈ ಘಟನೆಯನ್ನು ತನಿಖೆ ನಡೆಸಬೇಕು ಎಂದು ಕುಟುಂಬಸ್ಥರು, ಸ್ನೇಹಿತರು ಆಗ್ರಹಿಸಿದ್ದಾರೆ.