– ಕೊಲೆ ಪ್ರಕರಣ ಎಂದು ಪರಿಗಣಿಸುವಂತೆ ಆಗ್ರಹ
ಮುಂಬೈ: ಪುಣೆಯಲ್ಲಿ ಇತ್ತೀಚೆಗೆ ಸಂಭವಿಸಿದ್ದ ಕಾರು ಅಪಘಾತದಲ್ಲಿ (Pune Porsche Crash) ಸಾವಿಗೀಡಾಗಿದ್ದ ಇಬ್ಬರು ಸಾಫ್ಟ್‌ವೇರ್ ಇಂಜಿನಿಯರ್‌ಗಳ ಪೋಷಕರು ಪ್ರಕರಣದ ತನಿಖೆ ಮತ್ತು ವಿಚಾರಣೆಯನ್ನು ಸುಪ್ರೀಂ ಕೋರ್ಟ್ (Supreme Court) ಮೇಲ್ವಿಚಾರಣೆ ಮಾಡಬೇಕು. ಅಲ್ಲದೇ ಪ್ರಕರಣದ ವಿಚಾರಣೆಯನ್ನು ಮಹಾರಾಷ್ಟ್ರದಲ್ಲಿ (Maharashtra) ನಡೆಸದೇ ಸಂತ್ರಸ್ತರ ಮೂಲವಾದ ಮಧ್ಯಪ್ರದೇಶದಲ್ಲಿ (Madhya Pradesh) ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಮೃತ ಅಶ್ವಿನಿಯ ತಂದೆ ಸುರೇಶ್ ಕುಮಾರ್ ಕೋಷ್ಟ, ನಮಗೆ ನ್ಯಾಯ ಸಿಗಬೇಕಾದರೆ ಪ್ರಕರಣದ ತನಿಖೆ ಮತ್ತು ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆ ಮಾಡಬೇಕು. ಅಪರಾಧದ ಗಂಭೀರ ಸ್ವರೂಪವನ್ನು ಪರಿಗಣಿಸಿ ಅಪ್ರಾಪ್ತ ಆರೋಪಿಯನ್ನು ವಯಸ್ಕನಂತೆ ಪರಿಗಣಿಸಿ ವಿಚಾರಣೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ತನ್ನ ಮಗಳು ಮತ್ತು ಅನೀಶ್ ಮೇಲೆ ತನ್ನ ಕಾರನ್ನು ಚಲಾಯಿಸಿದಾಗ ಆರೋಪಿಯು ಮದ್ಯ ಸೇವಿಸಿದ್ದ. ತ್ವರಿತ ಜಾಮೀನು ಮತ್ತು ಪೊಲೀಸರ ಮರುಪರಿಶೀಲನಾ ಮನವಿಯ ಮೇಲೆ ಆಕ್ರೋಶ ವ್ಯಕ್ತವಾದ ಬಳಿಕ ರಿಯಲ್ ಎಸ್ಟೇಟ್ ಉದ್ಯಮಿ ವಿಶಾಲ್ ಅಗರ್ವಾಲ್ ಬಂಧಿಸಲಾಗಿದೆ. ಅಲ್ಲದೇ ಆತನ ಮಗನಾದ ಆರೋಪಿಯನ್ನು ರಿಮಾಂಡ್ ರೂಮ್‍ಗೆ ಕಳಿಸಲಾಗಿದೆ ಎಂದಿದ್ದಾರೆ.
ಇದೇ ವಿಚಾರವಾಗಿ ಅನೀಶ್ ತಂದೆ ಓಂ ಪ್ರಕಾಶ್ ಅವಧಿಯಾ ನನ್ನ ಕೊನೆಯ ಉಸಿರು ಇರುವವರೆಗೂ ನ್ಯಾಯಕ್ಕಾಗಿ ಹೋರಾಡುತ್ತೇನೆ. ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು. ಆರೋಪಿಗೆ ಡ್ರೈವಿಂಗ್ ಲೈಸೆನ್ಸ್ ಇಲ್ಲದಿದ್ದರೂ ಪೊಲೀಸ್ ಠಾಣೆಯಲ್ಲಿ ವಿಐಪಿ ಸ್ಥಾನಮಾನ ನೀಡಲಾಗಿದೆ. ಈ ಅಪಘಾತವನ್ನು ಡಬಲ್ ಮರ್ಡರ್ ಎಂದು ಪರಿಗಣಿಸಬೇಕು ಎಂದು ಅವರು ಹೇಳಿದ್ದಾರೆ.
ಏನಿದು ಪ್ರಕರಣ: ಮೇ 19 ರಂದು ಪುಣೆಯಲ್ಲಿ 17 ವರ್ಷದ ಅಪ್ರಾಪ್ತ ಚಾಲನೆ ಮಾಡುತ್ತಿದ್ದ ಪೋರ್ಷೆ ಕಾರು ಬೈಕ್‍ಗೆ ಡಿಕ್ಕಿಯಾಗಿ ಮಧ್ಯಪ್ರದೇಶ ಮೂಲದ ವರ್ಷದ ಐಟಿ ವೃತ್ತಿಪರರಾದ ಅನೀಶ್ ಅವಧಿಯಾ (24) ಮತ್ತು ಅಶ್ವಿನಿ ಕೋಷ್ಟಾ ಅವರು ಸಾವನ್ನಪ್ಪಿದ್ದರು. ಬಳಿಕ ಪೊಲೀಸರು ಅಪ್ರಾಪ್ತನ ಬಳಿ ಪ್ರಬಂಧ ಬರೆಯುವಂತೆ ಸೂಚಿಸಿ ಜಾಮೀನು ನೀಡಿ ಬಿಡುಗಡೆ ಮಾಡಿದ್ದರು. ಪೋಲೀಸರ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತವಾದ ಬಳಿಕ ಪೊಲೀಸರು ಅಪ್ರಾಪ್ತ ಆರೋಪಿಯನ್ನು ಬಂಧಿಸಿದ್ದರು.