– ಗಾಂಧಿ ಮೈದಾನದಲ್ಲಿ ಮೌನ ಪ್ರತಿಭಟನೆ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಈಗಾಗಲೇ ಕೋವಿಡ್ ಸೋಂಕು ಅಬ್ಬರಿಸುತ್ತಿದ್ದು, ಮುಂದೆ ಇನ್ನಷ್ಟು ಜಾಸ್ತಿಯಾಗುವ ಸಾಧ್ಯತೆ ಇದೆ. ಹೀಗಾಗಿ ಜಿಲ್ಲಾಡಳಿತ ಕೂಡ ಕೋವಿಡ್ ಆರೈಕೆ ಕೇಂದ್ರ ತೆರೆಯಲು ನವೋದಯ ವಿದ್ಯಾಲಯ ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಗುರುತಿಸಿದೆ. ಆದರೆ ನವೋದಯ ವಿದ್ಯಾಲಯದಲ್ಲಿ ಕೋವಿಡ್ ಆರೈಕೆ ಕೇಂದ್ರ ತೆರೆಯಲು ಅಲ್ಲಿನ ವಿದ್ಯಾರ್ಥಿಗಳ ಪೋಷಕರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
Advertisement
ಕೋವಿಡ್ ಆರೈಕೆ ತೆರೆಯುವ ವಿಷಯ ತಿಳಿದು ಜಿಲ್ಲೆಯ ವಿವಿಧೆಡೆಯಿಂದ ಮಡಿಕೇರಿಗೆ ಆಗಮಿಸಿದ್ದ ಪೋಷಕರು ನಗರದ ಗಾಂಧಿ ಮೈದಾನದಲ್ಲಿ ಮೌನ ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ಸಾಗಿದ ಪೋಷಕರು ಶಾಲೆಯಲ್ಲಿ ಕೋವಿಡ್ ಕೇಂದ್ರ ತೆರೆಯದಂತೆ ಮನವಿ ಮಾಡಿದರು. ಕಳೆದ ಎರಡು ವರ್ಷಗಳಿಂದ ಈ ಶಾಲೆಯನ್ನು ಕೋವಿಡ್ ಆರೈಕೆ ಕೇಂದ್ರಕ್ಕೆ ಬಳಸಿಕೊಂಡಿದ್ದರಿಂದ ನಮ್ಮ ಮಕ್ಕಳಿಗೆ ತರಗತಿಗಳೇ ನಡೆಯಲಿಲ್ಲ. ಇದನ್ನೂ ಓದಿ: ಪರ್ಯಾಯ ಅಂದ್ರೆ ಏನು? ಮಧ್ವಾಚಾರ್ಯರು ಕೊಟ್ಟಿರುವ ಅಕ್ಷಯ ಪಾತ್ರೆ, ಸಟ್ಟುಗವೇ ಅಧಿಕಾರ ಹಸ್ತಾಂತರಕ್ಕೆ ಅಂಕಿತ
Advertisement
Advertisement
ಕಳೆದ ಎರಡು ತಿಂಗಳ ಹಿಂದೆಯಷ್ಟೇ ಶಾಲೆಗಳು ಆರಂಭವಾಗಿವೆ. ಇಂತಹ ಸ್ಥಿತಿಯಲ್ಲಿ ಈಗ ಮತ್ತೆ ಕೋವಿಡ್ ಆರೈಕೆ ಕೇಂದ್ರ ತೆರೆದರೆ ನಮ್ಮ ಮಕ್ಕಳ ಶಿಕ್ಷಣ ಸಂಪೂರ್ಣ ಹಾಳಾಗಲಿದೆ. ಕಳೆದ ವರ್ಷ ಪ್ರಥಮ ಪಿಯುಸಿಯಲ್ಲಿದ್ದ ವಿದ್ಯಾರ್ಥಿಗಳು ಈ ಬಾರಿ ದ್ವಿತೀಯ ಪಿಯುಸಿ ಬೋರ್ಡ್ ಎಕ್ಸಾಂ ಬರೆಯಬೇಕು. ತರಗತಿಗಳೇ ನಡೆಯದಿದ್ದರೆ, ಅವರು ಎಕ್ಸಾಂ ಬರೆಯೋದಾದರೂ ಹೇಗೆ ಎನ್ನುವುದು ಪೋಷಕರ ಅಳಲು.
Advertisement
ನಮ್ಮ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಕಲಿತು ನವೋದಯ ಸೇರಿಕೊಂಡಿದ್ದಾರೆ. ಎರಡು ವರ್ಷದಿಂದ ತರಗತಿಗಳೇ ನಡೆದಿಲ್ಲ. ಈಗಷ್ಟೇ ಶಾಲೆಗಳು ಆರಂಭವಾಗಿದ್ದರಿಂದ ಒಂದಷ್ಟು ಕಲಿಯುತ್ತಿದ್ದರು. ಇದ್ದಕ್ಕಿದ್ದಂತೆ ಕೋವಿಡ್ ಆರೈಕೆ ಕೇಂದ್ರ ತೆರೆಯುವುದಕ್ಕಾಗಿ ಶಾಲೆಯನ್ನು ಮುಚ್ಚಿದರೆ ನಮ್ಮ ಮಕ್ಕಳ ವಿದ್ಯಾಭ್ಯಾಸವೇ ಹಾಳಾಗಿ ಹೋಗಲಿದೆ ಎಂದು ಕಣ್ಣೀರು ಹಾಕಿದ್ದಾರೆ.
ನವೋದಯ ಶಾಲೆಯಲ್ಲಿ ಕೋವಿಡ್ ಆರೈಕೆ ಕೇಂದ್ರ ತೆರೆಯುವ ಬದಲು ಬೇರೆಡೆ ಕೇಂದ್ರ ತೆರೆಯಲಿ. ಇಲ್ಲದಿದ್ದರೆ ಶಾಲೆ ಮುಚ್ಚುವ ಬದಲು ನಮ್ಮ ಎಲ್ಲ ಮಕ್ಕಳ ವರ್ಗಾವಣೆ ಪತ್ರವನ್ನು ಸಾಮೂಹಿಕವಾಗಿ ಕೊಡಲಿ. ನಾವು ಬೇರೆಡೆ ಎಲ್ಲಾದರು ಓದಿಸಿಕೊಳ್ಳುತ್ತೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್, ನವೋದಯ ವಿದ್ಯಾಲಯ ಕೇಂದ್ರದಲ್ಲಿ ಕೋವಿಡ್ ಕೇಂದ್ರ ತೆರೆಯುವುದಿಲ್ಲ. ಆದರೆ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಈಗ ದಾಖಲಾಗುತ್ತಿರುವಂತೆ ಮತ್ತಷ್ಟು ದಾಖಲಾದರೆ, ಆಗ ಕೋವಿಡ್ ಕೇಂದ್ರಗಳನ್ನು ತೆರೆಯುವುದು ಅನಿವಾರ್ಯವಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಿಶ್ಚಿತಾರ್ಥ ಸಮಾರಂಭಕ್ಕೆ ನುಗ್ಗಿ ಯುವಕನನ್ನ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು!
ಕೋವಿಡ್ ಜಿಲ್ಲಾಸ್ಪತ್ರೆ, ಮೆಡಿಕಲ್ ಕಾಲೇಜು ಸೇರಿದಂತೆ ವಿವಿಧೆಡೆ 500 ಬೆಡ್ ಗಳು ಇವೆ. ಒಂದು ವೇಳೆ ಕೋವಿಡ್ ತೀವ್ರವಾಗಿ ಉಲ್ಭಣಿಸಿ, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಜಾಸ್ತಿಯಾದಲ್ಲಿ ಜಿಲ್ಲೆಯ ಎಲ್ಲ ಶಾಲೆಗಳಿಗೂ ರಜೆ ನೀಡಬೇಕಾಗುತ್ತದೆ. ಆಗ ನವೋದಯ ಶಾಲೆಗೂ ರಜೆ ಕೊಟ್ಟು ಅಲ್ಲಿ ಕೋವಿಡ್ ಆರೈಕೆ ಕೇಂದ್ರ ತೆರೆಯಲಾಗುವುದು. ಅಲ್ಲಿಯವರೆಗೆ ಶಾಲೆಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಭರವಸೆಯನ್ನು ಕೊಟ್ಟಿದ್ದಾರೆ.