ಇಸ್ಲಾಮಾಬಾದ್: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಯುದ್ಧ ಭೀತಿಯ ಹಿನ್ನೆಲೆಯಲ್ಲಿ ರಕ್ಷಣಾ ಒಪ್ಪಂದದ ಭಾಗವಾಗಿ ಪಾಕಿಸ್ತಾನವು (Pakistan) ಸೌದಿ ಅರೇಬಿಯಾಕ್ಕೆ(Saudi Arabia) ಸಾವಿರಾರು ಸೈನಿಕರು ಹಾಗೂ ಯುದ್ಧ ವಿಮಾನಗಳನ್ನು ನಿಯೋಜಿಸಿದೆ.
ಪಾಕಿಸ್ತಾನವು ಸೌದಿ ಅರೇಬಿಯಾದ ಭದ್ರತೆಗಾಗಿ 8 ಸಾವಿರ ಸೈನಿಕರ ಬೃಹತ್ ಪಡೆಯನ್ನು ನಿಯೋಜಿಸಿದೆ. ಸೈನಿಕರ ಜೊತೆಗೆ ಪಾಕಿಸ್ತಾನ ವಾಯುಪಡೆಯ 10 ರಿಂದ 18 ಅತ್ಯಾಧುನಿಕ ಯುದ್ಧ ವಿಮಾನಗಳು (Fighter Jets) ಮತ್ತು ಸಹಾಯಕ ವಿಮಾನಗಳನ್ನು ಕಳುಹಿಸಿಕೊಡಲಾಗಿದೆ.
ಚೀನಾ (China) ನಿರ್ಮಿತ ಜೆಎಫ್-17 (JF-17) ಯುದ್ಧ ವಿಮಾನಗಳು, ಡ್ರೋನ್ ದಳಗಳು ಮತ್ತು ಅತ್ಯಾಧುನಿಕ ಚೀನಾ ನಿರ್ಮಿತ ಎಚ್‌ಕ್ಯೂ-9 (HQ-9) ವಾಯು ರಕ್ಷಣಾ ವ್ಯವಸ್ಥೆಯನ್ನು ನಿಯೋಜಿಸಲಾಗಿದೆ. ಅಗತ್ಯ ಬಿದ್ದರೆ ಹೆಚ್ಚಿನ ಸೈನಿಕರನ್ನು ಕಳುಹಿಸುವುದಾಗಿಯೂ ಪಾಕಿಸ್ತಾನ ಭರವಸೆ ನೀಡಿದೆ.

ಈ ಸೇನಾ ತುಕಡಿಯು ಸೌದಿ ಅರೇಬಿಯಾದ ಪೂರ್ವ ವಲಯದಲ್ಲಿರುವ ‘ಕಿಂಗ್ ಅಬ್ದುಲ್ ಅಜೀಜ್’ (King Abdulaziz Air Base) ವಾಯುನೆಲೆಯನ್ನು ತಲುಪಿದೆ ಎಂದು ವರದಿಯಾಗಿದೆ. ಉಭಯ ದೇಶಗಳು ಕಳೆದ ವರ್ಷ ಮಾಡಿಕೊಂಡಿದ್ದ ‘ಕಾರ್ಯತಂತ್ರದ ಪರಸ್ಪರ ರಕ್ಷಣಾ ಒಪ್ಪಂದ’ದ (Strategic Mutual Defence Pact) ಅನ್ವಯ ಈ ನಿಯೋಜನೆ ನಡೆದಿದೆ.
ಜಂಟಿ ಮಿಲಿಟರಿ ಸಹಕಾರವನ್ನು ಬಲಪಡಿಸುವುದು, ಗುಪ್ತಚರ ಮಾಹಿತಿ ಹಂಚಿಕೊಳ್ಳುವುದು ಮತ್ತು ಸಶಸ್ತ್ರ ಪಡೆಗಳ ಕಾರ್ಯಾಚರಣೆಯ ಸಿದ್ಧತೆಯನ್ನು ಹೆಚ್ಚಿಸುವುದು ರಕ್ಷಣಾ ಒಪ್ಪಂದದ ಮುಖ್ಯ ಉದ್ದೇಶವಾಗಿದೆ. ಇದನ್ನೂ ಓದಿ: ಗಡಿಯಾರ ಓಡುತ್ತಿದೆ, ಸಮಯ ಮೀರುತ್ತಿದೆ – ಇರಾನ್‌ಗೆ ಟ್ರಂಪ್ ಭೀಕರ ಯುದ್ಧದ ವಾರ್ನಿಂಗ್
ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ದಶಕಗಳಿಂದಲೂ ಆಪ್ತ ರಕ್ಷಣಾ ಪಾಲುದಾರ ರಾಷ್ಟ್ರಗಳಾಗಿವೆ.1967ರ ರಕ್ಷಣಾ ಒಪ್ಪಂದದ ಸಮಯದಿಂದಲೂ ಪಾಕಿಸ್ತಾನವು ಸೌದಿ ಅರೇಬಿಯಾದ ಸಾವಿರಾರು ಸೈನಿಕರಿಗೆ ತರಬೇತಿ ನೀಡುತ್ತಾ ಬಂದಿದೆ.

