ವಾಷಿಂಗ್ಟನ್: ಅಮೆರಿಕ ಮತ್ತು ಇರಾನ್ (USA-Iran War) ನಡುವಿನ ಸಂಘರ್ಷ ಮತ್ತೆ ಆರಂಭವಾಗುವ ಮುನ್ಸೂಚನೆ ಸಿಕ್ಕಿದೆ. ಇರಾನ್ ದೇಶಕ್ಕೆ ನೇರ ಹಾಗೂ ಕಠಿಣ ಎಚ್ಚರಿಕೆ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) “ನಿಮ್ಮ ಪತನಕ್ಕೆ ಕೌಂಟ್‌ಡೌನ್ ಶುರುವಾಗಿದೆ” ಎಂಬ ಅರ್ಥದಲ್ಲಿ ಗಂಭೀರ ಮುನ್ಸೂಚನೆ ನೀಡಿದ್ದಾರೆ.
ತಮ್ಮ ಅಧಿಕೃತ ‘ಟ್ರೂಥ್ ಸೋಶಿಯಲ್’ (Truth Social) ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, “ಇರಾನ್‌ಗೆ ಸಮಯ ಮೀರುತ್ತಿದೆ, ಗಡಿಯಾರ ಅತ್ಯಂತ ವೇಗವಾಗಿ ಓಡುತ್ತಿದೆ. ಅವರು ಬೇಗನೆ ಏನಾದರೂ (ಒಪ್ಪಂದ) ಮಾಡುವುದು ಒಳಿತು, ಇಲ್ಲದಿದ್ದರೆ ಅವರಲ್ಲಿ ಏನೂ ಉಳಿಯುವುದಿಲ್ಲ. ಸಮಯ ಅತ್ಯಂತ ಅಮೂಲ್ಯವಾಗಿದೆ” ಎಂದು ಬಹಿರಂಗವಾಗಿಯೇ ಗುಡುಗಿದ್ದಾರೆ.
ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ನಡೆಯುತ್ತಿದ್ದ ಶಾಂತಿ ಮಾತುಕತೆಗಳು ಸದ್ಯ ಸಂಪೂರ್ಣ ಮಂದಗತಿಯಲ್ಲಿ ಸಾಗಿವೆ. ಕದನ ವಿರಾಮ ಒಪ್ಪಂದಕ್ಕೆ ಸಂಬಂಧಿಸಿದಂತೆ ಇರಾನ್ ಇಟ್ಟಿದ್ದ ಕಠಿಣ ಬೇಡಿಕೆಗಳನ್ನು ಅಧ್ಯಕ್ಷ ಟ್ರಂಪ್ ಖಡಾಖಂಡಿತವಾಗಿ ತಿರಸ್ಕರಿಸಿದ್ದಾರೆ. ಅಷ್ಟೇ ಅಲ್ಲದೆ, ಮಾತುಕತೆಗಳು ವಿಫಲವಾದರೆ ಇರಾನ್ ಹಿಂದೆಂದೂ ಕಾಣದ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಟ್ರಂಪ್ ಪರೋಕ್ಷವಾಗಿ ಬೆದರಿಕೆ ಹಾಕಿದ್ದು, ಶೀಘ್ರ ನಿರ್ಧಾರ ಕೈಗೊಳ್ಳುವಂತೆ ಗಡುವು ನೀಡಿದ್ದಾರೆ.

ಅಮೆರಿಕದ ಷರತ್ತು ಏನು?
– ಇರಾನ್ ತನ್ನ ಬಳಿ ಇರುವ 400 ಕೆಜಿ ಸಂವರ್ಧಿತ ಯುರೇನಿಯಂ ಅನ್ನು ಅಮೆರಿಕಕ್ಕೆ ಒಪ್ಪಿಸಬೇಕು.
– ಕೇವಲ ಒಂದೇ ಒಂದು ಪರಮಾಣು ಘಟಕವನ್ನು ಮಾತ್ರ ಚಾಲನೆಯಲ್ಲಿಡಬೇಕು.
– ಯುದ್ಧದಿಂದ ಉಂಟಾದ ಹಾನಿಗೆ ಅಮೆರಿಕ ಯಾವುದೇ ಪರಿಹಾರ ನೀಡುವುದಿಲ್ಲ. ಇದನ್ನೂ ಓದಿ: ಮತ್ತೆ ಇರಾನ್ ಮೇಲೆ ದಾಳಿ ಸಾಧ್ಯತೆ – ನೆತನ್ಯಾಹುಗೆ ಟ್ರಂಪ್ ತುರ್ತು ಕರೆ, ಸುದೀರ್ಘ ಚರ್ಚೆ
ಇರಾನ್ ಬೇಡಿಕೆ ಏನು?
– ತಕ್ಷಣವೇ ತನ್ನ ಮೇಲಿರುವ ಎಲ್ಲಾ ಆರ್ಥಿಕ ನಿರ್ಬಂಧಗಳನ್ನು ಸಂಪೂರ್ಣವಾಗಿ ತೆರವುಗೊಳಿಸಬೇಕು.
– ಆಯಕಟ್ಟಿನ ಜಾಗವಾದ ‘ಹಾರ್ಮುಜ್ ಜಲಸಂಧಿ’ಯ ಮೇಲಿನ ಇರಾನ್‌ನ ಸಾರ್ವಭೌಮತ್ವವನ್ನು ಅಮೆರಿಕ ಅಂಗೀಕರಿಸಬೇಕು
ತಮ್ಮ ಹೊಸ ಪೋಸ್ಟ್ ಮೂಲಕ ಇರಾನ್‌ನ ಎಚ್ಚರಿಕೆ ನೀಡಿರುವ ಟ್ರಂಪ್, ಅಮೆರಿಕವು ಶಾಂತಿ ಒಪ್ಪಂದಕ್ಕಾಗಿ ಯಾವುದೇ ಆತುರದಲ್ಲಿಲ್ಲ. ನಮಗೆ ಸಾಕಷ್ಟು ಸಮಯವಿದೆ, ಆದರೆ ಇರಾನ್‌ಗೆ ನೀಡಿದ ಮಾತ್ರ ಸಮಯ ಮುಗಿಯುತ್ತಾ ಬಂದಿದೆ ಗುಡುಗಿದ್ದಾರೆ.
ಟ್ರಂಪ್ ಅವರ ಈ ಎಚ್ಚರಿಕೆ ಕೇವಲ ಮಾತಿಗೆ ಸೀಮಿತವಾಗಿಲ್ಲ. ಅಮೆರಿಕದ ಹೆಮ್ಮೆಯ ಬೃಹತ್ ಯುದ್ಧ ನೌಕೆ ಯುಎಸ್ಎಸ್ ಅಬ್ರಹಾಂ ಲಿಂಕನ್ (USS Abraham Lincoln) ಸೇರಿದಂತೆ ಅಮೆರಿಕದ ದೈತ್ಯ ನೌಕಾಪಡೆ ಈಗಾಗಲೇ ಇರಾನ್ ಗಡಿಯ ಸಮೀಪದ ಕೊಲ್ಲಿ ಪ್ರದೇಶವನ್ನು ತಲುಪಿದ್ದು, ಯಾವುದೇ ಕ್ಷಣದಲ್ಲಾದರೂ ದಾಳಿ ನಡೆಸಲು ಸಂಪೂರ್ಣ ಯುದ್ಧ ಸನ್ನದ್ಧತೆಯಲ್ಲಿ ನಿಂತಿರುವುದು ಇಡೀ ವಿಶ್ವವನ್ನೇ ಈಗ ಆತಂಕಕ್ಕೆ ತಳ್ಳಿದೆ.

