ವಾಷಿಂಗ್ಟನ್/ಜೆರುಸಲೆಮ್: ಇರಾನ್ (Iran) ಮೇಲೆ ಮತ್ತೊಮ್ಮೆ ದಾಳಿ ನಡೆಸಲು ಅಮೆರಿಕ (USA) ಸಿದ್ಧತೆ ನಡೆಸುತ್ತಿದೆ ಎಂಬ ಬಲವಾದ ಸುದ್ದಿಗಳ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್(Donald Trump) ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು(Benjamin Netanyahu) ಅವರಿಗೆ ತುರ್ತು ಫೋನ್ ಕರೆ ಮಾಡಿ ಸುದೀರ್ಘವಾಗಿ ಚರ್ಚಿಸಿದ್ದಾರೆ.
ಇರಾನ್ ಮೇಲಿನ ಮುಂದಿನ ಕಾರ್ಯತಂತ್ರಗಳು ಹಾಗೂ ಇಸ್ರೇಲ್-ಇರಾನ್ ನಡುವಿನ ಪ್ರಸಕ್ತ ಯುದ್ಧ ಪರಿಸ್ಥಿತಿಯ ಕುರಿತು ಉಭಯ ನಾಯಕರು ಪ್ರಮುಖವಾಗಿ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಅಮೆರಿಕದ ಉನ್ನತ ಭದ್ರತಾ ಮಂಡಳಿಯ ಮಹತ್ವದ ಸಭೆ ಕರೆಯುವ ಮುನ್ನವೇ ಡೊನಾಲ್ಡ್ ಟ್ರಂಪ್ ಅವರು ನೆತನ್ಯಾಹು ಅವರೊಂದಿಗೆ ಮಾತನಾಡಿರುವುದು ಜಾಗತಿಕ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಮಿಲಿಟರಿ ದಾಳಿಗಳನ್ನು ಪ್ರಾರಂಭಿಸುವ ಸಾಧ್ಯತೆಗಳ ಬಗ್ಗೆ ವರದಿಯಾಗಿದ್ದು, ಈ ನಿಟ್ಟಿನಲ್ಲಿ ಈ ಫೋನ್ ಕರೆ ಅತ್ಯಂತ ಮಹತ್ವದ್ದಾಗಿದೆ ಎನ್ನಲಾಗುತ್ತಿದೆ.

ಉಭಯ ನಾಯಕರ ನಡುವಿನ ಈ ಮಾತುಕತೆಯು ಅತ್ಯಂತ ಸೌಹಾರ್ದಯುತವಾಗಿ ನಡೆದಿದೆ. ಪ್ರಮುಖ ಜಾಗತಿಕ ವಿಷಯಗಳು ಹಾಗೂ ವ್ಯಾಪಾರದ ವಿಚಾರದಲ್ಲಿ ಅಮೆರಿಕ ಮತ್ತು ಇಸ್ರೇಲ್ ಒಂದೇ ನಿಲುವನ್ನು ಹೊಂದಿವೆ ಎಂದು ಟ್ರಂಪ್ ಈ ವೇಳೆ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ, ಟ್ರಂಪ್ ಅವರ ಇತ್ತೀಚಿನ ಚೀನಾ ಪ್ರವಾಸದ ವಿವರಗಳನ್ನು ಸಹ ನೆತನ್ಯಾಹು ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಮಾಸ್ಕೋ ಮೇಲೆ ಉಕ್ರೇನ್ ಡ್ರೋನ್ ದಾಳಿ – ಓರ್ವ ಭಾರತೀಯ ಸಾವು, ಮೂವರಿಗೆ ಗಂಭೀರ ಗಾಯ
ಇತ್ತ ಜೆರುಸಲೆಮ್‌ನಲ್ಲಿ ಇಂದು ನಡೆದ ಇಸ್ರೇಲ್ ಸಚಿವ ಸಂಪುಟ ಸಭೆಯಲ್ಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಹಲವಾರು ಪ್ರಮುಖ ಮಿಲಿಟರಿ ಮತ್ತು ರಾಜತಾಂತ್ರಿಕ ಬೆಳವಣಿಗೆಗಳ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.ಇಸ್ರೇಲಿ ರಕ್ಷಣಾ ಪಡೆಗಳು ಈಗ ಗಾಜಾ ಪಟ್ಟಿಯ ಶೇಕಡಾ 60 ಕ್ಕಿಂತ ಹೆಚ್ಚು ಪ್ರದೇಶವನ್ನು ತಮ್ಮ ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಂಡಿವೆ ಎಂದು ನೆತನ್ಯಾಹು ಕ್ಯಾಬಿನೆಟ್‌ಗೆ ತಿಳಿಸಿದ್ದಾರೆ.
ಹಮಾಸ್ ಉಗ್ರಗಾಮಿ ಸಂಘಟನೆಯನ್ನು ಸಂಪೂರ್ಣವಾಗಿ ಹತ್ತಿಕ್ಕುವ ಇಸ್ರೇಲ್‌ನ ಕಾರ್ಯಾಚರಣೆಯು ಅತ್ಯಂತ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

