ಅಭಿನಂದನ್‌ ವರ್ಧಮಾನ್‌ ಸೆರೆಹಿಡಿದಿದ್ದವ ಎನ್‌ಕೌಂಟರ್‌ನಲ್ಲಿ ಹತ್ಯೆ

Public TV
1 Min Read
Abhinandan Moiz Abbas Shah

ನವದೆಹಲಿ: ಭಾರತೀಯ ವಾಯುಪಡೆಯ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಅವರನ್ನು ಸೆರೆಹಿಡಿದಿರುವುದಾಗಿ ಹೇಳಿಕೊಂಡಿದ್ದ ಪಾಕಿಸ್ತಾನ ಸೇನಾ ಮೇಜರ್‌ನನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿದೆ.

2019 ರ ಬಾಲಕೋಟ್ ವೈಮಾನಿಕ ದಾಳಿಯ ನಂತರ ದಕ್ಷಿಣ ವಾಜಿರಿಸ್ತಾನ್ ಪ್ರದೇಶದಲ್ಲಿ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಜೊತೆಗಿನ ಎನ್ಕೌಂಟರ್‌ನಲ್ಲಿ ಪಾಕ್‌ ಸೇನೆಯ ಮೇಜರ್‌ ಮೊಯಿಜ್‌ ಅಬ್ಬಾಸ್‌ ಶಾ (37) ಹತ್ಯೆಯಾಗಿದೆ.

abhinandan 1551541519 1

ಚಕ್ವಾಲ್ ಮೂಲದ ಮತ್ತು ಸೇನೆಯ ಗಣ್ಯ ವಿಶೇಷ ಸೇವಾ ಗುಂಪಿನ (SSG) ಸದಸ್ಯನಾಗಿದ್ದ ಅಬ್ಬಾಸ್, ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯ ನೇತೃತ್ವ ವಹಿಸುವಾಗ ಸಾವನ್ನಪ್ಪಿದ್ದಾನೆ. ಗುಂಡಿನ ಚಕಮಕಿಯಲ್ಲಿ ಮತ್ತೊಬ್ಬ ಸೈನಿಕ ಲ್ಯಾನ್ಸ್ ನಾಯಕ್ ಜಿಬ್ರಾನುಲ್ಲಾ ಕೂಡ ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನ ಸೇನೆ ದೃಢಪಡಿಸಿದೆ.

ಪಾಕ್‌ ಗಡಿಯೊಳಗೆ ಉಗ್ರಗಾಮಿ ಗುಂಪುಗಳು ಒಳನುಸುಳುತ್ತಿವೆ. ನಾಗರಿಕರು ಮತ್ತು ಮಿಲಿಟರಿ ಸಿಬ್ಬಂದಿಯನ್ನು ಗುರಿಯಾಗಿಸಿ ಆಗಾಗ ಉಗ್ರಗಾಮಿಗಳು ದಾಳಿ ನಡೆಸುತ್ತಿದ್ದಾರೆ. ಅವರನ್ನು ನಿಗ್ರಹಿಸಲು ಪಾಕ್‌ ಸೇನೆ ಕಾರ್ಯಾಚರಣೆ ಕೈಗೊಂಡಿತ್ತು.

ಅಭಿನಂದನ್‌ ಸೆರೆ
2019 ರಲ್ಲಿ ಪುಲ್ವಾಮಾ ಭಯೋತ್ಪಾದಕ ದಾಳಿಯ ನಂತರ ಭಾರತ-ಪಾಕಿಸ್ತಾನ ಬಿಕ್ಕಟ್ಟು ಹೆಚ್ಚಾಗಿತ್ತು. ಭಾರತದ ಬಾಲಕೋಟ್ ವೈಮಾನಿಕ ದಾಳಿಯ ನಂತರ, ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಪ್ರತೀಕಾರದ ಕಾರ್ಯಾಚರಣೆಯ ಸಮಯದಲ್ಲಿ ಮಿಗ್-21 ಬೈಸನ್ ಜೆಟ್ ಅನ್ನು ಹಾರಿಸಿದರು. ಪಾಕಿಸ್ತಾನಿ ವಾಯುಪಡೆಯ ಜೆಟ್‌ಗಳೊಂದಿಗಿನ ಕಾದಾಟದಲ್ಲಿ ಇವರ ಜೆಟ್‌ ಹೊಡೆದುರುಳಿಸಲಾಯಿತು. ಪಾಕಿಸ್ತಾನ ಆಕ್ರಮಿತ ಪ್ರದೇಶದಲ್ಲಿ ಜೆಟ್‌ ಬಿದ್ದಿತು. ಅಲ್ಲಿ ಅಭಿನಂದನ್‌ ಅವರನ್ನು ಪಾಕಿಸ್ತಾನಿ ಸೇನೆ ಸೆರೆಹಿಡಿಯಿತು. ಇವರನ್ನು ಸೆರೆಹಿಡಿಯುವಲ್ಲಿ ತಾನು ಪಾತ್ರ ವಹಿಸಿದ್ದೇನೆ ಎಂದು ಪಾಕ್‌ನ ಅಬ್ಬಾಸ್‌ ಹೇಳಿಕೊಂಡಿದ್ದ.

Share This Article