ನವದೆಹಲಿ: ಅಮಾನತುಗೊಂಡಿರುವ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರ ಹತ್ಯೆ ನಡೆಸಲು ಅಂತಾರಾಷ್ಟ್ರೀಯ ಗಡಿಯ ಮೂಲಕ ಭಾರತಕ್ಕೆ ಬಂದಿದ್ದ ಪಾಕಿಸ್ತಾನದ ಪ್ರಜೆಯನ್ನು ರಾಜಸ್ಥಾನದ ಶ್ರೀ ಗಂಗಾ ನಗರ ಜಿಲ್ಲೆಯಲ್ಲಿ ಬಂಧಿಸಲಾಗಿದೆ.
ಜುಲೈ 16ರಂದು ರಾತ್ರಿ 11 ಗಂಟೆಯ ವೇಳೆಗೆ ಗಡಿ ಬಳಿ ವ್ಯಕ್ತಿಯೊಬ್ಬನನ್ನು ಭದ್ರತಾ ಪಡೆ ಬಂಧಿಸಿತ್ತು. ಅನುಮಾನಾಸ್ಪದವಾಗಿ ಪತ್ತೆಯಾದ ವ್ಯಕ್ತಿಯನ್ನು ಅಧಿಕಾರಿಗಳು ತಕ್ಷಣವೇ ವಶಕ್ಕೆ ಪಡೆದು, ತಪಾಸಣೆ ನಡೆಸಿದ್ದರು. ವ್ಯಕ್ತಿಯ ಬ್ಯಾಗ್‌ನಲ್ಲಿ 11 ಇಂಚು ಉದ್ದದ ಚಾಕು, ಧಾರ್ಮಿಕ ಪುಸ್ತಕಗಳು, ಬಟ್ಟೆ, ಆಹಾರ ಹಾಗೂ ಮರಳು ಪತ್ತೆಯಾಗಿತ್ತು. ಆತನನ್ನು ಪಾಕಿಸ್ತಾನದ ಪಂಜಾಬ್‌ನಲ್ಲಿರುವ ಮಂಡಿ ಬಹೌದ್ದೀನ್ ನಗರದ ರಿಜ್ವಾನ್ ಅಶ್ರಫ್ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ನೂಪುರ್ ಶರ್ಮಾಗೆ ಬಿಗ್ ರಿಲೀಫ್- ಆಗಸ್ಟ್ 10ರವರೆಗೂ ಬಂಧಿಸದಂತೆ ಸುಪ್ರೀಂ ಸೂಚನೆ
ಪ್ರಾಥಮಿಕ ತನಿಖೆಯಲ್ಲಿ ಆತ ಪ್ರವಾದಿ ಮೊಹಮ್ಮದ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ನೂಪುರ್ ಶರ್ಮಾ ಅವರನ್ನು ಕೊಲ್ಲಲು ಗಡಿ ದಾಟಿ ಬಂದಿರುವುದಾಗಿ ತಿಳಿಸಿದ್ದಾನೆ. ನೂಪುರ್ ಅವರನ್ನು ಕೊಲ್ಲುವುದಕ್ಕೂ ಮೊದಲು ಆತ ಅಜ್ಮೀರ್ ದರ್ಗಾಕ್ಕೆ ಭೇಟಿ ನೀಡಲು ಯೋಜಿಸಿದ್ದ ಎನ್ನಲಾಗಿದೆ. ಇದನ್ನೂ ಓದಿ: ಅಮಿತ್ ಶಾ ಫೋಟೋ ದುರ್ಬಳಕೆ ಮಾಡಿದ್ದ ಬಾಲಿವುಡ್ ನಿರ್ದೇಶಕ ಅವಿನಾಶ್ ಅರೆಸ್ಟ್
ಹೆಚ್ಚಿನ ತನಿಖೆಗಾಗಿ ಆತನನ್ನು ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಆತನ ಬಗ್ಗೆ ಸಂಬಂಧಪಟ್ಟ ಗುಪ್ತಚರ ಸಂಸ್ಥೆಗಳಿಗೂ ತಿಳಿಸಿದ್ದೇವೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ. ಇದೀಗ ಬಂಧಿತ ಪಾಕಿಸ್ತಾನಿ ವ್ಯಕ್ತಿಯನ್ನು ಇಂಟಲಿಜೆನ್ಸ್ ಬ್ಯೂರೋ(ಐಬಿ) ಹಾಗೂ ಇತರ ಗುಪ್ತಚರ ಸಂಸ್ಥೆಗಳ ಜಂಟಿ ತಂಡ ವಿಚಾರಣೆ ನಡೆಸುತ್ತಿದೆ.