ಕಾಶ್ಮೀರದಲ್ಲಿ ನರಮೇಧ – ಬೆಂಗಳೂರಿಗೆ ಆಗಮಿಸಿದ ಮೃತದೇಹ, ಕುಟುಂಬಸ್ಥರಿಗೆ ಹಸ್ತಾಂತರ

Public TV
2 Min Read
Tejasvi surya somanna

ಬೆಂಗಳೂರು: ಕಾಶ್ಮೀರದ ಪಹಲ್ಗಾವ್‌ನಲ್ಲಿ (Pahalgam ) ಉಗ್ರರ ಗುಂಡೇಟಿಗೆ ಬಲಿಯಾದ ಇಬ್ಬರು ಕನ್ನಡಿಗರ ಮೃತದೇಹ ರಾಜ್ಯಕ್ಕೆ ಆಗಮಿಸಿದೆ.

ದೆಹಲಿಯಿಂದ ಇಂಡಿಗೋ ವಿಮಾನದಲ್ಲಿ ಬೆಳಗ್ಗೆ 3:30ಕ್ಕೆ ಬೆಂಗಳೂರಿನ (Bengaluru) ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಶಿವಮೊಗ್ಗದ ಮಂಜುನಾಥ್, ಬೆಂಗಳೂರಿನ ಭರತ್ ಭೂಷಣ್ ಪಾರ್ಥಿವ ಶರೀರ ಆಗಮಿಸಿತು.


ಈ ವಿಮಾನದಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ (Tejasvi Surya) ಮತ್ತು‌ ಮೃತರ ಕುಟುಂಬಸ್ಥರು ಆಗಮಿಸಿದ್ದರು.

ಕೇಂದ್ರ ರೈಲ್ವೇ ಖಾತೆಯ ರಾಜ್ಯ ಸಚಿವ ಸೋಮಣ್ಣ (Somanna) ಅವರು ಮೃತದೇಹವನ್ನು ಬರಮಾಡಿಕೊಂಡು ಅಂತಿಮ ನಮನ ಸಲ್ಲಿಸಿದರು. ವಿಮಾನ ನಿಲ್ಥಾಣದ ಒಳಗಡೆ ಸಚಿವ ಸೋಮಣ್ಣ ಮತ್ತು ಅಧಿಕಾರಿಗಳು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.


ವಿಮಾನ ನಿಲ್ದಾಣದಲ್ಲಿ ಗೌರವ ಸಲ್ಲಿಸಿದ ಬಳಿಕ ಸರ್ಕಾರ ಕುಟುಂಬಸ್ಥರಿಗೆ ಎರಡು ಮೃತ ದೇಹಗಳ ಹಸ್ತಾಂತರ ಮಾಡಿತು. ಒಂದು ಅಂಬುಲೆನ್ಸ್‌ನಲ್ಲಿ ಬೆಂಗಳೂರಿನ ಮತ್ತಿಕೇರೆಯಲ್ಲಿರುವ ಸುಂದರನಗರಕ್ಕೆ ಭರತ್‌ ಭೂಷಣ್‌ ಶವ ಮತ್ತೊಂದು ಅಂಬುಲೆನ್ಸ್‌ನಲ್ಲಿ ಶಿವಮೊಗ್ಗದ ಮಂಜುನಾಥ್ ರಾವ್‌ ಅವರ ಪಾರ್ಥಿವ ಶವವವನ್ನು ಕಳುಹಿಸಲಾಯಿತು.

ಬೆಳಗ್ಗೆ 5:30ರ ವೇಳೆಗೆ ಭರತ್‌ ಭೂಷಣ್‌ ಶವ ಸುಂದರ ನಗರಕ್ಕೆ ಆಗಮಿಸಿತು. ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ, ಗಣ್ಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.

Share This Article