LatestMain PostNational

ಪದ್ಮಶ್ರೀ ಪುರಸ್ಕೃತೆ ಶಾಂತಿದೇವಿ ನಿಧನ- ಪ್ರಧಾನಿ ಸೇರಿ ಗಣ್ಯರಿಂದ ಸಂತಾಪ

ಭುವನೇಶ್ವರ್: ಸಮಾಜ ಸೇವಕಿ ಹಾಗೂ ಪದ್ಮಶ್ರೀ ಪುರಸ್ಕೃತೆ ಶಾಂತಿದೇವಿ (88) ಭಾನುವಾರ ರಾತ್ರಿ ಒಡಿಶಾದ ರಾಯಗಡ ಜಿಲ್ಲೆಯ ಗುಣಪುರದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.

ನಿನ್ನೆ ರಾತ್ರಿ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶಾಂತಿದೇವಿ ಪ್ರಜ್ಞಾಹೀನರಾಗಿದ್ದರು. ಕುಟುಂಬಸ್ಥರು ಅವರನ್ನು ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಶಾಂತಾದೇವಿ ಆಗಿನ ಅವಿಭಜಿತ ಕೊರಾಪುಟ್ ಜಿಲ್ಲೆಯ ಬುಡಕಟ್ಟು ಜನಾಂಗದ ಮಹಿಳೆಯರ ಉನ್ನತಿಗಾಗಿ ಹೋರಾಡಿ ಅತ್ಯಮೂಲ್ಯ ಕೊಡುಗೆಯನ್ನು ನೀಡಿದ್ದಾರೆ.

ಬುಡಕಟ್ಟು ಮಕ್ಕಳಿಗಾಗಿ ರಾಯಗಡ ಜಿಲ್ಲೆಯ (ಅವಿಭಜಿತ ಕೊರಾಪುಟ್ ಜಿಲ್ಲೆ) ಸಂಖಲ್ಪದರ್ ಗ್ರಾಮದಲ್ಲಿ ಆಶ್ರಮವನ್ನು ಸ್ಥಾಪಿಸಿ ಕುಷ್ಠ ರೋಗಿಗಳ ಸೇವೆಯನ್ನು ಮಾಡಿದ್ದರು. ಅಷ್ಟೇ ಅಲ್ಲದೇ ಅನಾಥರು, ನಿರ್ಗತಿಕರು ಮತ್ತು ಬಡ ಮಕ್ಕಳ ಪುನರ್ವಸತಿಗಾಗಿ ಅವರು 1964ರಲ್ಲಿ ರಾಯಗಡ ಜಿಲ್ಲೆಯ ಗುಣಪುರದಲ್ಲಿ ಸೇವಾ ಸಮಾಜ ಆಶ್ರಮವನ್ನು ಸ್ಥಾಪಿಸಿದರು. ಇದನ್ನೂ ಓದಿ:  ಪಾಕ್ ಪ್ರಧಾನಿ ಅಂತರಾಷ್ಟ್ರೀಯ ಭಿಕ್ಷುಕ: ಸಿರಾಜುಲ್ ಹಕ್

ಶಾಂತಿದೇವಿಯು ಗುಣಪುರ್ ಮತ್ತು ರಾಯಗಡದಲ್ಲಿ ಹೆಣ್ಣುಮಕ್ಕಳಿಗೆ ಮೀಸಲಾದ ಮೂರು ಅನಾಥಾಶ್ರಮಗಳನ್ನು ಸ್ಥಾಪಿಸಿದ್ದಾರೆ. ಬುಡಕಟ್ಟು ಬಾಲಕಿಯರಿಗಾಗಿ ಲಿಮಾಮೆಡಾದಲ್ಲಿ ಹಾಸ್ಟೆಲ್, ರಾಯಗಡ ಮತ್ತು ಗಜಪತಿಯಲ್ಲಿ ಬುಡಕಟ್ಟು ಮಕ್ಕಳಿಗಾಗಿ ಎಂಟು ಕಲ್ಯಾಣ ಕೇಂದ್ರಗಳನ್ನು ತೆರೆದಿದ್ದಾರೆ. ಒಡಿಶಾದ ಪ್ರಸಿದ್ಧ ಸಮಾಜ ಸೇವಕಿ, ಗಾಂಧಿವಾದಿ ಅನುಯಾಯಿಯಾದ ಶಾಂತಿದೇವಿ ಅವರಿಗೆ ಪದ್ಮಶ್ರೀ ಸೇರಿದಂತೆ ಜಮುನಾಲಾಲ್ ಬಜಾಜ್ ಪ್ರಶಸ್ತಿ ಮತ್ತು ರಾಧಾನತ್ ರಥ ಶಾಂತಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಇದನ್ನೂ ಓದಿ: ವಜ್ರ ಖಚಿತ ಐಫೋನ್ ಕದ್ದು ವಾಟ್ಸಪ್ ಸ್ಟೇಟಸ್‍ನಲ್ಲಿ ಸಿಕ್ಕಿ ಬಿದ್ರು 

ಶಾಂತಿದೇವಿ ಅವರ ನಿಧನಕ್ಕೆ ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ಬಡವರ ಹಾಗೂ ಹಿಂದುಳಿದವರ ಧ್ವನಿಯಾಗಿದ್ದ ಶಾಂತಿ ದೇವಿ ಅವರು ನೆನಪಿನಲ್ಲಿರುತ್ತಾರೆ. ಅವರು ಹಿಂದುಳಿದವರ ಹಾಗೂ ಬಡವರ ಅಭಿವೃದ್ಧಿಗಾಗಿ ಕೆಲಸ ಮಾಡಿದ್ದರಲ್ಲದೇ, ನ್ಯಾಯಯುತ ಸಮಾಜಕ್ಕಾಗಿ ಹೋರಾಡಿದ್ದರು. ಅವರ ನಿಧನದಿಂದ ನೋವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್‍ನಲ್ಲಿ ತಿಳಿಸಿದ್ದಾರೆ.

Leave a Reply

Your email address will not be published.

Back to top button