– ಎಸ್‌ಐಟಿ ರಚನೆಗೆ ಡಿಜಿಪಿಗೆ ಸೂಚಿಸಿದ ಸುಪ್ರೀಂ ಕೋರ್ಟ್
ನವದೆಹಲಿ: ಆಪರೇಷನ್ ಸಿಂಧೂರದ (Operation Sindoor) ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಹರಿಯಾಣದ ಅಶೋಕ ವಿಶ್ವವಿದ್ಯಾಲಯದ (Ashok University) ಅಸೋಸಿಯೇಟ್ ಪ್ರೊಫೆಸರ್ ಮತ್ತು ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಅಲಿ ಖಾನ್ ಮಹ್ಮದಾಬಾದ್ (Ali Khan Mahmudabad) ಅವರಿಗೆ ಸುಪ್ರೀಂಕೋರ್ಟ್ (Supreme Court) ಮಧ್ಯಂತರ ಜಾಮೀನು ನೀಡಿದೆ. ಸೋನಿಪತ್‌ನ ಸಿಜೆಎಂ ತೃಪ್ತಿಗೆ ಅನುಸಾರ ಜಾಮೀನು ಬಾಂಡ್ ಒದಗಿಸುವಂತೆ ಸೂಚಿಸಿದೆ.
ತನಿಖೆಯ ವಿಷಯವಾಗಿರುವ ಈ ಎರಡು ಪೋಸ್ಟ್‌ಗಳಿಗೆ ಸಂಬಂಧಿಸಿದಂತೆ ಯಾವುದೇ ಆನ್‌ಲೈನ್ ಲೇಖನವನ್ನು ಬರೆಯಬಾರದು ಅಥವಾ ಯಾವುದೇ ಆನ್‌ಲೈನ್ ಭಾಷಣವನ್ನು ಮಾಡಬಾರದು ಎಂದು ಅಲಿ ಖಾನ್ ಮಹ್ಮದಾಬಾದ್‌ಗೆ ನಿರ್ದೇಶಿಸಲಾಗಿದೆ.ಇದನ್ನೂ ಓದಿ: ಆಪರೇಷನ್ ಸಿಂಧೂರ ಬಗ್ಗೆ ಆಕ್ಷೇಪಾರ್ಹ ಪೋಸ್ಟ್ – ಅಶೋಕ ವಿಶ್ವವಿದ್ಯಾಲಯದ ಪ್ರೊಫೆಸರ್ ಅರೆಸ್ಟ್
ಭಾರತದ ನೆಲದಲ್ಲಿ ನಡೆದ ಭಯೋತ್ಪಾದಕ ದಾಳಿಗಳ ಬಗ್ಗೆ ಅಥವಾ ನಮ್ಮ ರಾಷ್ಟ್ರ ನೀಡಿದ ಪ್ರತೀಕಾರದ ಪ್ರತಿಕ್ರಿಯೆಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದಂತೆ ಸುಪ್ರೀಂ ಕೋರ್ಟ್ ಅವರನ್ನು ನಿರ್ಬಂಧಿಸಿದೆ. ಜೊತೆಗೆ ತಮ್ಮ ಪಾಸ್‌ಪೋರ್ಟ್ ಸಲ್ಲಿಸಲು ತಿಳಿಸಿದೆ. ಇದರೊಂದಿಗೆ, ಮೂವರು ಐಪಿಎಸ್ ಅಧಿಕಾರಿಗಳನ್ನು ಒಳಗೊಂಡ ಎಸ್‌ಐಟಿ ರಚನೆಗೂ ಸುಪ್ರೀಂ ಕೋರ್ಟ್ ಆದೇಶಿಸಿದೆ. ಈ ಸಮಿತಿಯು ರಾಜ್ಯದ ಹೊರಗಿನಿಂದ ಬಂದಿರುವ ಒಬ್ಬ ಮಹಿಳಾ ಅಧಿಕಾರಿಯನ್ನು ಸಹ ಒಳಗೊಂಡಿರುತ್ತದೆ. 24 ಗಂಟೆಗಳ ಒಳಗೆ ಎಸ್‌ಐಟಿ ರಚಿಸುವಂತೆ ನಿರ್ದೇಶಿಸಿದ್ದು, ಅಸೋಸಿಯೇಟ್ ಪ್ರೊಫೆಸರ್ ತನಿಖೆಗೆ ಸಂಪೂರ್ಣವಾಗಿ ಸಹಕರಿಸುವಂತೆ ಹೇಳಿದೆ.
ಮಹ್ಮದಾಬಾದ್ ಅವರನ್ನು ಮೇ 27ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. ಕಸ್ಟಡಿ ಅವಧಿ ಪೂರ್ಣಗೊಂಡ ನಂತರ, ಪೊಲೀಸರು ಪ್ರೊ.ಅಲಿಯನ್ನು ಜೆಎಂಐಸಿ ಆಜಾದ್ ಸಿಂಗ್ ನ್ಯಾಯಾಲಯದಲ್ಲಿ ಹಾಜರುಪಡಿಸಿದರು. ಪೊಲೀಸರು ಪ್ರಾಧ್ಯಾಪಕರನ್ನು ಇನ್ನೂ ಏಳು ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಕೋರಿದರು. ಆದರೆ ನ್ಯಾಯಾಲಯ ಈ ಬೇಡಿಕೆಯನ್ನು ತಿರಸ್ಕರಿಸಿತು.
ಪ್ರಕರಣ ಏನು?
ಅಲಿ ಖಾನ್ ಮಹ್ಮದಾಬಾದ್ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಬಿಜೆಪಿಯ ಯುವ ಘಟಕದ ಸದಸ್ಯರೊಬ್ಬರು ದೂರು ದಾಖಲಿಸಿದ್ದರು. ಇದಾದ ಬಳಿಕ, ಹೇಳಿಕೆಗೆ ಸಂಬಂಧಿಸಿದಂತೆ ಹರಿಯಾಣದ ಮಹಿಳಾ ಆಯೋಗವು ಮಹ್ಮದಾಬಾದ್‌ಗೆ ಮೇ 15 ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿತ್ತು. ಆದರೆ, ಮಹ್ಮದಾಬಾದ್ ಹಾಜರಾಗಿರಲಿಲ್ಲ. ಬಳಿಕ ಸೋನಿಪತ್ ಪೊಲೀಸರು ಮಹ್ಮದಾಬಾದ್ ಅವರನ್ನು ಬಂಧಿಸಿದ್ದರು.ಇದನ್ನೂ ಓದಿ: ಮುಂದಿನ ಮಳೆಗಾಲದೊಳಗೆ ಸಮಸ್ಯೆ ಬಗೆಹರಿಯದಿದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡ್ತೇನೆ: ಬೈರತಿ ಬಸವರಾಜ್