ನಟ ಕಿಚ್ಚ ಸುದೀಪ್ ಇಂದು ತಮ್ಮ 49ನೇ ಹುಟ್ಟು ಹಬ್ಬವನ್ನು ಸಡಗರದಿಂದ ಆಚರಿಸಿಕೊಂಡರು. ಮೂರ್ನಾಲ್ಕು ವರ್ಷಗಳಿಂದ ಹುಟ್ಟು ಹಬ್ಬದ ದಿನದಂದು ಅಭಿಮಾನಿಗಳ ಕೈಗೆ ಸಿಗದಿದ್ದ ಕಿಚ್ಚ, ಇಂದು ಅವರಿಗಾಗಿ ಇಡೀ ದಿನ ಮೀಸಲಿಟ್ಟಿದ್ದಾರೆ. ಹಾಗಾಗಿ ದೇಶದ ನಾನಾ ಭಾಗಗಳಿಂದ ಕಿಚ್ಚನ ಹುಟ್ಟು ಹಬ್ಬಕ್ಕೆ ಅಭಿಮಾನಿಗಳು ಬೆಂಗಳೂರಿಗೆ ಆಗಮಿಸಿದ್ದಾರೆ.
ತಡರಾತ್ರಿಯಿಂದಲೇ ನೆಚ್ಚಿನ ನಟನ ಹುಟ್ಟು ಹಬ್ಬವನ್ನು ಆಚರಿಸಲು ಅಭಿಮಾನಿಗಳು ಕಿಚ್ಚನ ಮನೆಮುಂದೆ ಜಮಾಯಿಸಿದ್ದು, ನಟನಿಗೆ ಜೈಕಾರ ಕೂಗುತ್ತಿದ್ದಾರೆ. ಅಭಿಮಾನಿಗಳ ಭೇಟಿ ಬೆಳಗ್ಗೆ ಬಂದ ಸುದೀಪ್, ಎಲ್ಲರೊಂದಿಗೂ ಕೈ ಕುಲುಕಿ, ಸೆಲ್ಫಿ ತಗೆಸಿಕೊಂಡು ಸಂತಸ ಪಟ್ಟಿದ್ದಾರೆ. ನೆಚ್ಚಿನ ನಟನನ್ನು ಹತ್ತಿರದಿಂದ ನೋಡಿದ ಅಭಿಮಾನಿಗಳು ಕೂಡ ಥ್ರಿಲ್ ಆಗಿದ್ದಾರೆ. ಇದನ್ನೂ ಓದಿ:ಬಾಲಿವುಡ್‌ಗೆ ಎಂಟ್ರಿ ಕೊಟ್ಟ `ಮಾಸ್ಟರ್ ಪೀಸ್’ ನಟಿ ಶಾನ್ವಿ ಶ್ರೀವಾಸ್ತವ್
ಸುದೀಪ್ ಅವರ ಜೆಪಿ ನಗರ ನಿವಾಸಕ್ಕೆ ಬರುವವರು ಕೇಕು ಮತ್ತು ಹಾರಗಳನ್ನು ತರಬಾರದು ಎಂದು ಮೊದಲೇ ಅಭಿಮಾನಿಗಳಿಗೆ ತಿಳಿಸಲಾಗಿತ್ತು. ಹಾಗಾಗಿ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಮೊಬೈಲ್ ಮಾತ್ರ ತಂದಿದ್ದರು. ಸುದೀಪ್ ಅವರ ಕೈಕುಲುಕಿ, ಶುಭಾಶಯ ತಿಳಿಸಿ, ಸೆಲ್ಫಿ ತಗೆದುಕೊಂಡು ಹೋಗುತ್ತಿದ್ದರು. ಹಾಗಾಗಿ ಕಿಚ್ಚನ ಜೆಪಿ ನಗರದ ನಿವಾಸ ಅಭಿಮಾನಿಗಳಿಂದ ತುಂಬಿ ತುಳುಕಿತ್ತು.