Connect with us

Bengaluru City

ಇಂದಿನಿಂದ 2 ತಿಂಗಳು ನೃಪತುಂಗ ರಸ್ತೆ ಬಂದ್

Published

on

ಬೆಂಗಳೂರು: ನಗರದ ನೃಪತುಂಗ ರಸ್ತೆ ಇಂದಿನಿಂದ ಎರಡು ತಿಂಗಳು ಬಂದ್ ಆಗಲಿದೆ.

ನೃಪತುಂಗ ರಸ್ತೆ ಅಂದ್ರೆ ಸದಾ ಗಿಜಿಗುಡುವ ಮಾರ್ಗ. ವಾಹನಗಳ ಸಂಚಾರ ಆಮೆ ಚಲನಯನ್ನೇ ಅನುಸರಿಸುತ್ತೆ. ಕೆಆರ್ ಸರ್ಕಲ್‍ನಿಂದ ಹಡ್ಸನ್ ಸರ್ಕಲ್ ತಲುಪಲು ಸಾಕಷ್ಟು ಸಮಯ ತೆಗೆದುಕೊಳ್ತಿದ್ದು, ಆರ್‍ಬಿಐ, ಡಿಜಿಪಿ ಕಚೇರಿ, ಲೋಕೋಪಯೋಗಿ ಕಚೇರಿಗಳು ಇದೇ ರಸ್ತೆಯಲ್ಲಿವೆ. ಇವತ್ತಿನಿಂದ ಈ ರಸ್ತೆ ಬಂದ್ ಮಾಡಲಾಗ್ತಿದ್ದು ಟ್ರಾಫಿಕ್ ಸಮಸ್ಯೆ ಕಟ್ಟಿಟ್ಟ ಬುತ್ತಿ.

ನೃಪತುಂಗ ರಸ್ತೆಯನ್ನ ಟೆಂಡರ್ ಶ್ಯೂರ್ ಯೋಜನೆಯಡಿ ಅಭಿವೃದ್ಧಿ ಮಾಡಲು ಕಾಮಗಾರಿ ಆರಂಭವಾಗಿದ್ದು, 2 ತಿಂಗಳ ಕಾಲ ಮುಚ್ಚಲಾಗ್ತಿದೆ. 14 ಮೀಟರ್ ವಿಸ್ತೀರ್ಣದ ರಸ್ತೆಯಲ್ಲಿ ಮೊದಲ ಹಂತದಲ್ಲಿ 7 ಮೀಟರ್ ಕಾಮಗಾರಿ ನಡೆಸಲಾಗ್ತಿದೆ. ಉಳಿದರ್ಧ ರಸ್ತೆಯಲ್ಲಿ ಕೇವಲ ಸರ್ಕಾರಿ ಬಸ್‍ಗಳು ಹಾಗು ಸರ್ಕಾರಿ ವಾಹನಗಳಿಗೆ ಮಾತ್ರ ಅವಕಾಶ ನಿಡಲಾಗಿದೆ.

ಸಂಚಾರಿ ಪೊಲೀಸರು ಸಂಚಾರ ದಟ್ಟಣೆಯಾಗದಂತೆ ನೋಡಿಕೊಳ್ಳಲು ಬೇರೆ ಮಾರ್ಗ ಕಂಡುಕೊಂಡಿದ್ದಾರೆ. ವಾಹನ ಸವಾರರು ಕೆಆರ್ ಸರ್ಕಲ್‍ನಿಂದ ಕಬ್ಬನ್ ಪಾರ್ಕ್ ಪ್ರವೇಶಿಸಿ ಕೇಂದ್ರ ಗ್ರಂಥಾಲಯದ ಬಳಿ ಬಲಕ್ಕೆ ತಿರುವು ಪಡೆದು ಕಾರ್ಪೊರೇಷನ್ ಸರ್ಕಲ್‍ಗೆ ಎಂಟ್ರಿಯಾಗಬಹುದು. ಕೇಂದ್ರ ಗ್ರಂಥಾಲಯ ರಸ್ತೆಯನ್ನ ಏಕಮುಖ ಸಂಚಾರಗೊಳಿಸಲಾಗಿದ್ದು, ಗ್ರಂಥಾಲಯದ ರಸ್ತೆಯಿಂದ ಹೈಕೋರ್ಟ್ ಕಡೆಗೆ ಒನ್‍ವೇ ಮಾಡಲಾಗಿದೆ.

ಸದಾ ವಾಹನಗಳಿಂದ ತುಂಬಿರುತ್ತಿದ್ದ ರಸ್ತೆ ಇಂದಿನಿಂದ ಬಿಕೋ ಎನ್ನಲಿದೆ. ವಾಹನ ಸವಾರರಿಗೆ ಕಿರಿಕಿರಿ ಶುರುವಾಗಲಿದೆ. ಬಿಬಿಎಂಪಿ ಅಧಿಕಾರಿಗಳು ನಿಗಧಿತ ಸಮಯದಲ್ಲಿ ಕಾಮಗಾರಿ ಮುಗಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ರೆ ಉತ್ತಮ.

 

 

Click to comment

Leave a Reply

Your email address will not be published. Required fields are marked *

www.publictv.in