ಅಹಮ್ಮದಾಬಾದ್: ಇನ್ಶುರೆನ್ಸ್ ಹಣಕ್ಕಾಗಿ ದತ್ತು ಪಡೆದ ಮಗನನ್ನೇ ಹತ್ಯೆ ಮಾಡಿದ ಆರೋಪದ ಮೇಲೆ ಎನ್‍ಆರ್‍ಐ ದಂಪತಿ ವಿರುದ್ಧ ಪ್ರಕರಣ ದಾಖಲಾಗಿದೆ.
ಸದ್ಯ ಲಂಡನ್‍ನಲ್ಲಿ ನೆಲೆಸಿರೋ 28 ವರ್ಷದ ಆರತಿ ಲೋಕನಾಥ್ ಹಾಗೂ 53 ವರ್ಷದ ಕನ್ವಾಲ್ಜಿತ್ ಸಿನ್ಹ ರಾಯ್ಜಾಡಾ ಈ ಆರೋಪವನ್ನು ಎದುರಿಸುತ್ತಿದ್ದು, ದಂಪತಿ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. 13 ವರ್ಷದ ಗೋಪಾಲ್ ಎಂಬ ಬಾಲಕನ ಹತ್ಯೆಯಲ್ಲಿ ಈ ದಂಪತಿಯ ಕೈವಾಡವಿದೆ ಅಂತಾ ಕೆಶೋದ್ ಪೊಲೀಸ್ ಇನ್ಸ್ ಪೆಕ್ಟರ್ ಅಶೋಕ್ ತಿಲ್ವಾ ಹೇಳಿದ್ದಾರೆ.
Advertisement
ಏನಿದು ಪ್ರಕರಣ?: ಆರತಿ ಹಾಗೂ ಕನ್ವಲ್ಜಿತ್ ಸಿನ್ಹಾ ದಂಪತಿ ನಿತೀಶ್ ಮುಂಡ್ ಎಂಬಾತನ ಜೊತೆ ಪಿತೂರಿ ನಡೆಸಿ ಗೋಪಾಲ್‍ನನ್ನು ದತ್ತು ಪಡೆದಿದ್ದರು. ಬಳಿಕ ಗೋಪಾಲ್ ಹೆಸರಲ್ಲಿ 1.20 ಕೋಟಿ ರೂಪಾಯಿ ಇನ್ಶುರೆನ್ಸ್ ಮಾಡಿಸಲಾಗಿತ್ತು. ಮೊದಲು ಲಂಡನ್‍ನಲ್ಲೇ ವಾಸವಿದ್ದ ನಿತೀಶ್ ವೀಸಾ ಅವಧಿ ಮುಗಿದ ಬಳಿಕ ಅಹಮದಾಬಾದ್‍ಗೆ ಮರಳಿದ್ದ. ಆದ್ರೆ ಈತ ಹಾಗೂ ದಂಪತಿ ಜೊತೆಗೂಡಿ 2015ರಲ್ಲೇ ಗೋಪಾಲ್‍ನನ್ನು ಕೊಂದು ಇನ್ಶುರೆನ್ಸ್ ಹಣವನ್ನು ಲಪಟಾಯಿಸಲು ಸ್ಕೆಚ್ ಹಾಕಿದ್ರು ಎಂದು ತಿಲ್ವಾ ಹೇಳಿದ್ದಾರೆ.
Advertisement
2017ರ ಫೆಬ್ರವರಿ 8ರಂದು ಗೋಪಾಲ್, ನಿತೀಶ್, ಹರ್ಸುಖ್ ಪಟೇಲ್ ಹಾಗೂ ಮಹದೇವ್ ಎಂಬವರ ಜೊತೆ ರಾಜ್‍ಕೋಟ್‍ನಿಂದ ಮಲಿಯಾದ ತನ್ನ ಮನೆಗೆ ಹಿಂದುರುಗುತ್ತಿದ್ದ ಸಂದರ್ಭದಲ್ಲಿ ಎರಡು ಬೈಕ್‍ನಲ್ಲಿ ಬಂದ ಅಪರಿಚಿತರು ಜುನಾಗಢ್ ಜಿಲ್ಲೆಯ ಕೆಶೋದ್ ಬಳಿ ಗೋಪಾಲ್‍ಗೆ ಚಾಕುವಿನಿಂದ ಇರಿದಿದ್ದರು. ಪರಿಣಾಮ ಆತ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಗೋಪಾಲ್ ಮೃತಪಟ್ಟಿದ್ದ.
Advertisement
ಗೋಪಾಲ್ ನಿತೀಶ್‍ನೊಂದಿಗೆ ವಾಸವಿದ್ದ. ಬಾಲಕನ ಹತ್ಯೆಗಾಗಿ ಈ ಹಿಂದೆಯೇ ಸಂಚು ಹೂಡಿದ್ದ ನಿತೀಶ್ ಇಬ್ಬರಿಗೆ ತಲಾ 5 ಲಕ್ಷ ರೂಪಾಯಿ ಹಣ ನೀಡಿ ಸುಫಾರಿ ಕೊಟ್ಟಿದ್ದ. ಸೋಮವಾರದಂದು ನಿತೀಶ್‍ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಗೋಪಾಲ್ ಹತ್ಯೆಯಲ್ಲಿ ಎನ್‍ಆರ್‍ಐ ದಂಪತಿಯ ಕೈವಾಡವಿರುವ ಕುರಿತು ಬೆಳಕಿಗೆ ಬಂದಿದೆ. ಸದ್ಯ ಲಂಡನ್‍ನಲ್ಲಿರುವ ಎನ್‍ಆರ್‍ಐ ದಂಪತಿಯನ್ನು ಬಂಧಿಸಲು ತಯಾರಿ ನಡೆಸಿದ್ದೇವೆ ಎಂದು ಪೊಲೀಸ್ ಅಧಿಕಾರಿ ಅಶೋಕ್ ತಿಲ್ವಾ ತಿಳಿಸಿದ್ದಾರೆ.