– ಮೀಸಲಾತಿ ಕ್ಷೇತ್ರಗಳ ಬದಲಾವಣೆ ಸರ್ಕಾರದ ವಿವೇಚನೆಗೆ ಬಿಟ್ಟ ವಿಚಾರ ಎಂದ ಕೋರ್ಟ್
ನವದೆಹಲಿ: ಪರಿಶಿಷ್ಟ ಜಾತಿ (ಎಸ್ಸಿ) ಮತ್ತು ಪರಿಶಿಷ್ಟ ಪಂಗಡಗಳ (ಎಸ್ಟಿ) ಅಭ್ಯರ್ಥಿಗಳಿಗೆ ಯಾವುದೇ ನಿರ್ದಿಷ್ಟ ಕ್ಷೇತ್ರವನ್ನು ಮೀಸಲಿಡಬೇಕೆಂದು ಮತದಾರರು ಅಥವಾ ಅಭ್ಯರ್ಥಿಗಳು ಹಕ್ಕು ಮಂಡಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ (Supreme Court) ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
ಮಹಾರಾಷ್ಟ್ರದ ಜಿಲ್ಲಾ ಪಂಚಾಯಿತಿ ಮತ್ತು ಪಂಚಾಯಿತಿ ಸಮಿತಿ ಚುನಾವಣೆಗಳಲ್ಲಿ ಎಸ್ಸಿ, ಎಸ್ಟಿ ಮೀಸಲು ಕ್ಷೇತ್ರಗಳ ಆವರ್ತನ ಪದ್ಧತಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾಗೊಳಿಸುವ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ಜಾಯ್ಮಲ್ಯ ಬಾಗ್ಚಿ ಮತ್ತು ವಿ.ಮೊಹನಾ ಅವರನ್ನೊಳಗೊಂಡ ಪೀಠ ಈ ಅಭಿಪ್ರಾಯ ತಿಳಿಸಿದೆ.
ಮೀಸಲು ಕ್ಷೇತ್ರಗಳ ಆವರ್ತನಕ್ಕೆ ಸಂಬಂಧಿಸಿದ 2025ರ ಮಹಾರಾಷ್ಟ್ರ ಜಿಲ್ಲಾ ಪಂಚಾಯಿತಿ ಮತ್ತು ಪಂಚಾಯಿತಿ ಸಮಿತಿ ನಿಯಮಗಳ 12ನೇ ನಿಯಮವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿತ್ತು. ಈ ನಿಯಮದಿಂದ ಮೀಸಲು ಕ್ಷೇತ್ರಗಳ ಆವರ್ತನ ಪ್ರಕ್ರಿಯೆಯ ಆರಂಭಿಕ ದಿನಾಂಕ ಬದಲಾಗಿದ್ದು, ಕೆಲವು ಕ್ಷೇತ್ರಗಳು ಎಂದಿಗೂ ಮೀಸಲಾತಿಗೆ ಒಳಪಡದ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಅರ್ಜಿದಾರರು ವಾದಿಸಿದ್ದರು. ಇದನ್ನೂ ಓದಿ: ಕೆ.ಎಸ್ ಈಶ್ವರಪ್ಪ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಪ್ರಕರಣ – ಲೋಕಾಯುಕ್ತಕ್ಕೆ ಸುಪ್ರೀಂ ನೋಟಿಸ್
ವಾದ ಆಲಿಸಿದ ನ್ಯಾಯಮೂರ್ತಿ ಜಾಯ್ಮಲ್ಯ ಬಾಗ್ಚಿ, ಎಸ್ಸಿ ಮತ್ತು ಎಸ್ಟಿ ಜನಸಂಖ್ಯೆಯ ಪ್ರಮಾಣಕ್ಕೆ ಅನುಗುಣವಾಗಿ ಕ್ಷೇತ್ರಗಳನ್ನು ಮೀಸಲಿಡುವುದು ಕಾನೂನಿನ ಉದ್ದೇಶವಾಗಿದೆ. ಆದರೆ, ನಿರ್ದಿಷ್ಟ ಕ್ಷೇತ್ರವೊಂದನ್ನೇ ಮೀಸಲಿಡಬೇಕು ಎಂದು ಯಾವುದೇ ಮತದಾರ ಅಥವಾ ಅಭ್ಯರ್ಥಿ ಹಕ್ಕು ಮಂಡಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಮೀಸಲು ಕ್ಷೇತ್ರಗಳ ಆವರ್ತನವನ್ನು ಎಸ್ಸಿ ಮತ್ತು ಎಸ್ಟಿ ಜನಸಂಖ್ಯೆಯ ಪ್ರಮಾಣಕ್ಕೆ ಅನುಗುಣವಾಗಿ ನಿರ್ಧರಿಸುವ ವ್ಯವಸ್ಥೆಯಿದೆ. ಆದರೆ, ಆವರ್ತನವನ್ನು ಯಾವ ರೀತಿಯಲ್ಲಿ ಮತ್ತು ಯಾವ ಕಾಲಮಿತಿಯಲ್ಲಿ ಜಾರಿಗೊಳಿಸಬೇಕು ಎಂಬುದು ಸರ್ಕಾರದ ವಿವೇಚನೆಗೆ ಒಳಪಟ್ಟಿರುತ್ತದೆ ಎಂದು ಪೀಠ ಹೇಳಿದೆ.
2025ರ ತಿದ್ದುಪಡಿಯ ನಂತರ ನಡೆಯುವ ಮುಂದಿನ ಸಾರ್ವತ್ರಿಕ ಚುನಾವಣೆಯನ್ನು ಮೀಸಲು ಕ್ಷೇತ್ರಗಳ ಆವರ್ತನಕ್ಕೆ ಆರಂಭಿಕ ಹಂತವಾಗಿ ಪರಿಗಣಿಸುವ ನಿಯಮದಲ್ಲಿ ತಪ್ಪಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. ಇದನ್ನೂ ಓದಿ: ಮೂರು ಎಫ್ಐಆರ್ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ನಟ ಧನ್ವೀರ್
ಮೀಸಲಾತಿ ಅಥವಾ ಕ್ಷೇತ್ರಗಳ ಆವರ್ತನದ ಪರಿಕಲ್ಪನೆಗೆ ಈ ನಿಯಮ ವಿರುದ್ಧವಾಗಿದೆ ಎಂದು ಹೇಳಲು ಯಾವುದೇ ಕಾರಣವಿಲ್ಲ ಎಂದು ತಿಳಿಸಿದ ಸುಪ್ರೀಂ ಕೋರ್ಟ್, ಅರ್ಜಿಯನ್ನು ವಜಾಗೊಳಿಸಿತು.
