ವಾಷಿಂಗ್ಟನ್: ಅಮೆರಿಕದ (America) ನೌಕರರು ಚೀನಿಯರ ಜೊತೆ ಯಾವುದೇ ರೀತಿಯ ಲವ್, ಲೈಂಗಿಕ ಸಂಬಂಧ ಹೊಂದುವುದನ್ನು ಅಮೆರಿಕ ಸರ್ಕಾರ ನಿಷೇಧಿಸಿದೆ. ಭದ್ರತಾ ಕಾರಣಗಳಿಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಚೀನಾದಲ್ಲಿರುವ (China) ಅಮೆರಿಕದ ನೌಕರರು ಚೀನಿಯರೊಂದಿಗೆ ಲವ್, ಡೇಟ್, ಲೈಂಗಿಕ ಸಂಬಂಧ ಇಟ್ಟುಕೊಳ್ಳುವಂತಿಲ್ಲ ಎಂದು ಟ್ರಂಪ್ ಸರ್ಕಾರ ಆದೇಶಿಸಿದೆ. ರಾಜತಾಂತ್ರಿಕರು ಮತ್ತು ಅವರ ಕುಟುಂಬ ಸದಸ್ಯರು, ಭದ್ರತಾ ಅನುಮತಿಗಳನ್ನು ಹೊಂದಿರುವ ಗುತ್ತಿಗೆದಾರರಿಗೂ ಇದು ಅನ್ವಯಿಸುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಚೀನಾದಿಂದ ನಿರ್ಗಮಿಸುವ ಮೊದಲು ಯುಎಸ್ ರಾಯಭಾರಿಯಾಗಿದ್ದ ನಿಕೋಲಸ್ ಬರ್ನ್ಸ್ ಅವರು ಜನವರಿಯಲ್ಲಿ ಈ ಆದೇಶವನ್ನು ಜಾರಿಗೆ ತಂದಿದ್ದಾರೆ ಎನ್ನಲಾಗಿದೆ.
ಬೀಜಿಂಗ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಮತ್ತು ಗುವಾಂಗ್‌ಝೌ, ಶಾಂಘೈ, ಶೆನ್ಯಾಂಗ್ ಮತ್ತು ವುಹಾನ್‌ನಲ್ಲಿರುವ ಕಾನ್ಸುಲೇಟ್‌ಗಳು ಹಾಗೂ ಹಾಂಗ್ ಕಾಂಗ್‌ನಲ್ಲಿರುವ ಕಾನ್ಸುಲೇಟ್‌ಗಳ ಸಿಬ್ಬಂದಿಗೆ ಈ ನೀತಿ ಅನ್ವಯಿಸುತ್ತದೆ. ಚೀನಾದ ಹೊರಗೆ ಬೀಡುಬಿಟ್ಟಿರುವ ಅಮೆರಿಕದ ಸಿಬ್ಬಂದಿ ಅಥವಾ ಈಗಾಗಲೇ ಚೀನಾದ ನಾಗರಿಕರೊಂದಿಗೆ ಸಂಬಂಧ ಹೊಂದಿರುವವರಿಗೆ ವಿನಾಯಿತಿ ನೀಡಬಹುದು ಎಂದು ವರದಿ ತಿಳಿಸಿದೆ.
ವಿನಾಯಿತಿ ನೀಡಲು ಸಾಧ್ಯವಾಗದ ಪ್ರಕರಣಗಳಿದ್ದರೆ, ಅಂತಹವರು ತಮ್ಮ ಸಂಬಂಧವನ್ನು ಕೊನೆಗೊಳಿಸಬೇಕು. ಇಲ್ಲವೇ ತಮ್ಮ ಸ್ಥಾನವನ್ನು ತೊರೆಯಬೇಕು. ನಿಯಮವನ್ನು ಉಲ್ಲಂಘಿಸಿದರೆ ಅವರನ್ನು ತಕ್ಷಣವೇ ಚೀನಾ ತೊರೆಯುವಂತೆ ಆದೇಶಿಸಲಾಗುವುದು ಎನ್ನಲಾಗಿದೆ.
ವ್ಯಾಪಾರ, ತಂತ್ರಜ್ಞಾನ, ಜಾಗತಿಕ ಪ್ರಭಾವದ ವಿಚಾರದಲ್ಲಿ ಚೀನಾ ಮತ್ತು ಅಮೆರಿಕ ನಡುವೆ ಪೈಪೋಟಿ ಇದೆ. ಎರಡೂ ದೇಶಗಳ ನಡುವಿನ ಹದಗೆಟ್ಟ ಸಂಬಂಧದ ಬಗ್ಗೆ ಈ ಆದೇಶ ಒತ್ತಿ ಹೇಳುತ್ತದೆ.