ನವದೆಹಲಿ: ಮುಂಬರುವ ದೀಪಾವಳಿ(Deepavali) ಹಬ್ಬದವರೆಗೆ ಯಾವುದೇ ಪ್ರತಿಭಟನೆಗಳನ್ನು(Protest) ಆಯೋಜಿಸುವ ಉದ್ದೇಶವಿಲ್ಲ ಎಂದು ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜಿತ್ ದೀಪ್ಕೆ(Abhijeet Dipke) ಹೇಳಿದ್ದಾರೆ.
ಸಂಘಟನೆಯ ಕಾರ್ಯಕರ್ತರು ಮತ್ತು ಬೆಂಬಲಿಗರು ಸದ್ಯ ಪ್ರತಿಭಟನೆಗಳಿಂದ ವಿರಾಮ ಪಡೆದು, ಮುಂಬರುವ ಹಬ್ಬದ ದಿನಗಳನ್ನು ತಮ್ಮ ಕುಟುಂಬ ಮತ್ತು ಪ್ರೀತಿಪಾತ್ರರ ಜೊತೆ ಕಳೆಯಬೇಕೆಂದು ಅವರು ಮನವಿ ಮಾಡಿದ್ದಾರೆ.
ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಘಟನೆಗಳಿಂದಾಗಿ ಕಾರ್ಯಕರ್ತರ ಕುಟುಂಬಗಳು ತೀವ್ರ ಆತಂಕಕ್ಕೆ ಒಳಗಾಗಿರುವುದನ್ನು ಪ್ರಸ್ತಾಪಿಸಿದರು. ತಮ್ಮ ಬೆಂಬಲಿಗರನ್ನು ‘ಕಾಕ್ರೋಚ್ಗಳು’ ಎಂದು ಸಂಬೋಧಿಸಿದ ಅವರು, ಕಳೆದ ಕೆಲವು ದಿನಗಳು ನಮಗೆ ಸುಲಭವಾಗಿರಲಿಲ್ಲ. ನಿಮ್ಮ ಕುಟುಂಬಗಳು ಚಿಂತಾಕ್ರಾಂತವಾಗಿವೆ. ಆದ್ದರಿಂದ ಕೆಲ ದಿನಗಳ ಕಾಲ ಹೋರಾಟದಿಂದ ಬಿಡುವು ಪಡೆದು ಕುಟುಂಬದವರೊಂದಿಗೆ ಸಮಯ ಕಳೆಯಿರಿ ಎಂದು ಕೋರಿದರು.
Message to all cockroaches https://t.co/9e5yI9Nst0
— Abhijeet Dipke (@abhijeet_dipke) October 20, 2026
ಸಿಜೆಪಿ ಮುಖಂಡರಾದ ಸೌರವ್ ದಾಸ್(Sourav Das) ಮತ್ತು ಅಶುತೋಷ್ ರಾಂಕಾ(Ashutosh Ranka) ಅವರ 5 ದಿನಗಳ ನ್ಯಾಯಾಂಗ ಬಂಧನ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಅವರನ್ನು ಸೋಮವಾರ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ (ಎಸ್ಇಎಂ) ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯವು ಅವರ ನ್ಯಾಯಾಂಗ ಬಂಧನವನ್ನು ಅಕ್ಟೋಬರ್ 21ರವರೆಗೆ ವಿಸ್ತರಿಸಿದೆ. ಈ ಕುರಿತು ಮಾತನಾಡಿದ ದೀಪ್ಕೆ ಹಲವು ಸ್ವಯಂಸೇವಕರ ಮೇಲೆ ಹಲ್ಲೆ ನಡೆಸಿ ವಶಕ್ಕೆ ಪಡೆದು ಈಗ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿದರು.
ಜೈಲಿನಲ್ಲಿರುವ ಸೌರವ್ ಮತ್ತು ಅಶುತೋಷ್ ಅವರು ಹಬ್ಬದ ಸಮಯದಲ್ಲಿ ಕುಟುಂಬದಿಂದ ದೂರ ಉಳಿಯಬೇಕಾಗಿರುವುದನ್ನು ನೆನಪಿಸಿದ ಅವರು, ಹಬ್ಬದ ಸಂಭ್ರಮದಲ್ಲಿ ಅವರಿಬ್ಬರನ್ನೂ ಸ್ಮರಿಸುವಂತೆ ಬೆಂಬಲಿಗರಲ್ಲಿ ಮನವಿ ಮಾಡಿದರು.
ಹೋರಾಟದಲ್ಲಿ ಎಷ್ಟೇ ಕಷ್ಟಗಳು ಎದುರಾದರೂ ಅಹಿಂಸೆಯ ಮಾರ್ಗದಿಂದ ಹಿಂದೆ ಸರಿಯಬಾರದು ಮತ್ತು ಪ್ರಚೋದನೆಗಳಿಗೆ ಒಳಗಾಗಿ ದ್ವೇಷಕ್ಕೆ ಎಡೆಮಾಡಿಕೊಡಬಾರದು. ನಾವು ದ್ವೇಷ ತುಂಬಿದ ಮನಸ್ಥಿತಿಯ ಜನರ ವಿರುದ್ಧ ಹೋರಾಡುತ್ತಿದ್ದೇವೆ. ಆದರೆ ಆ ದ್ವೇಷವು ನಮ್ಮೊಳಗೆ ಪ್ರವೇಶಿಸದಂತೆ ನಾವು ನೋಡಿಕೊಳ್ಳಬೇಕು. ನಾವು ಏನನ್ನು ವಿರೋಧಿಸುತ್ತೇವೆಯೋ ನಾವೇ ಅದೇ ಆಗಿ ಬದಲಾಗಬಾರದು ಎಂದು ಹೇಳಿದರು.
ಸೌರವ್ ಮತ್ತು ಅಶುತೋಷ್ ಜೈಲಿನಿಂದ ಹೊರಬರುವಾಗ ‘ಇಂಕ್ವಿಲಾಬ್ ಜಿಂದಾಬಾದ್’ ಘೋಷಣೆಯೊಂದಿಗೆ ಹೊರಬರಲಿದ್ದಾರೆ. ಇತ್ತೀಚೆಗೆ ಫ್ರಾನ್ಸ್ನಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಘಟನೆಗಳನ್ನು ನೋಡುವವರು, ಭಾರತದಲ್ಲಿ ಅನ್ಯಾಯವಾಗಿ ಜೈಲಿಗೆ ಕಳುಹಿಸಿದರೂ ಮುಖದಲ್ಲಿ ನಗುವಿನೊಂದಿಗೆ ಶಾಂತಿಯ ಮಾರ್ಗವನ್ನು ಆಯ್ದುಕೊಂಡ ಸೌರವ್ ಮತ್ತು ಅಶುತೋಷ್ ಅವರ ಬದ್ಧತೆಯನ್ನು ನೋಡಿ ಕಲಿಯಬೇಕಿದೆ ಎಂದು ತಿಳಿಸಿದರು.

