– ರಸ್ತೆ ಸಾರಿಗೆ ಸಚಿವಾಲಯದಿಂದ ಖಡಕ್ ನಿರ್ದೇಶನ
– ಚಾಲಕರ ಟಿಪ್‌ನಲ್ಲಿ ಕಮಿಷನ್ ಕಡಿತಕ್ಕೂ ಬ್ರೇಕ್
ನವದೆಹಲಿ: ಒಲಾ, ಉಬರ್, ರ‍್ಯಾಪಿಡೋದಂತಹ ಕ್ಯಾಬ್‌ಗಳಲ್ಲಿ ಪ್ರಯಾಣಕ್ಕೆ ಮೊದಲೇ ಚಾಲಕರಿಗೆ ನೀಡುತ್ತಿದ್ದ ಟಿಪ್‌ಗೆ ಸಾರಿಗೆ ಸಚಿವಾಲಯ(Ministry of Road Transport and Highways) ಬ್ರೇಕ್ ಹಾಕಿದೆ.
ಪ್ರಯಾಣಿಕರು ಬುಕ್ಕಿಂಗ್ ಮಾಡುವಾಗ ಅಥವಾ ಪ್ರಯಾಣ ಪೂರ್ಣಗೊಳ್ಳುವ ಮೊದಲೇ ನೀಡಲಾಗುತ್ತಿದ್ದ ಪೂರ್ವ-ಟಿಪ್ (Pre Ride Tip) ಆಯ್ಕೆಯನ್ನು ತಕ್ಷಣವೇ ಆ್ಯಪ್‌ಗಳಿಂದ ತೆರವುಗೊಳಿಸಬೇಕು ಮತ್ತು ‘ಮೋಟಾರು ವಾಹನ ಅಗ್ರಿಗೇಟರ್ ಮಾರ್ಗಸೂಚಿಗ 2025’ ಅನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಎಲ್ಲಾ ಕ್ಯಾಬ್ (Cab) ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ.
ಬುಕ್ಕಿಂಗ್ ಸಮಯದಲ್ಲಿ ಮುಂಗಡ ಟಿಪ್ ನೀಡಿ, ರೈಡ್ ಶೀಘ್ರ ದೃಢೀಕರಣಕ್ಕೆ ಟಿಪ್ ನೀಡಿ, ಟಿಪ್ ನೀಡಿದರೆ ಚಾಲಕರು ಬೇಗನೆ ಒಪ್ಪಿಕೊಳ್ಳುತ್ತಾರೆ…. ಈ ರೀತಿಯ ಆಮಿಷ ಮತ್ತು ಜಾಹೀರಾತು ರೂಪದ ಆಯ್ಕೆಗಳ ಬಗ್ಗೆ ದಾಖಲಾದ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಂಡಿದೆ.

ಆದೇಶದಲ್ಲಿ ಏನಿದೆ?
ಟಿಪ್ ನೀಡುವ ಆಯ್ಕೆಯು ಪ್ರಯಾಣ ಸಂಪೂರ್ಣವಾಗಿ ಮುಕ್ತಾಯಗೊಂಡ ನಂತರವಷ್ಟೇ(Ride Completion) ಗ್ರಾಹಕರಿಗೆ ಕಾಣಿಸಬೇಕು. ಬುಕ್ಕಿಂಗ್ ಸಮಯದಲ್ಲಿ, ಪ್ರಯಾಣ ಆರಂಭವಾಗುವ ಮುನ್ನ ಅಥವಾ ಪ್ರಯಾಣದ ಮಧ್ಯದಲ್ಲೂ ಸಹ ಯಾವುದೇ ಕಾರಣಕ್ಕೂ ಟಿಪ್ ನೀಡುವ ಆಯ್ಕೆ ಆ್ಯಪ್‌ಗಳಲ್ಲಿ ಲಭ್ಯವಿರಬಾರದು.
ಗ್ರಾಹಕ ಸಂರಕ್ಷಣಾ ಕಾಯ್ದೆ-2019 ರ ಅಡಿಯಲ್ಲಿ ಯಾವುದೇ ರೀತಿಯ ದಾರಿ ತಪ್ಪಿಸುವ, ಕಡ್ಡಾಯಗೊಳಿಸುವ ಅಥವಾ ಕುಶಲತೆಯಿಂದ ಕೂಡಿದ ಟಿಪ್ ಆಯ್ಕೆಗಳನ್ನು ನೀಡುವಂತಿಲ್ಲ. ಇದನ್ನೂ ಓದಿ: ಮಾಡೆಲ್‌ಗಳಾದ ಬುಡಕಟ್ಟು ಸುಂದರಿಯರು – ಮಾಜಿ ನಕ್ಸಲ್ ಮಹಿಳೆಯರ ರ‍್ಯಾಂಪ್ ವಾಕ್ ವೈರಲ್
ಕಡಿತ ಮಾಡುವಂತಿಲ್ಲ
ಪ್ರಯಾಣ ಮುಗಿದ ನಂತರ ಪ್ರಯಾಣಿಕರು ನೀಡುವ ಸಂಪೂರ್ಣ ಟಿಪ್ ಮೊತ್ತವನ್ನು ನೇರವಾಗಿ ಚಾಲಕರಿಗೇ ತಲುಪಿಸಬೇಕು. ಪ್ರಯಾಣಿಕರು ನೀಡಿದ ಟಿಪ್ ಮೊತ್ತದಲ್ಲಿ ಅಗ್ರಿಗೇಟರ್ (ಕ್ಯಾಬ್ ಕಂಪನಿಗಳು) ಯಾವುದೇ ರೀತಿಯ ಹಣ ಅಥವಾ ಕಮಿಷನ್ ಅನ್ನು ಕಡಿತಗೊಳಿಸುವಂತಿಲ್ಲ ಎಂದು ಸರ್ಕಾರದ ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.
ಸರ್ಕಾರದ ಈ ನೂತನ ಕ್ರಮದಿಂದಾಗಿ ಆನ್‌ಲೈನ್ ಕ್ಯಾಬ್ ಬುಕಿಂಗ್ ವೇಳೆಯಲ್ಲಿ ಪ್ರಯಾಣಿಕರ ಮೇಲಾಗುತ್ತಿದ್ದ ಹೆಚ್ಚುವರಿ ಹಣದ ಒತ್ತಡ ತಪ್ಪಲಿದೆ.

