ಉಡುಪಿ: ವಿಪರೀತ ಮಳೆಯೂ ಇಲ್ಲ, ತೂಫಾನ್ ಕೂಡಾ ಇಲ್ಲ ಆದರೂ ಉಡುಪಿಯಲ್ಲಿ ಅರಬ್ಬಿ ಸಮುದ್ರ ಅಬ್ಬರಿಸ್ತಾಯಿದೆ. ಸಮುದ್ರದ ಅಲೆಗಳು ತೀರದಿಂದ ದೂರವಿದ್ದ ಮನೆಗಳತ್ತ ನುಗ್ಗಿ ಬರುತ್ತಿದ್ದು, ಸ್ಥಳೀಯ ನಿವಾಸಿಗಳು ಆತಂಕಗೊಂಡಿದ್ದಾರೆ.
ಉಡುಪಿಯಲ್ಲಿ ಅರಬ್ಬೀ ಸಮುದ್ರ ರೌದ್ರಾವತಾರ ತೋರುತ್ತಿದೆ. ಸಮುದ್ರ ಮೇಲಕ್ಕೆ ಎದ್ದು ಬಂದಿದೆ. ಭಾರೀ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದೆ. ಸದ್ಯದ ಪರಿಸ್ಥಿತಿ ಓಖಿ ಚಂಡಮಾರುತವನ್ನು ನೆನಪಿಸುತ್ತಿದೆ ಅಂತಾ ಸ್ಥಳೀಯರು ಹೇಳುತ್ತಿದ್ದಾರೆ.
ಬೇಸಿಗೆಯಲ್ಲಿ ಮೊದಲ ಬಾರಿಗೆ ಇಷ್ಟು ಗಾತ್ರದ ಅಲೆಗಳು ಕಾಣಿಸಿಕೊಂಡಿದೆ. ಕಾಪು ತಾಲೂಕು ಬೈಂದೂರಿನ ಮರವಂತೆಯಲ್ಲಿ ಬೇಸಗೆಯಲ್ಲೇ ಸಮುದ್ರ ಕೊರೆತವಾಗಿದೆ. ದಡಕ್ಕೆ ಹಾಕಿದ್ದ ಭಾರೀ ಗಾತ್ರದ ಕಲ್ಲುಗಳು ಸಮುದ್ರ ಪಾಲಾಗಿದೆ. ಮೀನುಗಾರಿಕಾ ರಸ್ತೆಯನ್ನು ಸಮುದ್ರ ತನ್ನ ಒಡಲಿಗೆ ಇಳಿಸಿಕೊಂಡಿದೆ. ಮನೆಗಳತ್ತ ನೀರು ನುಗ್ಗಿ ಬರುತ್ತಿದ್ದು ಜನ ಆತಂಕದಲ್ಲಿದ್ದಾರೆ.
ಮರವಂತೆಯಲ್ಲಿ ಹತ್ತಕ್ಕೂ ಹೆಚ್ಚು ಮನೆಗಳಿಗೆ ಸಮಸ್ಯೆಯಾಗಿದ್ದು ಕಳೆದ ರಾತ್ರಿ ಸಮುದ್ರ ಸ್ವಲ್ಪ ದೂರ ಹೋಗಿದೆ. ಮರವಂತೆ ಮೀನುಗಾರಿಕಾ ರಸ್ತೆಗೆ ನೀರು ಬಂದಾಗ ಜನ ಭಯಭೀತರಾದರು. ಸಮುದ್ರದ ಮಧ್ಯದಲ್ಲಿ ತೂಫಾನ್ ಎದ್ದರೆ ಸಮುದ್ರ ಪ್ರಕ್ಷುಬ್ಧವಾಗುತ್ತದೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ. ಇದು ಅಪಾಯದ ಮುನ್ಸೂಚನೆ ಅಂತ ಪರಿಸರ ತಜ್ಞ ಎನ್. ಎ ಮಧ್ಯಸ್ಥ ಅಭಿಪ್ರಾಯಪಟ್ಟಿದ್ದಾರೆ.