ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ(Hukkeri Hospital) ವೈದ್ಯರ ಕರ್ತವ್ಯಲೋಪ ಹಾಗೂ ಆಸ್ಪತ್ರೆ ಆಡಳಿತ ಮಂಡಳಿಯ ಅವ್ಯವಸ್ಥೆ ಮತ್ತೊಮ್ಮೆ ಜಗಜ್ಜಾಹೀರಾಗಿದೆ. ಬಿಸಿ ಅಡುಗೆ ಪಾತ್ರೆಗೆ ಬಿದ್ದು ಶೇ. 50ರಷ್ಟು ಸುಟ್ಟ ಗಾಯಗಳಿಂದ ನರಳುತ್ತಿದ್ದ ಎರಡು ವರ್ಷದ ಪುಟ್ಟ ಮಗುವಿಗೆ(Toddler) ಸಕಾಲದಲ್ಲಿ ಚಿಕಿತ್ಸೆ ದೊರೆಯದೆ ಪೋಷಕರು ಕಣ್ಣೀರಲ್ಲಿ ಕೈತೊಳೆಯುವಂತಾದ ಹೃದಯವಿದ್ರಾವಕ ಘಟನೆ ನಡೆದಿದೆ.
ಅಡುಗೆ ಮಾಡುವ ಪಾತ್ರೆಗೆ ಆಕಸ್ಮಿಕವಾಗಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಮಗುವಿನ ಸ್ಥಿತಿ ಚಿಂತಾಜನಕವಾಗಿದ್ದರಿಂದ, ಪೋಷಕರು ಗಾಬರಿಯಿಂದ ತಕ್ಷಣವೇ ಹುಕ್ಕೇರಿಯ ತಾಲೂಕು ಆಸ್ಪತ್ರೆಗೆ ಧಾವಿಸಿದ್ದಾರೆ. ಆದರೆ, ತುರ್ತು ಚಿಕಿತ್ಸಾ ಘಟಕದಲ್ಲಿ ಕರ್ತವ್ಯದಲ್ಲಿರಬೇಕಾದ ವೈದ್ಯರು ಗೈರುಹಾಜರಾಗಿದ್ದರು. ಮಗು ತೀವ್ರ ನೋವಿನಿಂದ ನರಳುತ್ತಿದ್ದರೂ ಚಿಕಿತ್ಸೆ ನೀಡಲು ವೈದ್ಯರೇ ಇಲ್ಲದೆ ಕುಟುಂಬಸ್ಥರು ಆಸ್ಪತ್ರೆಯ ಆವರಣದಲ್ಲಿ ದಿಕ್ಕುತೋಚದೆ ಕಂಗಾಲಾಗಿ ಪರಿತಪಿಸುವಂತಾಯಿತು.
ವೈದ್ಯರಿಗೆ ತರಾಟೆ:
ವೈದ್ಯರ ಗೈರಿನಿಂದ ಕಂಗಾಲಾದ ಕುಟುಂಬಸ್ಥರು ಮತ್ತು ಸ್ಥಳೀಯರು ಕೂಡಲೇ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ. ಹಿರಿಯ ಅಧಿಕಾರಿಗಳು ಎಚ್ಚರಿಕೆ ನೀಡಿದ ಬಳಿಕವಷ್ಟೇ ವೈದ್ಯ ಮಂಜುನಾಥ್ ಆಸ್ಪತ್ರೆಗೆ ಧಾವಿಸಿ ಬಂದಿದ್ದಾರೆ ಎನ್ನಲಾಗಿದೆ. ಜೀವನ್ಮರಣ ಹೋರಾಟದಲ್ಲಿದ್ದ ಪುಟ್ಟ ಕಂದಮ್ಮನ ಪರಿಸ್ಥಿತಿ ಕಂಡು ಆಕ್ರೋಶಗೊಂಡ ಸಾರ್ವಜನಿಕರು, ಕರ್ತವ್ಯದ ವೇಳೆ ವೈದ್ಯರು ಗೈರಾಗಿದ್ದನ್ನು ಖಂಡಿಸಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಕಠಿಣ ಕ್ರಮಕ್ಕೆ ಆಗ್ರಹ:
ಸರ್ಕಾರದಿಂದ ಲಕ್ಷಾಂತರ ರೂಪಾಯಿ ವೇತನ ಪಡೆಯುವ ವೈದ್ಯರು ಬಡ ರೋಗಿಗಳ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಸ್ಥಳೀಯರು ಹಿಡಿಶಾಪ ಹಾಕಿದ್ದಾರೆ. ತುರ್ತು ಸಂದರ್ಭಗಳಲ್ಲೂ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಲಭ್ಯವಿಲ್ಲದಿದ್ದರೆ, ಖಾಸಗಿ ಆಸ್ಪತ್ರೆಗಳ ದುಬಾರಿ ವೆಚ್ಚ ಭರಿಸಲಾಗದ ಬಡ ಜನರು ಎಲ್ಲಿಗೆ ಹೋಗಬೇಕು ಎಂದು ಜನರು ಪ್ರಶ್ನಿಸಿದ್ದಾರೆ.
ಬಡವರ ಪಾಲಿನ ಸಂಜೀವಿನಿಯಾಗಬೇಕಾದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿರುವ ಈ ಗಂಭೀರ ಕರ್ತವ್ಯಲೋಪವನ್ನು ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಬೇಕು ಮತ್ತು ಕರ್ತವ್ಯ ನಿರ್ಲಕ್ಷ್ಯ ತೋರಿದ ವೈದ್ಯರ ವಿರುದ್ಧ ಕಠಿಣ ಶಿಸ್ತುಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
