ನವದೆಹಲಿ: ಚೀನಾದಲ್ಲಿ(China Virus) ಕಂಡು ಬಂದಿರುವ ಹ್ಯೂಮನ್ ಮೆಟಾನ್ಯೂಮೋ ವೈರಸ್ (HMPV) ಹರಡುವ ಬಗ್ಗೆ ಭಯಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯದ (DGHS) ಅಧಿಕಾರಿ ಡಾ ಅತುಲ್ ಗೋಯೆಲ್ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ವೈರಸ್ (Virus) ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಎಲ್ಲಾ ಉಸಿರಾಟದ ಸೋಂಕುಗಳ ವಿರುದ್ಧ ಸಾಮಾನ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ ಸಾಕು ಎಂದು ತಿಳಿಸಿದರು.
ನಾವು ದೇಶದಲ್ಲಿ ಉಸಿರಾಟಕ್ಕೆ ಸಂಬಂಧಿಸಿದಂತೆ ದಾಖಲಾದ ರೋಗಿಗಳ ಡೇಟಾವನ್ನು ವಿಶ್ಲೇಷಿಸಿದ್ದೇವೆ. ಡಿಸೆಂಬರ್ 2024ರ ಡೇಟಾದಲ್ಲಿ ಯಾವುದೇ ಗಣನೀಯ ಹೆಚ್ಚಳ ಕಂಡುಬಂದಿಲ್ಲ. ನಮ್ಮ ಯಾವುದೇ ಸಂಸ್ಥೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಕೇಸ್ ದಾಖಲಾದ ಬಗ್ಗೆ ವರದಿಯಾಗಿಲ್ಲ ಎಂದು ಹೇಳಿದರು.
HMPVಗೆ ಯಾವುದೇ ನಿರ್ದಿಷ್ಟ ಆಂಟಿವೈರಲ್ ಚಿಕಿತ್ಸೆ ಇಲ್ಲ, ಆದ್ದರಿಂದ ಅದರ ಹರಡುವಿಕೆಯನ್ನು ನಿಯಂತ್ರಿಸಲು ತಡೆಗಟ್ಟುವಿಕೆ ಮುಖ್ಯವಾಗಿದೆ. ಚೀನಾದಲ್ಲಿ HMPV ಏಕಾಏಕಿ ಹರಡಿರುವ ಬಗ್ಗೆ ಸುದ್ದಿಗಳಿವೆ. ಇದು ಯಾವುದೇ ಇತರ ಉಸಿರಾಟದ ವೈರಸ್‌ನಂತೆ ಸಾಮಾನ್ಯ ಶೀತವನ್ನು ಉಂಟುಮಾಡುತ್ತದೆ ಮತ್ತು ವಯಸ್ಸಾದವರಲ್ಲಿ ಮತ್ತು ಚಿಕ್ಕವರಲ್ಲಿ ಇದು ಜ್ವರಕ್ಕೆ ಕಾರಣವಾಗಬಹುದು ಎಂದು ವಿವರಿಸಿದರು. ಇದನ್ನೂ ಓದಿ: ಚೀನಾದಲ್ಲಿ ಆರ್ಭಟಿಸುತ್ತಿದೆ ಹೊಸ ವೈರಸ್| ಸಾವಿರಾರು ಮಂದಿ ಆಸ್ಪತ್ರೆ ಪಾಲು – ವೈರಸ್ ಲಕ್ಷಣಗಳೇನು?
ಚಳಿಗಾಲದಲ್ಲಿ ಉಸಿರಾಟದ ವೈರಸ್ ಸೋಂಕುಗಳು ಉಲ್ಬಣವಾಗುವುದು ಸಾಮಾನ್ಯ. ಯಾರಿಗಾದರೂ ಕೆಮ್ಮು ಮತ್ತು ಶೀತ ಇದ್ದರೆ ಅವರು ಇತರ ಜನರೊಂದಿಗೆ ಸಂಪರ್ಕಕ್ಕೆ ಬರುವುದನ್ನು ತಪ್ಪಿಸಬೇಕು. ಕೆಮ್ಮು, ಶೀತ ಬಂದಾಗ ಪ್ರತ್ಯೇಕ ಕರವಸ್ತ್ರ ಅಥವಾ ಟವೆಲ್ ಬಳಸಿ ಎಂದು ಸಲಹೆ ನೀಡಿದರು.
ಕೇಂದ್ರ ಆರೋಗ್ಯ ಸಚಿವಾಲಯದ ಅಡಿಯಲ್ಲಿ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (NCDC) ಉಸಿರಾಟದ ಪ್ರಕರಣಗಳನ್ನು ಮೇಲ್ವಿಚಾರಣೆ ಮಾಡುತ್ತಿದೆ ಮತ್ತು ಅಂತರರಾಷ್ಟ್ರೀಯ ಏಜೆನ್ಸಿಗಳೊಂದಿಗೆ ಸಂಪರ್ಕದಲ್ಲಿದೆ.