Connect with us

Davanagere

ಬೆಂಬಲಿಗರಿಗೆ ಅವಾಚ್ಯ ಪದಗಳಿಂದ ನಿಂದಿಸಿದ ನಿರಂಜನಾನಂದಪುರಿ ಸ್ವಾಮೀಜಿ- ಆಡಿಯೋ ವೈರಲ್

Published

on

ದಾವಣಗೆರೆ: ಕನಕ ಗುರು ಪೀಠ ಶಾಖಾ ಮಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಆವಾಚ್ಯ ಶಬ್ದಗಳನ್ನು ಬಳಸಿದ ಆಡಿಯೋ ಈಗ ಸಖತ್ ವೈರಲ್ ಆಗಿದೆ.

ದಾವಣಗೆರೆ ಜಿಲ್ಲೆ, ಹರಿಹರ ತಾಲೂಕಿನ ಬೆಳ್ಳೂಡಿ ಸಮೀಪದ ಕನಕ ಗುರು ಪೀಠ ಶಾಖಾ ಮಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಅವಾಚ್ಯ ಶಬ್ದ ಬಳಸಿ ಬಾಯಿಗೆ ಬಂದಂತೆ ಮಾತನಾಡಿರುವ ಆಡಿಯೋ ಎಲ್ಲೆಡೆ ಹರಿದಾಡ್ತಿದೆ. ಜೂನ್ 2 ರಂದು ಬೆಳ್ಳೂಡಿ ಮಠದಲ್ಲಿ ಆಯೋಜಿಸಿದ್ದ ಕುರುಬ ಸಮಾಜದ ಮುಖಂಡರ ಸಭೆಯಲ್ಲಿ ಸೊಂಟದ ಕೆಳಗಿನ ಭಾಷೆ ಬಳಸಿ ಒಬ್ಬ ರೌಡಿಯಂತೆ ವರ್ತಿಸಿರುವುದನ್ನ ರೆಕಾರ್ಡ್ ಮಾಡಿ ವಾಟ್ಸಪ್‍ನಲ್ಲಿ ಹರಿಬಿಟ್ಟಿದ್ದಾರೆ.

ಹರಿಹರ ತಾಲೂಕು ಕುರುಬ ಸಮುದಾಯದ ಕೆಲ ನಾಯಕರು ವಿಧಾನಸಭಾ ಕ್ಷೇತ್ರದ ಟಿಕೆಟ್ ಗಾಗಿ ಸ್ವಾಮೀಜಿ ಹಿಂದೆ ದುಂಬಾಲು ಬಿದಿದ್ದಾರೆ. ಅಲ್ಲದೆ ಮುಖಂಡರು ಬಹಿರಂಗವಾಗಿ ಕಿತ್ತಾಡುತ್ತಿದ್ದನ್ನ ಕಂಡಿದ್ದ ನಿರಂಜನಾನಂದಪುರಿ ಸ್ವಾಮೀಜಿ, ನಿಮ್ಮಂಥವರಿಂದಲೇ ಸಮಾಜದ ಮರ್ಯಾದೆ ಹಾಳಾಗಿರೋದು. ನಾನು ಮನಸ್ಸು ಮಾಡಿದ್ರೆ ಲಿಂಗಾಯಿತರನ್ನ ಎಂಎಲ್‍ಎ ಮಾಡ್ತಿನಿ ನೋಡ್ತಿರಾ. ನಾಚಿಕೆ ಆಗಲ್ವಾ, ಹೊಟ್ಟೆಗೆ ಅನ್ನ ತಿಂತಿರೋ ಏನ್ ತಿಂತಿರೋ. ಯಾವನ್ ಗೆಲ್ತಿರೋ ಗೆಲ್ರೋ ನೋಡೋಣ ಅಂತ ಫುಲ್ ಗರಂ ಆಗಿರೋದು ಆಡಿಯೋದಲ್ಲಿದೆ.

ಜೂನ್ 2 ರಂದು ಮಠಕ್ಕೆ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಭೇಟಿ ನೀಡಿದ್ರು. ಈಶ್ವರಪ್ಪ ನೇತೃತ್ವದಲ್ಲಿ ಸಭೆ ಮುಗಿದ ಬಳಿಕ ಮಾಧ್ಯಮದವರನ್ನ ಹೊರಗಿಟ್ಟು ಸಭೆ ಮುಂದುವರಿಸಿದ ನಿರಂಜನಾನಂದಪುರಿ ಸ್ವಾಮೀಜಿ ಸಮಾಜದ ಮುಖಂಡರಿಗೆ ಸೊಂಟದ ಕೆಳಗಿನ ಭಾಷೆ ಬಳಸಿ ನಿಂದಿಸಿದ್ದಾರೆ. ಒಬ್ಬ ಖಾವಿಧಾರಿಯಾಗಿ ಹೀಗೆ ಪದ ಬಳಕೆ ಮಾಡಿರೋದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಸ್ವಾಮೀಜಿ ಭಕ್ತರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಕ್ಕೆ ರಾಜ್ಯದ ಹಲವು ಮಠದ ಪೀಠಾಧ್ಯಕ್ಷರು ಅವರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಧಾರವಾಡದಲ್ಲಿ ಕೂಡಲ ಸಂಗಮ ಪೀಠದ ಪೀಠಾಧ್ಯಕ್ಷೆ ಮಾತೇ ಮಹಾದೇವಿ ಹೇಳಿಕೆ ನೀಡಿದ್ದು, ಸ್ವಾಮೀಜಿಗಳು ಅತ್ಯಂತ ಸೌಜನ್ಯದಿಂದ ಮಾತನಾಡಬೇಕು. ಸ್ವಾಮೀಜಿಗಳು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದು, ಖಾವಿಧಾರಿಗಳಿಗೆ ಅವಮಾನ ಮಾಡಿದ್ದಾರೆ ಎಂದು ಹೇಳಿದ ಮಾತೆ, ಈ ರೀತಿ ನಿಂದನೆ ಮಾಡಿ ಸ್ವಾಮೀಜಿ ಭಕ್ತರಿಗೆ ನೋವುಂಟು ಮಾಡಿದ್ದಾರೆ ಎಂದು ಹೇಳಿದರು.

ಇನ್ನೊಂದೆಡೆ ಕುಡುಬ ಮಠವಾದ ರೇವಣಸಿದ್ದೇಶ್ವರ ಮಠದ ಬಸವರಾಜ್ ದೇವ್ರು ಸ್ವಾಮೀಜಿ ಕೂಡಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿರಂಜನಾನಂದ ಸ್ವಾಮೀಜಿ ತಮ್ಮ ಹೇಳಿಕೆ ವಾಪಸ್ ಪಡೆಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರುವ ಅವರು, ಕನಕ ಗುರು ಪೀಠದ ಸ್ವಾಮೀಜಿಗಳ ಬಗ್ಗೆ ಭಕ್ತರಾಗಿರುವ ಸಿಎಂ ಸಿದ್ಧರಾಮಯ್ಯ ಹಾಗೂ ಎಚ್‍ಎಂ ರೇವಣ್ಣ ತಮ್ಮ ನಿಲುವನ್ನ ತಿಳಿಸಲಿ ಎಂದು ಹೇಳಿದರು.

ಈ ಬಗ್ಗೆ ದಾವಣಗೆರೆಯಲ್ಲಿ ಕಾಗಿನೆಲೆ ಪೀಠದ ಭಕ್ತ ಮಂಡಳಿ ಸುದ್ದಿಗೋಷ್ಠಿ ನಡೆಸಿದ್ದು, ಯಾರೋ ಕಿಡಿಗೇಡಿಗಳು, ಮಠದ ಏಳಿಗೆಯನ್ನು ಸಹಿಸದ ವ್ಯಕ್ತಿಗಳು ಈ ರೀತಿ ಮಾಡಿದ್ದಾರೆ. ಸ್ವಾಮೀಜಿಯವರು ಸಮಾಜದ ಏಳಿಗೆಗಾಗಿ ಶ್ರಮಿಸಿದವರು. ಸಮಾಜವನ್ನು ತಿದ್ದಲು ಈ ರೀತಿ ಪದ ಬಳಕೆ ಮಾಡಿದ್ದು, ಅದನ್ನು ಬಿಟ್ಟು ಬೇರೆ ಕಾರಣಕ್ಕೆ ಅಲ್ಲ ಎಂದು ಭಕ್ತ ಮಂಡಳಿಯ ಸದಸ್ಯ ಮಹೇಶ್ವರಪ್ಪ ಹೇಳಿದ್ರು. ಅಲ್ಲದೆ ಹರಿಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದ್ರು.

https://www.youtube.com/watch?v=6KrNjQ-Ih6U

Click to comment

Leave a Reply

Your email address will not be published. Required fields are marked *