– ಅಮಾಯಕರ ಮೇಲೆ ಸುಳ್ಳು ಪ್ರಕರಣ ಎಂದ ನಿಖಿಲ್
ಚಿಕ್ಕಬಳ್ಳಾಪುರ: ಬಂಧನಕ್ಕೊಳಗಾಗಿರುವ ಜೆಡಿಎಸ್ (JDS) ಹಾಗೂ ಬಿಜೆಪಿ(BJP) ಕಾರ್ಯಕರ್ತರನ್ನು ಭೇಟಿ ಮಾಡಿದ ನಿಖಿಲ್ ಕುಮಾರಸ್ವಾಮಿ(Nikhil Kumaraswamy), ಪೊಲೀಸರ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಮಾಯಕರ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಜೆಡಿಎಸ್ ಕಾರ್ಯಕರ್ತ ಅಖಿಲ್ ರೆಡ್ಡಿ ಬಂಧನದ ಹಿನ್ನೆಲೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸೋಮವಾರ ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡಿದ್ದರು. ಮೊದಲು ಅಖಿಲ್ ರೆಡ್ಡಿ ಅವರ ಮನೆಗೆ ಭೇಟಿ ನೀಡಲು ನಿಗದಿಯಾಗಿದ್ದರೂ, ಬಳಿಕ ಕಾರ್ಯಕ್ರಮದಲ್ಲಿ ಬದಲಾವಣೆ ಮಾಡಿ ಮಧ್ಯಾಹ್ನ 1 ಗಂಟೆಗೆ ಚಿಕ್ಕಬಳ್ಳಾಪುರ ತಾಲೂಕಿನ ಕನಕನೂರು ಸಮೀಪದ ಜಿಲ್ಲಾ ಕಾರಾಗೃಹಕ್ಕೆ ತೆರಳಿದ್ದಾರೆ.
ಜೈಲಿನಲ್ಲಿರುವ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರನ್ನು ಭೇಟಿ ಮಾಡಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಒಟ್ಟು 9 ಮಂದಿ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಈ ವೇಳೆ ಜೆಡಿಎಸ್ ಶಾಸಕ ರವಿ, ಮಾಜಿ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ, ತೂಪಲ್ಲಿ ಚೌಡರೆಡ್ಡಿ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ಮುಕ್ತ ಮುನಿಯಪ್ಪ ಸೇರಿದಂತೆ ಹಲವು ಮುಖಂಡರು ನಿಖಿಲ್ ಕುಮಾರಸ್ವಾಮಿ ಅವರೊಂದಿಗೆ ಇದ್ದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ನಮ್ಮ ಪಕ್ಷದ ನಾಯಕರ ಬಗ್ಗೆ ಶಾಸಕ ಪ್ರದೀಪ್ ಈಶ್ವರ್ ಅವಹೇಳನಕಾರಿಯಾಗಿ ಮಾತನಾಡಿದ್ದರು. ಅದೇ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಯಿತು. ಪೊಲೀಸರು ಅಮಾಯಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅವರನ್ನು ಬೆದರಿಸುವ ಪ್ರಯತ್ನ ಮಾಡಲಾಗುತ್ತಿದೆ. ಜೈಲಿನಲ್ಲಿರುವವರು ಅಪರಾಧ ಮಾಡುವ ಮನಸ್ಥಿತಿಯವರಲ್ಲ ಎಂದು ಆರೋಪಿಸಿದರು.
ಪೊಲೀಸರ ಮೇಲೆ ರಾಜಕೀಯ ಒತ್ತಡ ಹೇರಲಾಗಿದೆ. ಸರ್ಕಾರಗಳು ಬರುತ್ತವೆ, ಹೋಗುತ್ತವೆ. ಯಾರೂ ಶಾಶ್ವತ ಅಲ್ಲ. ಹೀಗಾಗಿ ಅಧಿಕಾರ ದುರುಪಯೋಗ ಮಾಡಬಾರದು ಎಂದು ಎಚ್ಚರಿಕೆ ನೀಡಿದರು.ಇದನ್ನೂ ಓದಿ: ಪತಿಗಿಂತ ಹೆಚ್ಚು ದುಡಿಯುವ ಪತ್ನಿಗೆ ಪತಿ ಜೀವನಾಂಶ ನೀಡಬೇಕಿಲ್ಲ: ಹೈಕೋರ್ಟ್
ಬಂಧಿತ ಕಾರ್ಯಕರ್ತರ ಬಿಡುಗಡೆಗಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಈಗಾಗಲೇ ಪ್ರಯತ್ನ ನಡೆಸಿದ್ದಾರೆ. ಕಾರ್ಯಕರ್ತರು ಯಾವುದೇ ಆತಂಕ ಅಥವಾ ಭಯಪಡಬೇಕಿಲ್ಲ. ಸರ್ಕಾರದ ಒತ್ತಡಕ್ಕೆ ಮಣಿದು ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ಜೆಡಿಎಸ್ ಕಾರ್ಯಕರ್ತ ಅಖಿಲ್ ರೆಡ್ಡಿ ಸೇರಿದಂತೆ ಹಲವು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದರು.ಇದನ್ನೂ ಓದಿ: ದೆಹಲಿಯಲ್ಲಿ ಹೊಸ ಇವಿ ಕಾರುಗಳಿಗೆ ಸಿಗಲಿದೆ 1 ಲಕ್ಷದವರೆಗೆ ರಿಯಾಯಿತಿ – ಗ್ರಾಹಕರಿಗೆ ಭರ್ಜರಿ ಸಬ್ಸಿಡಿ ಭಾಗ್ಯ!
