ಇಂಫಾಲ್: ಮಣಿಪುರದಲ್ಲಿ (Manipur) ಈ ವರ್ಷ ಜನವರಿಯಲ್ಲಿ ನಾಲ್ವರು ನಾಗರಿಕರನ್ನು ಗುಂಡಿಕ್ಕಿ ಹತ್ಯೆಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‍ಐಎ (NIA) ಅಧಿಕಾರಿಗಳು ಓರ್ವ ಉಗ್ರನನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಲುನ್ಮಿನ್ಸೆ ಕಿಪ್ಜೆನ್ ಎಂದು ಗುರುತಿಸಲಾಗಿದೆ. ಜ.18 ರಂದು ಬಿಷ್ಣುಪುರದ ನಿಂಗ್‍ತೌಖೋಂಗ್ ಖಾ ಖುನೌ ಎಂಬಲ್ಲಿ ನೀರು ಸಂಸ್ಕರಣಾ ಘಟಕದ ಬಳಿ ಶಸ್ತ್ರ ಸಜ್ಜಿತ ಗುಂಪು ನಾಲ್ವರು ನಾಗರಿಕರನ್ನು ಬರ್ಬರವಾಗಿ ಹತ್ಯೆಗೈದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಗುವಾಹಟಿಯ ಲೋಹ್ರಾ ಸೆಂಟ್ರಲ್ ಜೈಲಿನಿಂದ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಬಂಧಿಸಲಾಗಿದೆ ಎಂದು ಎನ್‍ಐಎ ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿಕೋರರು ಅತ್ಯಾಧುನಿಕ ಬಂದೂಕುಗಳಿಂದ ಜನರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಇದು ನಾಗರಿಕರ ಸಾವಿಗೆ ಕಾರಣವಾಗಿತ್ತು. ಈಶಾನ್ಯ ರಾಜ್ಯದಲ್ಲಿ ನಡೆಯುತ್ತಿರುವ ಜನಾಂಗೀಯ ಗಲಭೆ ಮತ್ತು ಹಿಂಸಾಚಾರದ ಭಾಗವಾಗಿದ್ದ ದಾಳಿಯಲ್ಲಿ ಲುನ್ಮಿನ್ಸೆ ಕಿಪ್ಜೆನ್ ಸಕ್ರಿಯವಾಗಿ ಪಾಲ್ಗೊಂಡಿದ್ದ. ಈತ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಮೊದಲ ಆರೋಪಿಯಾಗಿದ್ದಾನೆ ಎಂದು ಎನ್‍ಐಎ ಅಧಿಕಾರಿಗಳು ತಿಳಿಸಿದ್ದಾರೆ.