ಬೆಂಗಳೂರು: ಶಾಸಕರ ಖಾಸಗಿತನ ಹಾಗೂ ಶಾಸಕರ ಭವನದ ದುರ್ಬಳಕೆ ತಡೆಯಲು ಸ್ಪೀಕರ್ ರಮೇಶ್ ಕುಮಾರ್ ಹೊಸ ನಿಯಮವನ್ನು ಜಾರಿಗೆ ತಂದಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಅವರು, ಶಾಸಕರ ಭವನದ ಭೇಟಿಯ ಸಮಯವನ್ನು ಬೆಳಗ್ಗೆ 9 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಮಾತ್ರ ನಿಗಧಿ ಮಾಡಲಾಗಿದೆ. ಈ ಸಮಯ ಬಿಟ್ಟು ಶಾಸಕರ ಭವನದಲ್ಲಿ ಶಾಸಕರ ಕುಟುಂಬ ಸದಸ್ಯರು ಬಿಟ್ಟು ಇನ್ನು ಯಾರಿಗೂ ಪ್ರವೇಶವಿಲ್ಲ ಎಂದು ಹೇಳಿದರು.
ಹೊಸ ನಿಯಾಮವಳಿ ಅನ್ವಯ ಪಾಸ್ ಹೊರತಾಗಿ ಬರುವ ಖಾಸಗಿ ವಾಹನಗಳಿಗೂ ನಿರ್ಬಂಧ ಹೇರಲಾಗುತ್ತದೆ. ಶಾಸಕರ ಭವನ ದುರ್ಬಳಕೆ ಆಗುತ್ತಿದೆ ಎಂದು ದೂರು ಬಂದ ಹಿನ್ನೆಲೆಯಲ್ಲಿ ಇಂತಹ ನಿರ್ಧಾರ ಮಾಡಿದ್ದು, ಇಂದಿನಿಂದಲೇ ಈ ನಿಯಮ ಜಾರಿಗೆ ಬರುತ್ತೆ. ಇನ್ನು ಮುಂದೆ ಇಂತಹವುಗಳಿಗೆ ಹೇಗೆ ಕಡಿವಾಣ ಹಾಕುತ್ತೇನೆ ನೋಡಿ ಎಂದು ಹೇಳಿದರು.
ಇದೇ ವೇಳೆ ಸರ್ಕಾರದ ಗೊಂದಲಗಳ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ರಮೇಶ್ ಕುಮಾರ್ ಅವರು, ನಾನು ಸ್ಪೀಕರ್ ಆಗಿದ್ದು ಸದನ ನಡೆಸುವುದು ನನ್ನ ಕೆಲಸ ಅಷ್ಟೇ. ಆದರೆ ಶಾಸಕರ ಹಾಜರಾತಿಗಾಗಿ ಬಯೋ ಮೆಟ್ರಿಕ್ ವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸ್ಪೀಕರ್ ಈ ಬಗ್ಗೆ ಯಾವುದೇ ಚಿಂತನೆ ಇಲ್ಲ. ಈಗಲೇ ಶಾಸಕರು ಬರೋದಿಲ್ಲ ಅಂತ ಹೇಳೋದು ಬೇಡ. ಶಾಸಕರು ಎಂಪ್ಲಾಯ್ ಗಳು ಅಲ್ಲ. ಅವರು ಜನ ಪ್ರತಿನಿಧಿಗಳು ಎಂದು ಹೇಳುವ ಮೂಲಕ ಬಯೋ ಮೆಟ್ರಿಕ್ ವ್ಯವಸ್ಥೆ ಜಾರಿಯನ್ನು ವಿರೋಧಿಸಿದರು.