ಬೆಂಗಳೂರು: ‘ಅಯೋಗ್ಯ’ ಸಿನಿಮಾ ಚಿತ್ರೀಕರಣ ಪೂರ್ಣಗೊಂಡು ಬಿಡುಗಡೆಗೆ ಸಜ್ಜಾಗಿದೆ. ಚಿತ್ರದ ಪ್ರಮೋಷನ್‍ಗೆ ಮುಂದಾಗಬೇಕಾಗಿದ್ದ ಚಿತ್ರದ ನಾಯಕ ನೀನಾಸಂ ಸತೀಶ್ ಬೇರೆಯದ್ದೇ ಕೆಲಸವೊಂದಕ್ಕೆ ಕೈ ಹಾಕಿದ್ದಾರೆ.
‘ನಾನೊಂದು ಹೊಸ ಕೆಲಸ ಮಾಡಲು ಮುಂದಾಗಿದ್ದೇನೆ, ಹೊಸ ಪ್ರಯಾಣ, ಹೊಸ ಯೋಜನೆ’ ಸದ್ಯದಲ್ಲೇ ನಿಮಗೆ ಈ ಬಗ್ಗೆ ಮಾಹಿತಿ ನೀಡುತ್ತೇನೆ ಎಂದು ಈ ಹಿಂದೆ ನಟ ಸತೀಶ್ ಫೆಸ್‍ಬುಕ್ ಲೈವ್‍ನಲ್ಲಿ ಹೇಳಿಕೊಂಡಿದ್ದರು. ಇಂದು ಆ ಹೊಸ ಹೆಜ್ಜೆಯ ಬಗ್ಗೆ ಪರಿಚಯ ಮಾಡಿಕೊಟ್ಟಿದ್ದಾರೆ. ಹಳ್ಳಿಯಿಂದ ಬಂದಿರುವ ಸತೀಶ್ ಅವರು ಹಳ್ಳಿಗಳಿಗಾಗಿ ಏನಾದರೂ ಮಾಡಬೇಕು ಎನ್ನುವ ಹಂಬಲದಿಂದ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.
ಸತೀಶ್ ಅವರ ಹೊಸ ಪ್ರಾಜೆಕ್ಟ್ ಏನು?
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹುಲ್ಲೆಗಾಲ ಹಳ್ಳಿಯನ್ನು ಸತೀಶ್ ಅವರು ದತ್ತು ಪಡೆದುಕೊಂಡಿದ್ದಾರೆ. ಹಳ್ಳಿಗಳ ಸಮಸ್ಯೆಯನ್ನು ಬಗೆಹರಿಸಿ, ಆ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡಬೇಕೆಂಬ ಆಶಯದೊಂದಿಗೆ ಮಹತ್ವದ ಕೆಲಸವೊಂದಕ್ಕೆ ಕೈಹಾಕಿದ್ದಾರೆ. ಈ ವಿಷ್ಯವನ್ನ ಖುದ್ದು ಸತೀಶ್ ಅವರೇ ಫೇಸ್‍ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.
ಟೀಮ್ ಸತೀಶ್ ಪಿಕ್ಚರ್ಸ್ ಅಡಿಯಲ್ಲಿ ಸತೀಶ್ ನೀನಾಸಂ ಅವರ ಸಾರಥ್ಯದಲ್ಲಿ ಹುಲ್ಲೆಗಾಲ ಹಳ್ಳಿಯನ್ನು ದತ್ತು ಪಡೆಯಲಾಗಿದೆ. ಸುಮಾರು 100 ರಿಂದ 150 ಜನ ಸ್ವಯಂ ಸೇವಕರು ಹುಲ್ಲೆಗಾಲಕ್ಕೆ ಭೇಟಿ ನೀಡಿ, ಅಲ್ಲಿನ ಸಮಸ್ಯೆಗಳನ್ನು ಅರಿತು, ಗ್ರಾಮಸ್ಥರ ಜೊತೆ ಚರ್ಚೆ ಮಾಡಿ, ಕುಂದು ಕೊರತೆ ನೀಗಿಸಲು ಶ್ರಮಿಸಲಿದ್ದಾರೆ. ಈಗ ಪ್ರಾಥಮಿಕ ಕೆಲಸಕ್ಕೆ ಚಾಲನೆ ನೀಡಲಾಗಿದೆ.
ಸತೀಶ್ ಅವರ ಜೊತೆ ಯುವಕರು ಕೈಜೋಡಿಸಬಹುದಂತೆ. ಸಹಾಯ ಮಾಡಬೇಕೆಂಬ ತುಡಿತ ಇರುವವರು, ಟೀಮ್ ಸತೀಶ್ ಪಿಕ್ಚರ್ಸ್ ಗೆ ಸೇರಿಕೊಳ್ಳಬಹುದಂತೆ. ಆದರೆ ತಂಡಕ್ಕೆ ಸೇರುವವರಿಗೆ ಕೆಲವೊಂದಿಷ್ಟು ಷರತ್ತುಗಳು ಅನ್ವಯವಾಗುತ್ತವೆ ಎಂದಿದ್ದಾರೆ. ಷರತ್ತು ಏನು ಎನ್ನುವುದನ್ನು ನಂತರದಲ್ಲಿ ತಿಳಿಸುವುದಾಗಿ ಹೇಳಿಕೊಂಡಿದ್ದಾರೆ.
https://www.facebook.com/ActorSathish/videos/1821901211203335/
ಹಳ್ಳಿಯ ಬಗ್ಗೆ ಸತೀಶ್ ಏನಂದ್ರು?
ಹುಲ್ಲೆಗಾಲ ಹಳ್ಳಿಯಲ್ಲಿ ಅನೇಕ ಸಮಸ್ಯೆಗಳಿವೆ. ಆದರೆ ನಮ್ಮ ಮೊದಲು ಹೆಜ್ಜೆ ಶಾಲೆಯನ್ನು ಅಭಿವೃದ್ಧಿ ಮಾಡುವುದಾಗಿದೆ. ಹುಲ್ಲೆಗಾಲ ಶಾಲೆಯಲ್ಲಿ ಓದಿರುವ ಒಬ್ಬ ವಿದ್ಯಾರ್ಥಿ ವಿಜ್ಞಾನಿ ಆಗಿದ್ದಾರೆ. ಮತ್ತೊಬ್ಬರು ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ. ಸುಮಾರು ಜನರು ಆರ್ಥಿಕ ಪರಿಸ್ಥಿತಿ ಸುಧಾರಣೆಗಾಗಿ ಬೆಂಗಳೂರಿಗೆ ಹೋಗಿದ್ದಾರಿಂದ ಇಲ್ಲಿ ಈಗ ಕೇವಲ 600 ಮತದಾರರು ಈ ಹಳ್ಳಿಯಲ್ಲಿದ್ದಾರೆ. ಒಂದೂವರೆ ತಿಂಗಳಿನಲ್ಲಿ ಕೆಲಸ ಆರಂಭಿಸುತ್ತೇವೆ. ಅಷ್ಟೇ ಅಲ್ಲದೇ ಈ ಹಳ್ಳಿಯನ್ನ ಮಾದರಿ ಗ್ರಾಮವಾಗಿ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.