ಅಯೋಧ್ಯೆ ತೀರ್ಪಿಗೂ ಮುನ್ನವೇ 500 ಮಂದಿ ಅರೆಸ್ಟ್

Public TV
2 Min Read
AYODHYA SUPREME

– 12 ಸಾವಿರ ಮಂದಿ ಮೇಲೆ ಹದ್ದಿನ ಕಣ್ಣು
– ಪ್ರಚೋದನಕಾರಿ ಪೋಸ್ಟ್ ಪ್ರಕಟಿಸಬೇಡಿ

ಲಕ್ನೋ: ಇಡೀ ದೇಶವೇ ಎದುರು ನೋಡುತ್ತಿರುವ ಮಹತ್ವದ ಅಯೋಧ್ಯೆ ತೀರ್ಪು ಶೀಘ್ರವೇ ಹೊರಬೀಳಲಿದ್ದು, ರಾಜ್ಯದಲ್ಲಿ ಶಾಂತಿ ಕಾಪಾಡಲು ಮುನ್ನೆಚ್ಚರಿಕಾ ಕ್ರಮವಾಗಿ ತೀರ್ಪಿಗೂ ಮುನ್ನವೇ 500 ಮಂದಿಯನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಹಾಗೆಯೇ 12 ಸಾವಿರ ಮಂದಿ ಮೇಲೆ ಕಣ್ಣಿಟ್ಟಿದ್ದಾರೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ನವೆಂಬರ್ 17ರಂದು ನಿವೃತ್ತಿಹೊಂದಲಿದ್ದಾರೆ. ಅವರ ಅಧಿಕಾರಾವಧಿ ಮುಗಿಯುವ ಮುನ್ನ ಅಯೋಧ್ಯೆ ತೀರ್ಪು ಹೊರಬರಲಿದೆ. ಈ ಹಿನ್ನೆಲೆ ಯಾವುದೇ ಹಿಂಸಾಚಾರ ನಡೆಬಾರದೆಂದು ಉತ್ತರ ಪ್ರದೇಶ ಪೊಲೀಸರು ಸಾಕಷ್ಟು ಮುನ್ನೆಚ್ಚರಿಕಾ ಕ್ರಮವನ್ನು ತೆಗೆದುಕೊಂಡಿದ್ದಾರೆ. ಇದನ್ನೂ ಓದಿ:ಅಯೋಧ್ಯೆ ತೀರ್ಪಿಗಾಗಿ ದೇಶಾದ್ಯಂತ ಕಟ್ಟೆಚ್ಚರ

OP Singh DGP up

ಈ ಸಂಬಂಧ ಉತ್ತರ ಪ್ರದೇಶ ಪೊಲೀಸ್ ಮಹಾನಿರ್ದೇಶಕ ಒಪಿ ಸಿಂಗ್ ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಅಯೋಧ್ಯೆ ತೀರ್ಪಿನ ಬಗ್ಗೆ ಕೋಮುಗಲಭೆ ಎಬ್ಬಿಸುವಂತಹ ಪ್ರಚೋದಕಾರಿ ಕಮೆಂಟ್‍ಗಳು, ಟ್ರೋಲ್‍ಗಳು ಹಾಗೂ ಪೋಸ್ಟ್‌ಗಳು ಹರಿದಾಡದಂತೆ ಕಟ್ಟೆಚ್ಚರ ವಹಿಸಲಾಗಿದೆ ಎಂದು ತಿಳಿಸಿದರು.

ಈಗಾಗಲೇ ಸುಮಾರು 10 ಸಾವಿರ ಸಾಮಾಜಿಕ ವಿರೋಧಿ ಅಂಶಗಳನ್ನು ಪತ್ತೆಹಚ್ಚಿದ್ದೇವೆ. ಹಾಗೆಯೇ ಸಿಆರ್‌ಪಿಸಿ(ಕ್ರಿಮಿನಲ್ ಪ್ರೊಸಿಜರ್ ಕೋಡ್) ನಿಯಮದ ಅನುಸಾರ 450ರಿಂದ 500 ಮಂದಿಯನ್ನು ಬಂಧಿಸಿದ್ದೇವೆ. ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿ ಪ್ರಚೋದನಕಾರಿ ಪೋಸ್ಟ್‌ಗಳನ್ನು ಹರಿಬಿಡುವುದಿಲ್ಲ ಎಂದು 593 ಮಂದಿಯಿಂದ ಸಿಆರ್‍ಪಿಸಿ ಬಾಂಡ್ ಅಡಿಯಲ್ಲಿ ಪೊಲೀಸರು ಸಹಿ ಹಾಕಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿ ಪ್ರಚೋದನಕಾರಿ ಪೋಸ್ಟ್, ಕಮೆಂಟ್ ಮಾಡುವ ಸಾಧ್ಯತೆಯಿರುವ 1,659 ಮಂದಿ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ. ಈ ಹಿಂದೆ ಕೂಡ ಅಯೋಧ್ಯೆ ಪ್ರಕರಣದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಕಮೆಂಟ್, ಪೋಸ್ಟ್ ಮಾಡಿದ 70 ಮಂದಿಯನ್ನು ಬಂಧಿಸಲಾಗಿತ್ತು ಎಂದರು.

social media 2

ಅಯೋಧ್ಯೆ ಸೇರಿ ಹಲವು ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಿದ್ದೇವೆ. ಒಂದು ವೇಳೆ ಅಗತ್ಯವಿದ್ದರೆ ಈ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸುವ, ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸುವ ಅಧಿಕಾರವಿದೆ. ಆದರೆ ನಾವು ಪರಿಸ್ಥಿತಿಯನ್ನು ಈ ರೀತಿ ನಿಷೇಧಗಳನ್ನು ಒಡ್ಡಿ ನಿಯಂತ್ರಿಸುವ ಬದಲು ಜನರು ಗುಂಪು, ಗುಂಪಾಗಿ ನಿಂತು ಅಯೋಧ್ಯೆ ತೀರ್ಪಿನ ಬಗ್ಗೆ ಚರ್ಚೆ ನಡೆಸುವುದು ಹಾಗೂ ಎಲ್ಲೆಡೆ ಪ್ರಚೋದನಕಾರಿ ಹೇಳಿಕೆಗಳನ್ನು ಹರಡುವುದನ್ನು ನಿಲ್ಲಿಸುವುದರ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂದು ಹೇಳಿದರು.

Supreme Court

ಈಗಾಗಲೇ ಅಯೋಧ್ಯೆ ನಗರದಲ್ಲಿ 40 ಪ್ಯಾರಾಮಿಲಿಟರಿ ತಂಡ ಕಾರ್ಯನಿರ್ವಹಿಸುತ್ತಿದೆ. ಇನ್ನೂ 70 ತಂಡದ ಅವಶ್ಯಕತೆಯಿದೆ, ಈ ಪ್ಯಾರಾಮಿಲಿಟರಿ ತಂಡಗಳು ಕೂಡ ಶೀಘ್ರದಲ್ಲೇ ನಗರಕ್ಕೆ ಬರಲಿದೆ.

ಮುಂದಿನ ವಾರ ಅಯೋಧ್ಯೆಯಲ್ಲಿ ಸಾಲು ಸಾಲಾಗಿ ಹಬ್ಬಗಳು ನಡೆಯಲಿವೆ. ನ.10 ರಂದು ಈದ್-ಇ-ಮಿಲಾದ್ ಆಚರಿಸಲಾಗುತ್ತದೆ. ನ. 11ರಿಂದ 13ರವರೆಗೆ ಕಾರ್ತಿಕ ಪೂರ್ಣಿಮೆ ಮೇಳ ನಡೆಯುತ್ತದೆ. ಈ ಆಚರಣೆಗಳು ಶಾಂತಿಯುತವಾಗಿ ನೆರವೇರಬೇಕು. ಆದ್ದರಿಂದ ಸಾರ್ವಜನಿಕರು ಸಹಕರಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *