ವಿಂಡೀಸ್‌ ವಿರುದ್ಧ ಭಾರತಕ್ಕೆ ಹೀನಾಯ ಸೋಲು – ನಾಯಕತ್ವದ ಹೊಣೆ ಹೊತ್ತ ಪಾಂಡ್ಯ ರಿಯಾಕ್ಷನ್‌ ಏನು?

Public TV
3 Min Read
Team India 3 1

ಬ್ರಿಡ್ಜ್‌ಟೌನ್‌: ಟೆಸ್ಟ್‌ ಪಂದ್ಯ ಹಾಗೂ ಮೊದಲ ಏಕದಿನ ಪಂದ್ಯದಲ್ಲಿ ಬಾಳೆಹಣ್ಣು ಸುಲಿದಂತೆ ವಿಂಡೀಸ್‌ (West Indies) ವಿರುದ್ಧ ಜಯ ಸಾಧಿಸಿದ್ದ ಟೀಂ ಇಂಡಿಯಾಕ್ಕೆ (Team India) 2ನೇ ಏಕದಿನ ಪಂದ್ಯದಲ್ಲಿ ಹೀನಾಯ ಸೋಲಾಗಿದೆ. ಈ ಮೂಲಕ ಸತತ 3 ಪಂದ್ಯಗಳಲ್ಲಿ ನೀರಸ ಪ್ರದರ್ಶನ ತೋರಿದ್ದ ವೆಸ್ಟ್ ಇಂಡೀಸ್ ತಂಡ ಕೊನೆಗೂ ಭಾರತದ ವಿರುದ್ಧ ಮೊದಲ ಗೆಲುವು ದಾಖಲಿಸಿ ಸರಣಿಯಲ್ಲಿ 1-1 ರ ಸಮಬಲ ಸಾಧಿಸಿದೆ.

Ind vs WI 2 1

ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ನಲ್ಲಿ ಏಕದಿನ ಸರಣಿಯ 2ನೇ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ 40.5 ಓವರ್‌ಗಳಲ್ಲಿ 181 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡಿತ್ತು. ಅಲ್ಪ ಮೊತ್ತದ ಗುರಿ ಬೆನ್ನತ್ತಿದ್ದ ವೆಸ್ಟ್‌ ಇಂಡೀಸ್‌ 36.4 ಓವರ್‌ಗಳಲ್ಲೇ 4 ವಿಕೆಟ್‌ ನಷ್ಟಕ್ಕೆ 182 ರನ್‌ಗಳಿಸಿ 6 ವಿಕೆಟ್‌ಗಳ ಜಯ ಸಾಧಿಸಿತು. ಇದನ್ನೂ ಓದಿ: T20 WorldCup-2024 ಟೂರ್ನಿಯ ದಿನಾಂಕ ಬಹಿರಂಗ – USA, ವಿಂಡೀಸ್‌ ಆತಿಥ್ಯ

Team India 2 2

ರೋಹಿತ್‌ ಶರ್ಮಾ (Rohit Sharm) ಹಾಗೂ ವಿರಾಟ್‌ ಕೊಹ್ಲಿ 2ನೇ ಪಂದ್ಯದಲ್ಲಿ ಹೊರಗುಳಿದಿದ್ದರಿಂದ ಹಾರ್ದಿಕ್‌ ಪಾಂಡ್ಯ (Hardik Pandya) ತಂಡದ ನಾಯಕತ್ವ ವಹಿಸಿಕೊಳ್ಳಬೇಕಾಯಿತು. ಆರಂಭಿಕರಾಗಿ ಕಣಕ್ಕಿಳಿದ ಶುಭಮನ್‌ ಗಿಲ್‌ ಹಾಗೂ ಇಶಾನ್‌ ಕಿಶನ್‌ ಜೋಡಿ 16.5 ಓವರ್‌ಗಳಲ್ಲಿ 90 ರನ್‌ಗಳ ಜೊತೆಯಾಟ ನೀಡಿತು. ನಂತರ ಕ್ರೀಸ್‌ಗಿಳಿದವರಲ್ಲಿ ಯಾರೊಬ್ಬರು ಸ್ಥಿರವಾಗಿ ಉಳಿಯದ ಕಾರಣ ಟೀಂ ಇಂಡಿಯಾ ಹೀನಾಯ ಸೋಲಿಗೆ ತುತ್ತಾಯಿತು.

Ind vs WI 1

50 ಓವರ್ ಪೂರ್ಣ ಆಡಲಿಲ್ಲ:
ಮೊದಲ ಪಂದ್ಯದಲ್ಲೂ ರೋಹಿತ್ ಮತ್ತು ಕೊಹ್ಲಿ ಅವರ ಬ್ಯಾಟಿಂಗ್ ಇಲ್ಲದೇ ಟೀಂ ಇಂಡಿಯಾ 115 ರನ್​ಗಳ ಗುರಿ ತಲುಪಲು ಸಾಕಷ್ಟು ಕಷ್ಟ ಪಡಬೇಕಾಯಿತು. ಮೊದಲ ಪಂದ್ಯದಲ್ಲಿ‌ ರೋಹಿತ್‌ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಇಳಿದಿದ್ದು ವಿಶೇಷವಾಗಿತ್ತು. 2ನೇ ಏಕದಿನ ಪಂದ್ಯದಲ್ಲೂ ಭಾರತದ ಬ್ಯಾಟಿಂಗ್ ಮತ್ತೆ ಕಳಪೆ ಪ್ರದರ್ಶನ ನೀಡಿತು. ಈ ಬಾರಿ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 40.5 ಓವರ್‌ಗಳಲ್ಲಿ 181 ರನ್‌ಗಳಿಗೆ ಆಲೌಟ್ ಆಯಿತು. ಆದ್ರೆ ಆರಂಭಿಕ ಇಶಾನ್‌ ಕಿಶನ್‌ ಮಾತ್ರ ಬ್ಯಾಕ್‌ ಟು ಬ್ಯಾಕ್‌ ಅರ್ಧಶತಕ ಸಿಡಿಸಿ ಮಿಂಚಿದರು. ಇದನ್ನೂ ಓದಿ: ವಿಶ್ವಕಪ್‌ಗೆ ಅರ್ಹತೆ ಪಡೆಯದ ವಿಂಡೀಸ್‌ ವಿರುದ್ಧ ತಿಣುಕಾಡಿ ಗೆದ್ದ ಭಾರತ

ಟೀಂ ಇಂಡಿಯಾ ಪರ ಇಶಾನ್‌ ಕಿಶನ್‌ 55 ರನ್‌ (55 ಎಸೆತ, 6 ಬೌಂಡರಿ, 1 ಸಿಕ್ಸರ್)‌, ಶುಭಮನ್‌ ಗಿಲ್‌ 34 ರನ್‌ (49 ಎಸೆತ, 5 ಬೌಂಡರಿ) ಸೂರ್ಯಕುಮಾರ್‌ ಯಾದವ್‌ 24 ರನ್‌ ಗಳಿಸಿದರು. ಇನ್ನೂ ವಿಂಡೀಸ್‌ ಜವಾಬ್ದಾರಿಯುತ ಬ್ಯಾಟಿಂಗ್‌ ಪ್ರದರ್ಶನ ನೀಡಿದ ಶಾಯ್‌ ಹೋಪ್‌ (Shai Hope) ಅಜೇಯ 63 ರನ್‌ (80 ಎಸೆತ, 2 ಬೌಂಡರಿ, 2 ಸಿಕ್ಸ್‌), ಕೈಲ್‌ ಮೇಯರ್ಸ್‌ 36 ರನ್‌ (28 ಎಸೆತ, 4 ಬೌಂಡರಿ, 2 ಸಿಕ್ಸರ್‌) ಗಳಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು.

ಈ ಪಂದ್ಯದಲ್ಲಿ ಎರಡೂ ತಂಡಗಳಲ್ಲಿಯೂ ಬೌಲರ್‌ಗಳು ಉತ್ತಮ ಹಿಡಿತ ಸಾಧಿಸಿದ್ದರು ವಿಂಡೀಸ್‌ ಪರ ಗುಡಾಕೇಶ್ ಮೋತಿ, ರೊಮಾರಿಯೋ ಶೆಫರ್ಡ್ ತಲಾ ಮೂರು ವಿಕೆಟ್‌ ಪಡೆದರೆ, ಟೀಂ ಇಂಡಿಯಾ ಪರ ಆಲ್‌ರೌಂಡರ್‌ ಶಾರ್ದೂಲ್‌ ಠಾಕೂರ್‌ 3 ವಿಕೆಟ್‌ ಪಡೆದು ಮಿಂಚಿದರು.

ಪಂದ್ಯದ ಬಳಿಕ ಮಾತನಾಡಿದ ಹಾರ್ದಿಕ್‌ ಪಾಂಡ್ಯ, ನಾವು ಅಂದುಕೊಂಡ ರೀತಿಯಲ್ಲಿ ಬ್ಯಾಟಿಂಗ್ ಮಾಡಲಿಲ್ಲ. ಮೊದಲ ಇನಿಂಗ್ಸ್‌ ಬಳಿಕ 2ನೇ ಇನ್ನಿಂಗ್ಸ್​ಗೆ ವಿಕೆಟ್‌ ಉತ್ತಮವಾಗಿತ್ತು. ಈ ಸೋಲಿನಿಂದ ನಿರಾಸೆಯಾಗಿದೆ. ಆದ್ರೆ ಅನೇಕ ವಿಷಯಗಳನ್ನ ಕಲಿತಿದ್ದೇವೆ. ವಿಶ್ವಕಪ್‌ಗೆ ಸಿದ್ಧವಾಗಲು ನಾನು ಇನ್ನಷ್ಟು ಹೆಚ್ಚು ಓವರ್‌ಗಳನ್ನ ಬೌಲ್ ಮಾಡಬೇಕಾಗಿದೆ. ವಿಶ್ವಕಪ್‌ ವೇಳೆಗೆ ಎಲ್ಲವೂ ಸರಿ ಆಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article